ಬಳ್ಳಾರಿ ಉದ್ವಿಗ್ನ: ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಬ್ಯಾನರ್ ಅಳವಡಿಕೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಘರ್ಷಣೆಯಲ್ಲಿ ಕಲ್ಲು ತೂರಾಟ, ಖಾರದ ಪುಡಿ ಎರಚಾಟ ನಡೆದಿದ್ದು, ಖಾಸಗಿ ಗನ್‌ಮ್ಯಾನ್ ಹಾಗೂ ಪೊಲೀಸರ ಏರ್ ಫೈರ್ ವೇಳೆ ಮಿಸ್‌ಫೈರ್ ಆಗಿ ದುರಂತ ಸಂಭವಿಸಿದೆ. ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಳ್ಳಾರಿ, ಜನವರಿ 2: ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಅಳವಡಿಕೆ ವೇಳೆ ಶುರುವಾದ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತನ ಬಲಿತೆಗೆದುಕೊಂಡಿದೆ. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ. ಈ ಘರ್ಷಣೆಯು ಕಲ್ಲು ತೂರಾಟ, ದೊಣ್ಣೆಗಳ ಬಳಕೆ ಮತ್ತು ಖಾರದ ಪುಡಿ ಎರಚಾಟ ಸೇರಿದಂತೆ ತೀವ್ರ ಸ್ವರೂಪ ಪಡೆದುಕೊಂಡಿತ್ತು ಎಂಬುದು ಘಟನಾ ಸ್ಥಳದ ವಿಡಿಯೋದಿಂದ ತಿಳಿದುಬಂದಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್‌ಗಳು ಏರ್ ಫೈರ್ ಮಾಡಿದ್ದಾರೆ. ಇದೇ ವೇಳೆ ಪೊಲೀಸರೂ ಕೂಡ ಗುಂಪನ್ನು ಚದುರಿಸಲು ಏರ್ ಫೈರ್ ಮಾಡಿದ್ದು, ಒಂದು ಮಿಸ್‌ಫೈರ್ ಆಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರಿಗೆ ಗುಂಡು ತಗುಲಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜಶೇಖರ್ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಕಾಣಿಸುತ್ತಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗುವಿನ ವಾತಾವರಣವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಘಟನಾ ಸ್ಥಳದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ.
