ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ: ‘ಕೈ’ ಕಾರ್ಯಕರ್ತ ರಾಜಶೇಖರ್​ ಮೃತಪಟ್ಟಿದ್ದು ಯಾರ ಗುಂಡೇಟಿಗೆ?

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕ ರಾಜಶೇಖರ್ ಮೃತಪಟ್ಟಿದ್ದು, ಜನಾರ್ದನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಸಾವಿಗೆ ಕಾರಣವಾದ ಗುಂಡು ಯಾರಿಂದ ಹಾರಿಸಲ್ಪಟ್ಟಿದೆ ಎಂಬುದು ಈಗ ತನಿಖೆಯ ಪ್ರಮುಖ ವಿಷಯವಾಗಿದೆ. ಪೊಲೀಸರು ಖಾಸಗಿ ಗನ್‌ಮ್ಯಾನ್‌ಗಳ ಬಂದೂಕುಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಗೃಹ ಸಚಿವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ: ಕೈ ಕಾರ್ಯಕರ್ತ ರಾಜಶೇಖರ್​ ಮೃತಪಟ್ಟಿದ್ದು ಯಾರ ಗುಂಡೇಟಿಗೆ?
ಬ್ಯಾನರ್​​ ಗಲಾಟೆವೇಳೆ ಗುಂಡೇಟಿಗೆ ಯುವಕ ಬಲಿ.
Edited By:

Updated on: Jan 02, 2026 | 1:07 PM

ಬಳ್ಳಾರಿ, ಜನವರಿ 02: ಬ್ಯಾನರ್​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ವಿಚಾರವೀಗ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ಎಂಎಲ್​​ಎ ನಾರಾ ಭರತ್​​ ರೆಡ್ಡಿ ವಿರುದ್ಧ ಸಮರಕ್ಕೆ ಕಾರಣವಾಗಿದೆ. ಉಭಯ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಇದು ನನ್ನ ಕೊಲೆಗೆ ನಡೆದ ಸಂಚು ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರೆ, ಅಕ್ರಮ ಗಣಿಗಾರಿಕೆ ವಿಷಯ ಡೈವರ್ಟ್​ ಮಾಡಲು ಇಂತಹ ನೀಜ ಕೃತ್ಯಕ್ಕೆ ಜನಾರ್ದನ ರೆಡ್ಡಿ ಇಳಿದಿದ್ದಾನೆ ಎಂದು ಏಕವಚನದಲ್ಲೇ ಭರತ್​​ ರೆಡ್ಡಿ ಕಿಡಿಕಾರಿದ್ದಾರೆ. ಇದೆಲ್ಲದರ ನಡುವೆ ಯುವಕ ರಾಜಶೇಖರ್​​ ಸಾವಿಗೆ ಕಾರಣವಾದ ಬುಲೆಟ್ ಫೈರ್​​ ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಬ್ಯಾನರ್​​ ವಿಚಾರವಾಗಿ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಶಾಸಕ ಭರತ್​​ ರೆಡ್ಡಿ ಆಪ್ತನ ಬಾಡಿಗಾರ್ಡ್​​ಗಳು ಕೂಡ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ​ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಖಾಸಗಿ ಗನ್​ಮ್ಯಾನ್​​ಗಳ 3 ಗನ್​ ಸೀಜ್ ಮಾಡಿದ್ದಾರೆ. ಅವುಗಳನ್ನು ಪರಿಶೀಲನೆಗಾಗಿ FSLಗೆ ಕಳುಹಿಸಲಾಗಿದೆ. ಜನಾರ್ದನರೆಡ್ಡಿಗೆ ನೀಡಿದ್ದ ಗನ್​ಮ್ಯಾನ್​ಗಳ ಗನ್​ ಸಹ ಪರಿಶೀಲನೆ ನಡೆಸಲಾಗಿದ್ದು, ರೆಡ್ಡಿ ಗನ್​ಮ್ಯಾನ್​ಗಳ ಗನ್​ನಿಂದ ಬುಲೆಟ್​ ಬಳಕೆ ಆಗದಿರುವುದು ಪತ್ತೆಯಾಗಿದೆ ಎಂದು ಟಿವಿ9ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ನನ್ನನ್ನು ಮುಗಿಸಲೆಂದೇ ಫೈರಿಂಗ್ ಮಾಡಿದ್ದಾರೆ; ಜನಾರ್ದನ ರೆಡ್ಡಿ ಆರೋಪ

ಬಳ್ಳಾರಿ ಘರ್ಷಣೆ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ವಾಲ್ಮೀಕಿ ಬ್ಯಾನರ್ ಹಾಕಿದ ವಿಚಾರವಾಗಿ ಗಲಾಟೆಯಾಗಿದೆ. ಮನೆಯ ರಸ್ತೆಯಲ್ಲಿ ಬ್ಯಾನರ್ ಹಾಕಲು ಜನಾರ್ದನರೆಡ್ಡಿ ವಿರೋಧಿಸಿದ್ದಾರೆ ಎನ್ನಲಾಗಿದೆ. ಆ ವಿಚಾರಕ್ಕೆ ಗಲಾಟೆ ನಡೆದು, ಕಾಂಗ್ರೆಸ್​ನ ಓರ್ವ ಕಾರ್ಯಕರ್ತ ಮೃತಪಟ್ಟಿದ್ದಾನೆ. ಆ ವೇಳೆ ಯಾರು ಫೈರ್ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇನೆ. ಆ ಬಗ್ಗೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುನ್ನೆಚ್ಚರಿಕೆಯಾಗಿ ದಾವಣಗೆರೆ ಐಜಿ ಘಟನಾ ಸ್ಥಳಕ್ಕೆ ಹೋಗಿದ್ದು, ಖಾಸಗಿ ಗನ್ ಮ್ಯಾನ್​ಗಳ ರಿವಾಲ್ವಾರ್​ಗಳನ್ನು ಸೀಜ್ ಮಾಡಿದ್ದಾರೆ. ಸತೀಶ್ ರೆಡ್ಡಿ ಗನ್​ಮ್ಯಾನ್ ಫೈರ್ ಮಾಡಿದ್ದಾರೆ ಅಂತಾ ಹೇಳ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಆಗಬೇಕು. ಗಲಾಟೆ ಮಾಡಿದ ವಿಚಾರಕ್ಕೆ ಜನಾರ್ದನ ರೆಡ್ಡಿ ಸೇರಿ 11 ಜನರ ವಿರುದ್ಧ ಎಫ್​ಐಆರ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.