ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಮತ್ತೋರ್ವ ಬಾಣಂತಿ ಸಾವು!

| Updated By: ರಮೇಶ್ ಬಿ. ಜವಳಗೇರಾ

Updated on: Dec 05, 2024 | 10:53 PM

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನಿಂದ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಮಧ್ಯ ಇಂದು (ಡಿಸೆಂಬರ್ 05) ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಈ ಮೂಲಕ ಒಂದೇ ದಿನ ಹೆರಿಗೆಯಾದವರ 7ರ ಪೈಕಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಮತ್ತೋರ್ವ ಬಾಣಂತಿ ಸಾವು!
Follow us on

ಬಳ್ಳಾರಿ, (ಡಿಸೆಂಬರ್ 05): ಬಳ್ಳಾರಿಯ ಬಿಮ್ಸ್​​ ಆಸ್ಪತ್ರೆಯಲ್ಲಿ ಇಂದು (ಡಿಸೆಂಬರ್ 05) ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಸುಮಹಯ್ಯ ಎನ್ನುವ ಬಾಣಂತಿ ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ 10 ರಂದು ಏಳು ಬಾಣಂತಿಯರ ಹೆರಿಗೆಯಾಗಿತ್ತು. ಇದರಲ್ಲಿ ನಾಲ್ವರು ಈಗಾಗಲೇ ಮೃತಪಟ್ಟಿದ್ದು, ಇದೀಗ ಮತ್ತೋರ್ವ ಬಾಣಂತಿ ಸುಮಯ್ಯ ಸಾವನ್ನಪ್ಪಿದ್ದಾರೆ. ಈ ಮೂಲಕ ಒಂದೇ ದಿನ ಹೆರಿಗೆಯಾದವರ 7 ಬಾಣಂತಿಯರ ಪೈಕಿ ಐವರು ಮೃತಪಟ್ಟಂತಾಗಿದ್ದು, ಇನ್ನುಳಿದ ಇಬ್ಬರು ಡಿಸ್ಚಾರ್ಜ ಆಗಿದ್ದಾರೆ.

ಕಿಡ್ನ ಸಮಸ್ಯೆಯಿಂದ ಬಳಲುತ್ತಿದ್ದ ಸುಮಹಯ್ಯ ಅವರಿಗೆ ನಿತ್ಯ ಡಯಾಲಿಸಸ್ ಮಾಡಲಾಗುತ್ತಿತ್ತು. ಆದ್ರೆ, ಇಂದು ತೀವ್ರವಾದ ತೊಂದರೆಯಾದ ಹಿನ್ನಲೆ ಚಿಕಿತ್ಸೆ ಫಲಕಾರಿಯಾಗದೇ ಸುಮಯ್ಯ ಕೊನೆಯುಸಿರೆಳೆದಿದ್ದಾರೆ. ಬಾಣಂತಿಯರಿಗೆ ನೀಡಿದ್ದ ಗ್ಲೂಕೋಸ್‌ನಿಂದಲೇ ಅವರು ಸಾವು ಕಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಸಾವು ಕಂಡ ನಾಲ್ವರು ಬಾಣಂತಿಯರಿಗೆ ನೀಡಲಾಗಿದ್ದ ಕಳಪೆ ಐವಿ ದ್ರಾವಣವೇ ಕಾರಣ ಎನ್ನಲಾಗಿದ್ದು, ಇದರ ಬೆನ್ನಲ್ಲಿಯೇ ಆಸ್ಪತ್ರೆಯಲ್ಲಿ ಐವಿ ಫ್ಲ್ಯೂಡ್ಸ್‌ ನೀಡೋದನ್ನು ಸ್ಥಗಿತ ಮಾಡಲಾಗಿತ್ತು. ತನಿಖಾ ವರದಿಯಲ್ಲಿ ಕಳಪೆ ದ್ರಾವಣ ಬಗ್ಗೆ ಉಲ್ಲೇಖವಾಗಿದೆ. ಕಳಪೆ ಗ್ಲೂಕೋಸ್​​ನಿಂದ ಬಾಣಂತಿಯರ ಸಾವಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ: ಐವಿ ಗ್ಲುಕೋಸ್​ನಲ್ಲಿ ಆಘಾತಕಾರಿ ಅಂಶ ಪತ್ತೆ

ಈ ಐವಿ ಫ್ಲ್ಯೂಡ್ಸ್‌ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಸರಬರಾಜು ಮಾಡಿತ್ತು. ನಾಲ್ವರು ಬಾಣಂತಿಯರಿಗೆ ಸಾವಿಗೆ ಕೆಎಸ್ಎಂಎಸ್ ಸಿಎಲ್ ನೀಡಿದ್ದ ಔಷಧಿ ಕಾರಣವೇ ಎನ್ನುವ ಅನುಮಾನ ಬಂದಿದೆ. ಸಿಜರೀನ್ ಬಳಿಕ ಐವಿ ಫ್ಲೂಯಿಡ್ ಹಾಗೂ ಎನ್‌ಎಸ್ ಎಲ್ ಗ್ಲೂಕೋಸ್ ಅನ್ನು ವೈದ್ಯರು ಹಾಕಿದ್ದರು. ಇವುಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಸರಬರಾಜು ಮಾಡಲಾಗಿತ್ತು.

ನವೆಂಬರ್ 9ರಂದು 10ಕ್ಕೂ ಹೆಚ್ಚು ಮಹಿಳೆಯರ ಸಿಸರೀನ್ ಮಾಡಲಾಗಿತ್ತು. ಹೆರಿಗೆ ಬಳಿಕ ಎಲ್ಲಾರಿಗೂ ಗ್ಲೂಕೋಸ್ ಹಾಕಲಾಗಿತ್ತು, ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲಿಗೆ ನಂದಿನಿ ಹಾಗೂ ಲಲಿತಮ್ಮ ಸಾವಾಗಿತ್ತು. ಕೂಡಲೇ ಇನ್ನುಳಿದ ಬಾಣಂತಿಯರನ್ನ ಬಿಮ್ಸ್ ಗೆ ರವಾನೆ ಮಾಡಲಾಗಿತ್ತು. ನಂತರ ವಾರದೊಳಗೆ ಇನ್ನಿಬ್ಬರು ಬಾಣಂತಿ ರೋಜಮ್ಮ ಮುಸ್ಕಾನ್ ಸಾವಾಗಿತ್ತು.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಕಳಿಸಿದ್ದ ಗ್ಲೂಕೋಸ್‌ಗಳೇ ಇದಕ್ಕೆ ಕಾರಣ ಎಂದು ಅಧಿಕಾರಿ ವಲಯ ಹೇಳುತ್ತಿದೆ. ಪಶ್ಚಿಮ ಬಂಗಾಳ ಮೂಲದ ಒಂದು ಖಾಸಗಿ ಮೆಡಿಕಲ್ ಸಪ್ಲೆ ಕಂಪನಿಯಿಂದ ಈ ಗ್ಲೂಕೋಸ್ ಖರೀದಿಸಲಾಗಿತ್ತು ಎನ್ನಲಾಗಿದೆ. ಒಮ್ಮೆ ಈ ಪಶ್ಚಿಮ ಬಂಗಾಳ ಮೂಲದ ಮೆಡಿಸಿನ್ ಸಪ್ಲೆ ಕಂಪನಿಯನ್ನ ಬ್ಲಾಕ್ ಲೀಸ್ಟ್ ಗೆ ಹಾಕಲಾಗಿತ್ತು. ಈ ಕಂಪನಿ ನೀಡಿದ ಮೆಡಿಸಿನ್ ಪಡೆದು ತುಮಕೂರಿನಲ್ಲೂ ಹಲವರು ಸಾವಿಗೀಡಾಗಿದ್ದರು ಅನ್ನೋ ವರದಿಗಳಿವೆ. ಅಲ್ಲದೇ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲೂ ಮೂವರು ಬಾಣಂತಿಯರು ಮೃತಪಟ್ಟಿದ್ದು, ಈ ಐವಿ ಫ್ಲೂಯಿಡ್ ಹಾಗೂ ಎನ್‌ಎಸ್ ಎಲ್ ಗ್ಲೂಕೋಸ್‌ಗಳಿಂದಲೇ ಪ್ರಾಣತೆತ್ತಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.

Published On - 10:38 pm, Thu, 5 December 24