ರಾಜ್ಯದಲ್ಲಿ ಎಸ್​ಐಆರ್ ಹಗ್ಗಜಗ್ಗಾಟ ತೀವ್ರ: ಎಫ್‌ಐಆರ್ ಖಂಡಿಸಿ ನಾಳೆ ಬಳ್ಳಾರಿ ಠಾಣೆಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ಕರೆ!

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ (SIR) ವಿಚಾರವಾಗಿ ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸಂಘರ್ಷ ತೀವ್ರಗೊಂಡಿದೆ. ಬಳ್ಳಾರಿಯಲ್ಲಿ ಬಿಜೆಪಿ ಮುಖಂಡನ ಮೇಲಿನ ಎಫ್‌ಐಆರ್ ಖಂಡಿಸಿ ನಾಳೆ ಠಾಣೆ ಮುತ್ತಿಗೆಗೆ ಕರೆ ನೀಡಲಾಗಿದೆ. ಇನ್ನೊಂದೆಡೆ ಮತದಾರರ ಹೆಸರು ಡಿಲೀಟ್ ಆರೋಪ ಎದುರಿಸುತ್ತಿದ್ದ ಬೆಳಗಾವಿಯ ಬಿಜೆಪಿ ನಾಯಕ ಡಾ. ರವಿ ಪಾಟೀಲ್‌ಗೆ ಜಾಮೀನು ಲಭಿಸಿದೆ.

ರಾಜ್ಯದಲ್ಲಿ ಎಸ್​ಐಆರ್ ಹಗ್ಗಜಗ್ಗಾಟ ತೀವ್ರ: ಎಫ್‌ಐಆರ್ ಖಂಡಿಸಿ ನಾಳೆ ಬಳ್ಳಾರಿ ಠಾಣೆಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ಕರೆ!
ಎಫ್‌ಐಆರ್ ಖಂಡಿಸಿ ನಾಳೆ ಬಳ್ಳಾರಿ ಠಾಣೆಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ಕರೆ!
Edited By:

Updated on: Oct 04, 2026 | 2:01 PM

ಮುಖ್ಯಾಂಶಗಳು

  • ಎಸ್‌ಐಆರ್ ವಿಚಾರವಾಗಿ ಬಳ್ಳಾರಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಎಫ್‌ಐಆರ್ ದಾಖಲಾಗಿದೆ.
  • ಪೊಲೀಸರ ನಡೆ ಖಂಡಿಸಿ ನಾಳೆ ಬಳ್ಳಾರಿಯ ಠಾಣೆಗಳಿಗೆ ಮುತ್ತಿಗೆ ಹಾಕಲು ಕರೆ.
  • ಬೆಳಗಾವಿ ಮತದಾರರ ಪಟ್ಟಿ ಪ್ರಕರಣದಲ್ಲಿ ಬಿಜೆಪಿ ನಾಯಕನಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.

ಬಳ್ಳಾರಿ, ಅಕ್ಟೋಬರ್ 04: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್​ಐಆರ್) ವಿಚಾರವು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ನಡುವೆ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿ ಬಿಜೆಪಿ ಬೃಹತ್ ಹೋರಾಟಕ್ಕೆ ಮುಂದಾಗಿದ್ದರೆ, ಇನ್ನೊಂದೆಡೆ ಬೆಳಗಾವಿಯ ಬಿಜೆಪಿ ಮುಖಂಡನಿಗೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಲಭಿಸಿದೆ.

ಬಳ್ಳಾರಿಯಲ್ಲಿ ಉದ್ವಿಗ್ನತೆ: ಠಾಣೆಗಳಿಗೆ ಮುತ್ತಿಗೆ ಎಚ್ಚರಿಕೆ

ಬಳ್ಳಾರಿಯಲ್ಲಿ ಮತದಾರರ ಪಟ್ಟಿಯ ಫಾರ್ಮ್-7 ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದಡಿ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಶ್ರೀನಿವಾಸ್ ಮೋತ್ಕರ್ ವಿರುದ್ಧ ಬ್ರೂಸ್‌ಪೇಟೆ ಮತ್ತು ಎಪಿಎಂಸಿ ಪೊಲೀಸ್ ಠಾಣೆಗಳಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ. ಶ್ರೀನಿವಾಸ್ ಅವರು 7,561 ಮತದಾರರ ಅರ್ಹತೆ ಪರಿಶೀಲಿಸುವಂತೆ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ BLA-1 ಗೌತಮ್ ನೀಡಿದ ದೂರಿನನ್ವಯ ಪೊಲೀಸರು ಕೋರ್ಟ್‌ನಿಂದ ಸರ್ಚ್ ವಾರಂಟ್ ತಂದು ತಾಳೂರು ರಸ್ತೆಯಲ್ಲಿರುವ ಶ್ರೀನಿವಾಸ್ ಕಚೇರಿ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.

ಪೊಲೀಸರ ಈ ನಡವಳಿಕೆಯಿಂದ ಕೆರಳಿ ಕೆಂಡವಾಗಿರುವ ಬಿಜೆಪಿ, ನಾವು ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡಿಲ್ಲ, ಕೇವಲ ಪರಿಶೀಲನೆಗೆ ಮನವಿ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಈ ಪೋಲಿಸ್ ದೌರ್ಜನ್ಯ ಖಂಡಿಸಿ ನಾಳೆ (ಅ. 5) ರಾಯಲ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ, ಬ್ರೂಸ್‌ಪೇಟೆ ಹಾಗೂ ಎಪಿಎಂಸಿ ಠಾಣೆಗಳಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.

YouTube video player

ಬಿಜೆಪಿ ನಾಯಕ ಡಾ. ರವಿ ಪಾಟೀಲ್‌ಗೆ ಜಾಮೀನು

ಇನ್ನೊಂದೆಡೆ, ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ರವಿ ಪಾಟೀಲ್ ಅವರಿಗೆ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸೆಪ್ಟೆಂಬರ್ 22ರಂದು ವೀರಭದ್ರನಗರದ ಮತಗಟ್ಟೆ 195 ಮತ್ತು 196ರಲ್ಲಿ ಫಾರ್ಮ್-7 ಬಳಸಿ 198 ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಯತ್ನಿಸಿದ ಆರೋಪದ ಮೇಲೆ ಬಿಎಲ್‌ಒ ನೀಡಿದ ದೂರಿನಂತೆ ರವಿ ಪಾಟೀಲ್ ಸೇರಿದಂತೆ 25 ಜನರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಡಾ. ರವಿ ಪಾಟೀಲ್ ಅವರಿಗೆ ನ್ಯಾಯಾಲಯವು 50 ಸಾವಿರ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಿದ್ದು, ಸದ್ಯ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Sun, 4 October 26

ವಿನಾಯಕ ಬಡಿಗೇರ್​
Loading...
Unable to load recommendations.
Follow Us