ಹಂಪಿ ವಿರೂಪಾಕ್ಷ ದೇವಾಲಯ ಕಂಬಕ್ಕೆ ಮೊಳೆ ಹೊಡೆದ ದತ್ತಿ ಇಲಾಖೆಗೆ ಪುರಾತತ್ವ ಇಲಾಖೆ ನೋಟಿಸ್

| Updated By: ಆಯೇಷಾ ಬಾನು

Updated on: Nov 12, 2023 | 12:02 PM

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ವಿರೂಪಾಕ್ಷ ದೇವಾಲಯದ ಕಂಬಕ್ಕೆ ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ಈ ಸಂಬಂಧ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು ಸ್ಮಾರಕಗಳಿಗೆ ಧಕ್ಕೆ ಆಗಿದೆ ಎಂದು ನೋಟಿಸ್ ಜಾರಿ ಮಾಡಿದೆ. 57 ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತವೆ‌. 1986ರಲ್ಲೇ ವಿಶ್ವ ಪಾರಂಪರಿಕ ಪಟ್ಟಿಗೆ ಹಂಪಿ ಸೇರಿತ್ತು.

ಹಂಪಿ ವಿರೂಪಾಕ್ಷ ದೇವಾಲಯ ಕಂಬಕ್ಕೆ ಮೊಳೆ ಹೊಡೆದ ದತ್ತಿ ಇಲಾಖೆಗೆ ಪುರಾತತ್ವ ಇಲಾಖೆ ನೋಟಿಸ್
ಹಂಪಿ ವಿರೂಪಾಕ್ಷ ದೇವಾಲಯ
Follow us on

ಬಳ್ಳಾರಿ, ನ.12: ಹಂಪಿ (Hampi)ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಡ್ರಿಲ್ ಹೊಡೆದು ಮೊಳೆ ಹೊಡೆದ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಪುರಾತತ್ವ ಇಲಾಖೆ (Archeology Department) ಆಕ್ಷೇಪ ವ್ಯಕ್ತಪಡಿಸಿದೆ. ಯುನೆಸ್ಕೋ ವಿಶ್ವ ಪರಂಪರೆಯ ಐತಿಹಾಸಿಕ ತಾಣ, 7ನೇ ಶತಮಾನದ ಶಿವನ ದೇವಾಲಯವಾಗಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ವಿರೂಪಾಕ್ಷ ದೇವಾಲಯದ (Hampi Virupaksha Temple) ಕಂಬಕ್ಕೆ ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ಈ ಸಂಬಂಧ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು ಸ್ಮಾರಕಗಳಿಗೆ ಧಕ್ಕೆ ಆಗಿದೆ ಎಂದು ನೋಟಿಸ್ ಜಾರಿ ಮಾಡಿದೆ.

ವಿರೂಪಾಕ್ಷೇಶ್ವರ ದೇಗುಲದ ಉತ್ತರ ದಿಕ್ಕಿನಲ್ಲಿ ಗೇಟ್ ಕೂರಿಸಲು ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ದೇಗುಲಕ್ಕೆ ಭಕ್ತರು ದಕ್ಷಿಣ ಧ್ರುವದಿಂದ ಬಂದು ದರ್ಶನದ ಬಳಿಕ ಉತ್ತರ ಧ್ರುವದಿಂದ ಹೊರ ಹೋಗುತ್ತಾರೆ. ಭಕ್ತರು ಸರತಿ ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಲು ಮೊಳೆ ಹೊಡೆಯಲಾಗಿದೆ. ಆದರೆ ಮೊಳೆ ಹೊಡೆಯುವ ವೇಳೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅನುಮತಿ ಪಡೆಯದೇ ಮೊಳೆ ಹೊಡೆದಿದ್ದಕ್ಕೆ ಪುರಾತತ್ವ ಇಲಾಖೆ ಗರಂ ಆಗಿದೆ. ಸ್ಮಾರಕಗಳಿಗೆ ಧಕ್ಕೆ ಆಗಿದೆ ಎಂದು ನೋಟಿಸ್ ನೀಡಿದೆ.

ವಿರೂಪಾಕ್ಷ ದೇಗುಲ ಪುರಾತತ್ವ ಇಲಾಖೆ ಸುಪರ್ದಿಗೆ ಬರುತ್ತದೆ. ಅನುಮತಿ ಪಡೆಯದೇ ಕಾಮಗಾರಿ ನಡೆಸಿ ಮೊಳೆ ಹೊಡೆಯಲಾಗಿದೆ. ಸರ್ಕಾರಿ ಇಲಾಖೆಯೇ ಸ್ಮಾರಕಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ನೋಟಿಸ್ ಜಾರಿ ಮಾಡಲಾಗಿದೆ. ಇನ್ನು 57 ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತವೆ‌. 1986ರಲ್ಲೇ ವಿಶ್ವ ಪಾರಂಪರಿಕ ಪಟ್ಟಿಗೆ ಹಂಪಿ ಸೇರಿತ್ತು.

ಇದನ್ನೂ ಓದಿ: Hampi: ಹಂಪಿಯನ್ನು ಅತ್ಯುತ್ತಮ ಪ್ರವಾಸೋದ್ಯಮ ತಾಣವೆಂದು ಘೋಷಿಸಿದ ಕೇಂದ್ರ

ಈ ಐತಿಹಾಸಿಕ ದೇವಾಲಯದಲ್ಲಿ ಮುಖ್ಯ ದೇವರಾದ ಶ್ರೀ ವಿರೂಪಾಕ್ಷನನ್ನು ಪಂಪಾಪತಿ ಎಂದೂ ಕರೆಯಲಾಗುತ್ತದೆ. ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಶ್ರೀ ಭುವನೇಶ್ವರಿ ಮತ್ತು ಶ್ರೀ ವಿದ್ಯಾರಣ್ಯ ದೇವಾಲಯಗಳು ಸಹ ಇವೆ. ವಿರೂಪಾಕ್ಷ ದೇವಾಲಯ ಸಂಕೀರ್ಣವು ಮೂರು ಗೋಪುರಗಳಿಂದ ಆವೃತವಾಗಿದೆ. ಪೂರ್ವದಲ್ಲಿ ಮುಖ್ಯ ಗೋಪುರವು ಭವ್ಯವಾದ ರಚನೆಯಾಗಿದ್ದು, 9 ಮಹಡಿಗಳು ಹಾಗೂ 50 ಮೀಟರ್ ಎತ್ತರವಿದೆ. ಇದನ್ನು ಹದಿನೈದನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪೂರ್ವ ದಿಕ್ಕಿನ ಗೋಪುರವು ವಿರೂಪಾಕ್ಷ ದೇವಾಲಯದ ಮುಖ್ಯ ದ್ವಾರವಾಗಿದೆ. ಪೂರ್ವ ಗೋಪುರವು ಅದರ ಪ್ರತಿಯೊಂದು ಮಹಡಿಯಲ್ಲಿ ನೂರಾರು ಹಿಂದೂ ದೇವರು ಮತ್ತು ದೇವತೆಗಳನ್ನು ಒಳಗೊಂಡ ವ್ಯಾಪಕವಾದ ಕರಕುಶಲತೆಯನ್ನು ಹೊಂದಿದೆ. ಮುಖ್ಯ ಗೋಪುರದ ತಲೆಕೆಳಗಾದ ನೆರಳು ದೇವಾಲಯದ ಒಳಗಿನ ಗೋಡೆಯ ಮೇಲೆ ಬೀಳುತ್ತದೆ.

ಶ್ರೀ ವಿರೂಪಾಕ್ಷ ದೇವಾಲಯ ಸಂಕೀರ್ಣವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ 9 ಗಂಟೆಯವರೆಗೆ ತೆರೆದಿರುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ