ಬಳ್ಳಾರಿ: ಕೊರೊನಾ ಅನ್ನೋ ಹೆಮ್ಮಾರಿ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಲಾಕ್ಡೌನ್ ಎಫೆಕ್ಟ್ನಿಂದ ರೈತನೊಬ್ಬ ಈರುಳ್ಳಿಯನ್ನ ಮಾರುಕಟ್ಟೆಗೆ ಸಾಗಿಸದೆ ಸಂಕಷ್ಟಕ್ಕೆ ಸಿಲುಕಿದ್ದ. ಜೊತೆಗೆ ಈರುಳ್ಳಿ ಬೆಲೆ ಕೂಡ ನೆಲಕಚ್ಚಿ ಹೋಗಿತ್ತು. ಇದರಿಂದಾಗಿ ತನ್ನ ಮಗನ ಮದುವೆಗೆ ಹಣ ಇಲ್ಲದೇ ಕಂಗಲಾಗಿ ಈರುಳ್ಳಿ ಬೆಳೆಗಾರ ಆತ್ಮಹತ್ಯೆಗೆ ಯತ್ನಿಸಿದ್ದ. ಇಂತಹ ರೈತ ಕುಟುಂಬಕ್ಕೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕು ಆಡಳಿತ ನೆರವಿಗೆ ಮುಂದಾಗುವ ಮೂಲಕ ಮಾನವೀಯತೆ ಮೆರೆದಿದೆ.
ಮಗನ ಮದುವೆಗಾಗಿ ಹಣಕ್ಕೆ ಹೆಣಗಾಡುತ್ತಿದ್ದ:
ಹೂವಿನಹಡಗಲಿ ತಾಲೂಕಿನ ಕಗ್ಗಲಗಟ್ಟಿ ತಾಂಡಾದ ಮೋತಿ ನಾಯ್ಕ ತಮ್ಮ ಮಗನ ಮದುವೆಗಾಗಿ ಹಣ ಜೋಡಿಸಲು ಹೆಣಗಾಡುತ್ತಿದ್ದ. ದಿಕ್ಕು ತೋಚದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಕೊನೆಗೆ ಈ ರೈತ ಆತ್ಮಹತ್ಯೆಗೂ ಯತ್ನಿಸಿದ್ದ. ಇದನ್ನ ಗ್ರಾಮಸ್ಥರು ತಡೆದಿದ್ದಾರೆ. ವಿಚಾರವನ್ನ ಈರುಳ್ಳಿ ಬೆಳೆಗಾರರ ಸಂಘಕ್ಕೆ ಹಾಗೂ ತಹಶೀಲ್ದಾರ್ ಕೆ.ವಿಜಯಕುಮಾರ್ ಗಮನಕ್ಕೆ ತಂದಿದ್ದಾರೆ.
ಮಾಹಿತಿ ಆಧಾರಿಸಿ ತಹಶೀಲ್ದಾರ್ ವಿಜಯಕುಮಾರ್ ಸಹ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಇದೇ ತಾಂಡಾದಲ್ಲಿ ರುಕ್ಮೀಣಿ ಬಾಯಿ ಅನ್ನೋ ರೈತ ಮಹಿಳೆ ಕೂಡ ಈರುಳ್ಳಿ ಬೆಳೆದು ಮಾರಾಟ ಇಲ್ಲದೇ ಕಂಗಲಾಗಿದ್ದರು. ಈ ರೈತ ಮಹಿಳೆ ಕೂಡ ಮಗಳ ಮದುವೆ ನಿಶ್ಚಯ ಮಾಡಿ ಹಣ ಇಲ್ಲದಿದ್ದಕ್ಕೆ ತೊಂದರೆ ಅನುಭವಿಸುತ್ತಿದ್ದರು.
ಈರುಳ್ಳಿ ಬೆಳೆಗಾರರ ಕುಟುಂಬದ ನೆರವಿಗೆ ಬಂದ ತಾಲೂಕು ಆಡಳಿತ:
ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಮಾಡಿ ಮದುವೆ ಮಾಡಬೇಕು ಅನ್ನೋ ಲೆಕ್ಕಚಾರದಲ್ಲಿ ಈ ಎರಡು ಕುಟುಂಬಗಳಿದ್ದವು. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಒಂದು ಚೀಲಕ್ಕೆ ಕೇವಲ 100 ರೂ.ಗಳಿಂದ 150 ರೂ.ಮಾತ್ರ ದರ ಇತ್ತು. ಹೀಗಾಗಿ ಈರುಳ್ಳಿ ಮಾರಾಟ ಮಾಡದೇ ಮನೆಯಲ್ಲಿಯೇ ಇಟ್ಟಿದ್ದರು. ಸಂಕಷ್ಟದಲ್ಲಿದ್ದ ಎರಡು ಈರುಳ್ಳಿ ಬೆಳೆಗಾರರ ಕುಟುಂಬಗಳಿಗೆ ಕೊನೆಗೆ ಹೂವಿನಹಡಗಲಿ ತಾಲೂಕು ಆಡಳಿತ ನೆರವಿಗೆ ಬಂದಿದೆ.
ಮೋತಿ ನಾಯ್ಕ ಹಾಗೂ ರುಕ್ಮಿಣಿ ಬಾಯಿ ಸೇರಿದ 80 ಚೀಲ ಈರುಳ್ಳಿಯನ್ನ ಚೀಲವೊಂದಕ್ಕೆ 350 ರೂ.ಗಳಂತೆ ತಾಲೂಕು ಆಡಳಿತ ಖರೀದಿ ಮಾಡಿದೆ. ಹೀಗಾಗ್ಲೇ ಇಬ್ಬರು ರೈತರಿಗೆ ಕೂಡ ಹಣ ಪಾವತಿ ಮಾಡಲಾಗಿದೆ. ಖರೀದಿ ಮಾಡಿದ ಈರುಳ್ಳಿಯನ್ನ ಅಧಿಕಾರಿಗಳು ತಮ್ಮ ನೌಕರರಿಗೆ ಈರುಳ್ಳಿಯನ್ನ ಚೀಲಕ್ಕೆ 350 ರೂ.ಗಳಂತೆ ನೀಡಿದ್ದಾರೆ. ಆ ಮೂಲಕ ಸಂಕಷ್ಟದಲ್ಲಿದ್ದ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವ ಮೂಲಕ ಹೂವಿನಹಡಗಲಿ ತಾಲೂಕು ಆಡಳಿತ ಮಾನವೀಯತೆ ಮೆರೆದಿದೆ.
Published On - 3:42 pm, Sat, 23 May 20