ಅಮಾಯಕನ ಹೆಸರಲ್ಲಿ 350 ಕೋಟಿ ರೂ. ಜಿಎಸ್‌ಟಿ ವಹಿವಾಟು! ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಯುವಕನ ದಾಖಲೆ ದುರ್ಬಳಕೆ
ಬಳ್ಳಾರಿಯಲ್ಲಿ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವ ಟೊಯೊಟಾ ಶೋರೂಂ ಉದ್ಯೋಗಿ ರೋಷನ್ ಜಮೀಲ್ ಹೆಸರಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಜಿಎಸ್‌ಟಿ ವಹಿವಾಟು ನಡೆದಿರುವ ಆರೋಪ ಕೇಳಿಬಂದಿದೆ. ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸಲಾಗಿದೆ ಎನ್ನಲಾಗಿದೆ. ಜಿಎಸ್‌ಟಿ ಅಧಿಕಾರಿಗಳ ಭೇಟಿ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸೈಬರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಖ್ಯಾಂಶಗಳು
- ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಲ್ಲಿ 350 ಕೋಟಿ ಜಿಎಸ್‌ಟಿ ವಹಿವಾಟು!
- ಆಧಾರ್, ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿ ಐದು ತಿಂಗಳಲ್ಲಿ ಭಾರಿ ವಂಚನೆ.
- ಜಿಎಸ್‌ಟಿ ಅಧಿಕಾರಿಗಳ ಭೇಟಿ ಬಳಿಕ ವಂಚನೆ ಬಯಲು, ಸೈಬರ್ ಪೊಲೀಸರಿಂದ ತನಿಖೆ.
ಬಳ್ಳಾರಿ, ನವೆಂಬರ್ 14: ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಜಿಎಸ್‌ಟಿ (GST) ವಹಿವಾಟು ನಡೆದಿರುವ ಆಘಾತಕಾರಿ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಟೊಯೊಟಾ ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೋಷನ್ ಜಮೀಲ್ ಎಂಬ ಯುವಕನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಹಲವು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದು ರೋಷನ್ ಕುಟುಂಬ ಆತಂಕಕ್ಕೊಳಗಾಗಿದೆ.
ಐದು ತಿಂಗಳಲ್ಲಿ 350 ಕೋಟಿ ರೂ. ವಹಿವಾಟು!
ಬಳ್ಳಾರಿ ನಗರದ ಮುಂಡರಗಿ ಪ್ರದೇಶದ ಆಶ್ರಯ ಮನೆಯಲ್ಲಿ ವಾಸವಿರುವ ರೋಷನ್ ಜಮೀಲ್ ಡಿಪ್ಲೊಮಾ ಓದಿದ್ದು, ಟೊಯೊಟಾ ಕಂಪನಿಯಲ್ಲಿ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಆದರೆ, ರೋಷನ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸಿ, ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಕೇವಲ ಐದು ತಿಂಗಳಲ್ಲಿ 350 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ ಎನ್ನಲಾಗಿದೆ. ಬಳಿಕ ಜಿಎಸ್‌ಟಿ ಖಾತೆಯನ್ನು ಕ್ಲೋಸ್ ಮಾಡಲಾಗಿದೆ. ರೋಷನ್ ಅವರ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್ ಬಳಸಿಕೊಂಡು ನೋಂದಣಿ ಮಾಡಲಾಗಿದ್ದು, ಅದರಲ್ಲಿ ಬೇರೆ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನೀಡಲಾಗಿದೆ ಎಂಬ ಆರೋಪವಿದೆ.
ದೆಹಲಿ ಸೇರಿದಂತೆ ವಿವಿಧೆಡೆ ಪ್ಲಾಸ್ಟಿಕ್ ಖರೀದಿಗೆ ಈ ದಾಖಲೆಗಳನ್ನು ಬಳಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಈ ವ್ಯವಹಾರದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರೋಷನ್ ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ ಬಳಿಕ ಬಯಲಾಯ್ತು ವಂಚನೆ!
ಜಿಎಸ್‌ಟಿ ಖಾತೆ ಕ್ಲೋಸ್ ಮಾಡಿದ್ದೇಕೆ ಎಂದು ವಿಚಾರಿಸಲು ವಾರದ ಹಿಂದೆ ಸಿಜಿಎಸ್‌ಟಿ ಅಧಿಕಾರಿಗಳು ರೋಷನ್ ಮನೆಗೆ ಭೇಟಿ ನೀಡಿದ್ದರು. ಆಗಲೇ ತಮ್ಮ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವ ವಿಚಾರ ಕುಟುಂಬಕ್ಕೆ ತಿಳಿದಿದೆ. ವಿಷಯ ತಿಳಿದು ಕೆಲಸ ಮುಗಿಸಿ ಮನೆಗೆ ಬಂದ ರೋಷನ್ ಕೂಡಲೇ ಜಿಎಸ್‌ಟಿ ಕಚೇರಿಗೆ ತೆರಳಿ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ರೋಷನ್ ತಂದೆ ಫಕ್ರುದ್ಧಿನ್ ಹಮಾಲಿ ಕೆಲಸ ಮಾಡಿಕೊಂಡಿದ್ದು, ದಿನಕ್ಕೆ ಸುಮಾರು 700 ರೂಪಾಯಿ ಸಂಪಾದಿಸುತ್ತಾರೆ. ಮಗನ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆದಿರುವುದನ್ನು ಕೇಳಿ ಕುಟುಂಬ ಕಂಗಾಲಾಗಿದೆ. ಮಗನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವವರನ್ನು ಪತ್ತೆಹಚ್ಚಿ ಬಂಧಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇತ್ತ ರೋಷನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಬ್ಯಾಂಕ್ ಖಾತೆ, ಸಂಬಳದ ದಾಖಲೆಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ. ಅಮಾಯಕ ಯುವಕನ ದಾಖಲೆಗಳನ್ನು ಬಳಸಿಕೊಂಡು ಇಷ್ಟು ದೊಡ್ಡ ಪ್ರಮಾಣದ ವಹಿವಾಟು ನಡೆಸಿದ್ದು ಯಾರು? ಇದರ ಹಿಂದಿರುವ ಜಾಲ ಯಾವುದು ಎಂಬುದು ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



