Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನ್ನೆರಡು ವರ್ಷದ ಹಿಂದಿನ ಬಳ್ಳಾರಿ – ಮೋಕಾ ರಸ್ತೆಗೆ ವಾರದಲ್ಲಿ ಟೋಲ್ ನಿರ್ಮಾಣ: ಸ್ಥಳೀಯರಿಂದ ವಿರೋಧ

ನಿಯಮಗಳ ಪ್ರಕಾರ 60 ಕಿ.ಮೀ. ರಸ್ತೆಗೆ ಟೋಲ್ ಹಾಕಬೇಕು. ಆದರೆ ಬಳ್ಳಾರಿಯಿಂದ ಮೂವತ್ತು ಕಿ.ಮೀ. ಈ ರಸ್ತೆ ಮೂಲಕ ತೆರಳಿದರೆ ಆಂಧ್ರ ತಲುಪುತ್ತೇವೆ. ಅಲ್ಲಿಗೆ ರಾಜ್ಯ ಹೆದ್ದಾರಿ ಮುಗಿಯುತ್ತಿದೆ. ಹೀಗಿದ್ರೂ ಇಲ್ಲಿ ಟೋಲ್ ಯಾಕೆ ನಿರ್ಮಾಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಹನ್ನೆರಡು ವರ್ಷದ ಹಿಂದಿನ ಬಳ್ಳಾರಿ - ಮೋಕಾ ರಸ್ತೆಗೆ ವಾರದಲ್ಲಿ ಟೋಲ್ ನಿರ್ಮಾಣ: ಸ್ಥಳೀಯರಿಂದ ವಿರೋಧ
ಬಳ್ಳಾರಿ - ಮೋಕಾ ರಸ್ತೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿರುವ ಟೋಲ್ ಪ್ಲಾಜಾ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: Ganapathi Sharma

Updated on: Dec 07, 2023 | 7:34 PM

ಬಳ್ಳಾರಿ, ಡಿಸೆಂಬರ್ 7: ದಶಕದ ಹಿಂದೆ ನಿರ್ಮಾಣ ಮಾಡಿದ ಬಳ್ಳಾರಿಯಿಂದ ಆಂಧ್ರ ಗಡಿಗೆ ತೆರಳುವ ಮತ್ತು ಹೊಸ ಏರ್ಪೋರ್ಟ್​​ಗೆ ತೆರಳುವ ಚತುಷ್ಪಥ ರಸ್ತೆಯಲ್ಲಿ (Ballari Moka road) ಈವರೆಗೂ ಜನರು ಸರಾಗವಾಗಿ ಓಡಾಡಿದ್ದಾರೆ. ಆದರೆ ಕಳೆದೊಂದು ವಾರದ ಹಿಂದೆ ದಿಢೀರನೇ ಟೋಲ್ ಗೇಟ್ (Toll Plaza) ಒಂದನ್ನು ನಿರ್ಮಾಣ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯರಿಗೂ ವಿನಾಯಿತಿ ನೀಡದೇ ವಸೂಲಿ ಮಾಡ್ತಿರೋ ಹಿನ್ನೆಲೆ ಗ್ಯಾರಂಟಿ ಸರಿದೂಗಿಸಲು ಸರ್ಕಾರವೇ ನೇರವಾಗಿ ಹಣ ವಸೂಲಿ ದಂಧೆಗಿಳಿದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸ್ಥಳೀಯರಿಗೂ ವಿನಾಯಿತಿ ನೀಡದೆ ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಏರ್ಪೋರ್ಟ್ ನಿರ್ಮಾಣ ಮಾಡುವ ಹಿನ್ನೆಲೆ ಬಳ್ಳಾರಿಯಿಂದ ಮೋಕಾ ಗ್ರಾಮದವರೆಗೂ ಇರೋ ಇಪ್ಪತ್ತು ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು. ಕಾರಣಾಂತರದಿಂದ ಏರ್ಪೋರ್ಟ್ ವಿಳಂಬವಾದ್ರೂ ಈ ರಸ್ತೆಯ ಮೇಲೆ ಎಂದಿನಂತೆ ಜನರ ಓಡಾಟ ಇತ್ತು. ಆದರೆ ಇದೀಗ ಈ ರಸ್ತೆ ಮಾರ್ಗದಲ್ಲೊಂದು ಟೋಲ್ ನಿರ್ಮಾಣ ಮಾಡಲಾಗಿದೆ ಕಳೆದೊಂದು ವಾರದಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ.

ಟೋಲ್ ನಿಯಮದಲ್ಲೇನಿದೆ?

ನಿಯಮಗಳ ಪ್ರಕಾರ 60 ಕಿ.ಮೀ. ರಸ್ತೆಗೆ ಟೋಲ್ ಹಾಕಬೇಕು. ಆದರೆ ಬಳ್ಳಾರಿಯಿಂದ ಮೂವತ್ತು ಕಿ.ಮೀ. ಈ ರಸ್ತೆ ಮೂಲಕ ತೆರಳಿದರೆ ಆಂಧ್ರ ತಲುಪುತ್ತೇವೆ. ಅಲ್ಲಿಗೆ ರಾಜ್ಯ ಹೆದ್ದಾರಿ ಮುಗಿಯುತ್ತಿದೆ. ಹೀಗಿದ್ರೂ ಇಲ್ಲಿ ಟೋಲ್ ಯಾಕೆ ನಿರ್ಮಾಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಮೂಲಗಳ ಪ್ರಕಾರ ಹನ್ನೆರಡು ವರ್ಷಗಳ ಹಿಂದೆ ಖಾಸಗಿಯವರು ಈ ರಸ್ತೆ ನಿರ್ಮಾಣ ಮಾಡಿದ್ರು. ಹತ್ತು ವರ್ಷಗಳ ಕಾಲ ಅವರೇ ಇದನ್ನು ನಿರ್ವಹಣೆ ಮಾಡಿದ್ದಾರೆ. ಇದೀಗ ಇದರ ನಿರ್ವಹಣೆ ಸರ್ಕಾರದ ಮೇಲಿರೋ ಹಿನ್ನೆಲೆ ಇಲ್ಲಿ ಟೋಲ್ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ತಾತ್ಕಾಲಿಕ ಟೆಂಟ್ ಮಾದರಿಯಲ್ಲಿ ಇಲ್ಲಿ ಟೋಲ್ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರ ಪರವಿರೋಧದ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತದೆಯೇ ಎನ್ನುವ ಅನುಮಾನವಿದೆ. ಬಳ್ಳಾರಿಯಿಂದ ಇಪ್ಪತ್ತು ಕಿ.ಮೀ. ಇರೋ ಮೋಕಾ ಮತ್ತು ಸುತ್ತಮುತ್ತಲಿನ ಗ್ರಾಮಕ್ಕೆ ಹೋಗುವವರು ಇದೇ ರಸ್ತೆ ಮೇಲೆ ಹೋಗಬೇಕು. ಆದರೆ ಇಲ್ಲಿ ಸ್ಥಳೀಯರಿಗೂ ವಿನಾಯಿತಿ ನೀಡದಿರುವ ಬಗ್ಗೆ ಸಾರ್ವಜನಿಕರಷ್ಟೇ ಅಲ್ಲದೇ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಂಗಳಿಗೆ 210 ರೂಪಾಯಿ ಫಿಕ್ಸ್ ಮಾಡೋ ಮೂಲಕ ಪಾಸ್ ನೀಡಲು ಚಿಂತನೆ ನಡೆದಿದೆ. ಆದರೆ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಸ್ಥಳೀಯರಿಗೆ ವಿನಾಯಿತಿ ನೀಡುವುದಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಬಾಲಕಿಯರ ಸರ್ಕಾರಿ ವಸತಿ ಶಾಲೆಗಿಲ್ಲ ಕಟ್ಟಡ, ಹಳೆಯ ಚಿತ್ರ ಮಂದಿರವೇ ಆಸರೆ

ನಿಯಮ ಬಾಹಿರ ಟೋಲ್ ನಿರ್ಮಾಣಕ್ಕೆ ಜನಾಕ್ರೋಶ ವ್ಯಕ್ತವಾಗ್ತಿರೋದು ಒಂದು ಕಡೆಯಾದರೆ, ಸರ್ಕಾರ ಎಲ್ಲೋ ಒಂದು ಕಡೆ ಗ್ಯಾರಂಟಿ ಸರಿದೂಗಿಸಲು ಟೋಲ್ ಹಾಕುವ ಮೂಲಕ ಜನರ ಹಣ ವಸೂಲಿ ಮಾಡ್ತಿದ್ದಾರೆಯೇ ಅನ್ನೋ ಅನುಮಾನ ದಟ್ಟವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ