ದೇವಸ್ಥಾನಗಳನ್ನು ಖಾಸಗೀಕರಣ ಮಾಡುತ್ತಿಲ್ಲ; ದೇವಸ್ಥಾನಗಳಿಗೆ ಸ್ವಾಯುತ್ತತೆ ಕೊಡುತ್ತಿದ್ದೇವೆ: ಶಶಿಕಲಾ ಜೊಲ್ಲೆ ಹೇಳಿಕೆ
ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ದೇವಸ್ಥಾನ ಅಭಿವೃದ್ಧಿ ಮಾಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ, ಮಲೈಮಹದೇಶ್ವರ ದೇವಸ್ಥಾನಗಳ ರೀತಿ ಅಭಿವೃದ್ಧಿಯಾಗಬೇಕು ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ನಾವು ದೇವಸ್ಥಾನಗಳನ್ನು ಖಾಸಗೀಕರಣ ಮಾಡುತ್ತಿಲ್ಲ. ನಾವು ದೇವಸ್ಥಾನಗಳಿಗೆ ಸ್ವಾಯತ್ತತೆಯನ್ನ ಕೊಡುತ್ತಿದ್ದೇವೆ ಅಷ್ಟೇ. ಸಮಗ್ರ ಮಾಹಿತಿ ಸಂಗ್ರಹಿಸ್ತಿದ್ದೇವೆ, ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ರಾಜ್ಯದ ದೇವಸ್ಥಾನ ಅಭಿವೃದ್ಧಿ ಮಾಡುತ್ತೇವೆ ಎಂದು ವಿಕಾಸಸೌಧದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದಾರೆ.
ಸಿ ಗ್ರೇಡ್ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತದೆ. ದಾನಿಗಳ ಸಹಾಯದಿಂದ ಅಭಿವೃದ್ಧಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 119 ಕೋಟಿ ಕಳೆದ ಬಜೆಟ್ನಲ್ಲಿ ಇಲಾಖೆಗೆ ಅನುದಾನ ಬಂದಿತ್ತು. ಕರ್ನಾಟಕ ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 168 ಕೋಟಿ ರೂಪಾಯಿ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಒಟ್ಟು 287 ಕೋಟಿ ಅನುದಾನ ನಮ್ಮ ಇಲಾಖೆಗೆ ಬಂದಿದೆ ಎಂದು ಜೊಲ್ಲೆ ಹೇಳಿದ್ದಾರೆ.
ರಾಜ್ಯದಲ್ಲಿ ಎ ಗ್ರೇಡ್ನಲ್ಲಿ 205 ದೇವಸ್ಥಾನ ಇದೆ. ಮೊದಲ ಹಂತದಲ್ಲಿ ಒಟ್ಟು 25 ದೇವಸ್ಥಾನ ಅಭಿವೃದ್ಧಿ ಮಾಡುತ್ತೇವೆ. ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ದೇವಸ್ಥಾನ ಅಭಿವೃದ್ಧಿ ಮಾಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ, ಮಲೈಮಹದೇಶ್ವರ ದೇವಸ್ಥಾನಗಳ ರೀತಿ ಅಭಿವೃದ್ಧಿಯಾಗಬೇಕು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ದೇವಸ್ಥಾನಗಳನ್ನು ಸ್ವತಂತ್ರ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನಗಳನ್ನು ನಾವು ಖಾಸಗೀಕರಣ ಮಾಡುತ್ತಿಲ್ಲ. ನಾವು ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುತ್ತಿದ್ದೇವೆ ಅಷ್ಟೇ. ಈ ವಿಚಾರದ ಬಗ್ಗೆ ಇನ್ನು ಯಾವುದೇ ನಿರ್ಧಾರ ಅಂತಿಮವಾಗಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆ, ಅಲ್ಲಿನ ದೇವಸ್ಥಾನ ಯಾರ ವ್ಯಾಪ್ತಿಯಲ್ಲಿ ಇದೆ ಅನ್ನುವ ಬಗ್ಗೆ ವರದಿ ತೆಗೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಇನ್ನು ಯಾವುದೇ ನಿರ್ಧಾರ ಅಂತಿಮ ಆಗಿಲ್ಲ ಎಂದು ತಿಳಿಸಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ
ಈಗ ಏನು ಆಗುತ್ತಿದೆಯೋ ಅದು ಆಗಬಾರದು. ವಿದ್ಯಾರ್ಥಿಗಳಲ್ಲಿ ಇಂತಹ ಭಾವನೆ ಬರಬಾರದು. ವಿವಿಧೆತೆಯಲ್ಲಿ ಏಕತೆಯ ರಾಷ್ಟ್ರ ನಮ್ಮದು. ವೇಷ ಭೂಷಣಗಳು ಬಹಳ ಭಿನ್ನವಾಗಿದ್ರೂ ಸೌಹಾರ್ದತೆ ಇದೆ. ಈ ಬಗ್ಗೆ ಹೈಕೋರ್ಟ್ ಸೂಕ್ತ ಆದೇಶ ಕೊಡುವ ಭರವಸೆಯಿದೆ. ಸಿಎಂ ಬೊಮ್ಮಾಯಿ ಮತ್ತು ಸಚಿವರು ತೀರ್ಮಾನ ಮಾಡುತ್ತಾರೆ ಎಂದು ಹಿಜಾಬ್ ವಿವಾದದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ದೇಗುಲಗಳಲ್ಲಿ ಗೋಶಾಲೆ ಆರಂಭಿಸಲಾಗುವುದು; ಗೋಪೂಜೆ ಬಳಿಕ ಶಶಿಕಲಾ ಜೊಲ್ಲೆ ಹೇಳಿಕೆ
ಇದನ್ನೂ ಓದಿ: ದಸರಾ ಗಿಫ್ಟ್! ಅರ್ಚಕರು, ಸಿಬ್ಬಂದಿಗೆ 6ನೇ ವೇತನ ಶ್ರೇಣಿ ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ: ಸಚಿವೆ ಶಶಿಕಲಾ ಜೊಲ್ಲೆ
Published On - 2:58 pm, Fri, 4 February 22