ಬಳ್ಳಾರಿ: ಹುಬ್ಬಳ್ಳಿಯಲ್ಲಿ ಕಿಡಿಗೇಡಿಗಳು ಕಾನೂನು ಕೈಗೆತೆಗೆದುಕೊಂಡಿದ್ದಾರೆ. ಪೊಲೀಸ್ ಠಾಣೆ ಬಳಿ ಗಲಾಟೆ ಮಾಡಿದ್ದು ಅಕ್ಷಮ್ಯ ಅಪರಾಧ. ಪೊಲೀಸರು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಯಾರೇ ಕಾನೂನು ಕ್ರಮ ಕೈಗೆತೆಗೆದುಕೊಂಡರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಬೇಡಿ ಎಂದು ಗಲಭೆಕೋರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣದ ಬಗ್ಗೆ ಹೊಸಪೇಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಮತ್ತೆ ರಾಜಕೀಯ ಬಣ್ಣವನ್ನ ಬಳಿಯುವುದು ಬೇಡ. ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಹುಬ್ಬಳ್ಳಿ ನಡೆದಿರುವ ಘಟನೆ ಮತ್ತೆ ಎಲ್ಲೂ ನಡೆಯಬಾರದು. ಕಾನೂನು ಸುವ್ಯವಸ್ಥೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಯಾರೇ ತಪ್ಪು ಮಾಡಿದ್ದರೂ ತಕ್ಕ ಶಿಕ್ಷೆ ಆಗಬೇಕು. ಎಲ್ಲರೂ ಶಾಂತಿ ಕಾಪಾಡಬೇಕು. ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದೆ. ಇನ್ನೂ ಹಲವರನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹೊಸಪೇಟೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ತರಲು ಏನು ಮಾಡಬೇಕು ಮಾಡುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇವೆ ಎಂದು ಈ ವೇಳೆ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ರೆ ತಪ್ಪೇನಿದೆ? ಕೇಸರಿ ಧ್ವಜ ಶಾಂತಿಯ ಸಂಕೇತ. ಪಾಕ್ನಲ್ಲಿ ದೇಗುಲಗಳ ಮೇಲೆ ಹಸಿರು ಧ್ವಜ ಹಾರಿಸಲ್ವಾ? ಅದಕ್ಕಾಗಿ ಪೊಲೀಸ್ ಠಾಣೆ ಎದುರು ಗಲಾಟೆ ಮಾಡೋದಾ? ಇದೇ ರೀತಿ ಮುಂದುವರಿದರೆ ನಾವು ಹಿಂದೂಗಳು ಸುಮ್ಮನಿರಲ್ಲ. ಹುಬ್ಬಳ್ಳಿಯ ಗಲಾಟೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಹೊಸಪೇಟೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪ ನೀಡಿದ್ದಾರೆ.
ನಿನ್ನೆ ಕೇವಲ ಕೇಸರಿ ದ್ವಜ ಸ್ಟೇಟಸ್ ಹಾಕಿದ್ದೆ ಏನಾಯ್ತು? ಕೇಸರಿ ಹಾರಿಸಿದ್ರೆ ತಪ್ಪೇನು? ಇಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದು ನೋಡಿದ್ದೇವೆ. ಕೇಸರಿ ಶಾಂತಿಯ ಸಂಕೇತ. ಇದರಲ್ಲಿ ಕಾಂಗ್ರೆಸ್ ಕೈವಾಡ ಇದೆ. ಇದು ಮುಂದುವರೆದ್ರೆ ನಾವು ಹಿಂದುಗಳು ಏನು ಅಂತ ತೋರಿಸಬೇಕಾಗಲಿದೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಕಾಂಗ್ರೆಸ್ನವರು ತ್ರಿವರ್ಣ ಧ್ವಜ ತೆಗೆದು ಕೇಸರಿ ಹಾರಿಸಿದ್ರು ಅಂತ ಸುಳ್ಳು ಹಬ್ಬಿಸಿದವರು. ಹಿಂದೂ ಪ್ರೇಮಿ, ಭಜರಂಗದಳದ ಕಾರ್ಯಕರ್ತ ಹರ್ಷನನ್ನ ಹತ್ಯೆ ಮಾಡಿದ್ರು. ಈ ಪ್ರಚೋದನೆಗೆ ಕಾಂಗ್ರೆಸ್ ನೇರ ಕಾರಣ. ಜನರಿಗೆ ತಪ್ಪು ಮಾಹಿತಿ ನೀಡೋ ಕೆಲಸ ಕಾಂಗ್ರೆಸ್ ಮಾಡ್ತಿದ್ದಾರೆ. ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ ಮೈಸೂರಿನಲ್ಲಿ ತನ್ವೀರ್ ಸೇಠ್ ತಂದೆ ತಾನೆ ಗಲಭೆ ಮಾಡಿದ್ದು? ಕೋರ್ಟಲ್ಲಿ ಹಿಜಾಬ್ ತೀರ್ಪಿನ ಬಳಿಕ ಗಲಾಟೆ ಮಾಡಿದ್ರು. ಹುಬ್ಬಳ್ಳಿ ಗಲಾಟೆ ನಾವು ಖಂಡಿಸ್ತೇವೆ. ನಮ ಗೃಹ ಸಚಿವರು ಸಮರ್ಥರಾಗಿದ್ದಾರೆ. ಈಶ್ವರಪ್ಪನನ್ನು ಬಲಿಪಶು ಮಾಡುವ ಕೆಲಸ ಮಾಡಿದ್ರು. ಈಶ್ವರಪ್ಪ ಪರ ನಾವು, ನಮ್ಮ ಸರ್ಕಾರ ಇದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಕರ್ನಾಟಕ ಮತ್ತೊಂದು ಕಾಶ್ಮೀರ ಆಗಬಾರದು: ಶೋಭಾ ಕರಂದ್ಲಾಜೆ
ಹುಬ್ಬಳ್ಳಿಯ ಘಟನೆಯನ್ನು ಯಾರೂ ಸಹಿಸಿಕೊಳ್ಳಲು ಆಗಲ್ಲ. ಕಾಶ್ಮೀರ, ಕೇರಳ ಬಳಿಕ ರಾಜ್ಯದಲ್ಲಿ ಅಶಾಂತಿ ಕದಡಲು ಯತ್ನ ನಡೆಯುತ್ತಿದೆ. ಕರ್ನಾಟಕ ಮತ್ತೊಂದು ಕಾಶ್ಮೀರ ಆಗಬಾರದು. ಎಲ್ಲಾ ಗಲಭೆಕೋರರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಕೆಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ಸ್ಟೇಷನ್ ಹಾಳು ಮಾಡಿದ್ರು. ಇದೇ ರೀತಿಯ ಭಯೋತ್ಪಾದನೆ ಹುಬ್ಬಳ್ಳಿಯಲ್ಲಿ ಆಗಿದೆ. ಯಾರೋ ಸ್ಟೇಟಸ್ ಹಾಕಿಕೊಂಡಿದ್ದ ಅಂತ ಹುಬ್ಬಳ್ಳಿಯಲ್ಲಿ ಸ್ಟೇಷನ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಕ್ಷಣ ಗೂಂಡಾ ಆಕ್ಟ್ ಅಡಿಯಲ್ಲಿ ಬಂಧನ ಮಾಡಬೇಕು. ಹುಬ್ಬಳ್ಳಿ ಘಟನೆ ಸಾಮಾನ್ಯ ಘಟನೆ ಅಲ್ಲ. ಪೊಲೀಸರನ್ನ ಹೆಸರಿಸುವ ಕೆಲಸ. ಹಾಡು ಹಗಲೇ ಮಚ್ಚು, ಲಾಂಗು ಹಿಡಿದು ಓಡಾಡಿದ್ದಾರೆ. ಹರ್ಷ ಕೊಲೆ ಕೂಡ ನಡೆಯಿತು. ಪೋಸ್ಟರ್ ಹಾಕಿದವನನ್ನು ಬಂಧಿಸಿ ಅಂತ ಹೇಳಬಹುದಿತ್ತು. ಆದ್ರೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡಲಾಗ್ತಿದೆ. ನಮ್ಮ ರಾಜ್ಯ ಮತ್ತೊಂದು ಕೇರಳ, ಪಶ್ಚಿಮ ಬಂಗಾಳ ಆಗಬಾರದು. ಕನ್ನಡಿಗರು ಶಾಂತಿ ಪ್ರಿಯರು, ಮತ್ತೊಮ್ಮೆ ಇದನ್ನ ಸಹಿಸಿಕೊಳ್ಳುವ ಕೆಲಸ ಆಗಬಾರದು ಎಂದು ಹೊಸಪೇಟೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ: ಹೆಚ್ಡಿ ಕುಮಾರಸ್ವಾಮಿ
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ
Published On - 11:25 am, Sun, 17 April 22