ಕರ್ನಾಟಕದ ಮುಜರಾಯಿ ಇಲಾಖೆ ದೇಗುಲಗಳಲ್ಲಿ ಗೋಶಾಲೆ ಆರಂಭಿಸಲಾಗುವುದು; ಗೋಪೂಜೆ ಬಳಿಕ ಶಶಿಕಲಾ ಜೊಲ್ಲೆ ಹೇಳಿಕೆ
ದೇವಸ್ಥಾನಗಳಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗುತ್ತಿದೆ ಎಂದು ಕಪಿಲೇಶ್ವರ ದೇವಸ್ಥಾನದಲ್ಲಿ ಗೋಪೂಜೆ ಸಲ್ಲಿಸಿದ ನಂತರ ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬೆಳಗಾವಿ: ಕರ್ನಾಟಕ ರಾಜ್ಯದ 35,000 ದೇಗುಲಗಳಲ್ಲಿ ಗೋಪೂಜೆ ನೆರವೇರಿಸಲಾಗಿದೆ. ಪ್ರತಿ ವರ್ಷ ದೀಪಾವಳಿಯಂದು ಗೋಪೂಜೆ ಮಾಡಲಾಗುವುದು. ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಗೋಶಾಲೆ ಆರಂಭಿಸಲಾಗುವುದು. ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳಲ್ಲಿ ಗೋಶಾಲೆ ಆರಂಭಿಸುತ್ತೇವೆ. ಗೋಶಾಲೆ ಆರಂಭಿಸುವ ಸಂಬಂಧ 2 ಬಾರಿ ಸಭೆ ನಡೆಸಲಾಗಿದೆ ಎಂದು ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಇಂದು (ನವೆಂಬರ್ 5) ಹೇಳಿಕೆ ನೀಡಿದ್ದಾರೆ.
ಗೋಶಾಲೆ ಆರಂಭಿಸುವ ವಿಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸ್ಪಂದಿಸಿದ್ದು ಆದಷ್ಟು ಬೇಗ ಜಾರಿಗೆ ತರಲಾಗುವುದು. ದೇವಸ್ಥಾನಗಳಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗುತ್ತಿದೆ ಎಂದು ಕಪಿಲೇಶ್ವರ ದೇವಸ್ಥಾನದಲ್ಲಿ ಗೋಪೂಜೆ ಸಲ್ಲಿಸಿದ ನಂತರ ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಪಿಲೇಶ್ವರ ದೇವಸ್ಥಾನದಲ್ಲಿ ಗೋಮಾತೆಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ್ ದೊಡ್ಡಗೌಡರ್ ಮತ್ತಿತರರು ಉಪಸ್ಥಿತರಿದ್ದರು.
ಬಾಲಗಕೋಟೆ ಜಿಲ್ಲೆ ಬಾದಾಮಿ ತಾಲೂಕು ವ್ಯಾಪ್ತಿಯ ಶಕ್ತಿಪೀಠ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಗೋಪೂಜೆ ನೆರವೇರಿಸಲಾಯಿತು. ಸಂಸದ ಪಿ.ಸಿ. ಗದ್ದಿಗೌಡರ್ ಗೋಪೂಜೆಯಲ್ಲಿ ಭಾಗಿಯಾಗಿದ್ದರು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಸೋಮೇಶ್ವರ ದೇವಸ್ಥಾನದಲ್ಲಿ ಗೋಪೂಜೆ ನೆರವೇರಿಸಲಾಯಿತು. ಹೆಚ್ಚುವರಿ ಡಿಸಿ ಸತೀಶ್ ಕುಮಾರ್, ತಹಶೀಲ್ದಾರ್ ಉಪಸ್ಥಿತರಿದ್ದರು. ಮುಜರಾಯಿ ಇಲಾಖೆ ಆದೇಶದಂತೆ ಸಿಬ್ಬಂದಿಯಿಂದ ಗೋಪೂಜೆ ಮಾಡಲಾಯಿತು.
ಇದನ್ನೂ ಓದಿ: ಗೋಪೂಜೆ ಮಾಡಿದ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ, ಸಚಿವ ಕೋಟ ಶ್ರೀನಿವಾಸಪೂಜಾರಿ
ಇದನ್ನೂ ಓದಿ: Diwali Sales: 10 ವರ್ಷದಲ್ಲೇ ದೀಪಾವಳಿಯಲ್ಲಿ ದಾಖಲೆ ಮಾರಾಟ; 1.25 ಲಕ್ಷ ಕೋಟಿ ರೂಪಾಯಿಯಷ್ಟು ಖರೀದಿಸಿದ ಜನರು
Published On - 9:44 pm, Fri, 5 November 21