ಬಳ್ಳಾರಿ: ಗತಾಲೂಕಿನ ಬರದಾನಹಳ್ಳಿ ಬಳಿ ವೇದಾವತಿ ನದಿಯ ಸೇತುವೆಗೆ ಅಂಟಿಕೊಂಡಂತೆ ತುಂಗಭದ್ರಾ ನದಿಯ ಎಲ್ಎಲ್ ಸಿ ಕಾಲುವೆಯಿದೆ. ಆದ್ರೆ ವೇದಾವತಿ ನದಿಯ ಸೇತುವೆಯ ಪಿಲ್ಲರ್ ಗಳು ಕುಸಿದ ಪರಿಣಾಮ ಎಲ್ಎಲ್ ಸಿ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ. ಅಕ್ಟೋಬರ್ 13ರಿಂದ ರೈತರ ಜಮೀನುಗಳಿಗೆ ನೀರಿಲ್ಲದ ಪರಿಣಾಮ ಬೆಳೆಗಳೆಲ್ಲಾ ಬತ್ತಿ ಹೋಗುತ್ತಿವೆ.
ತುಂಗಭದ್ರಾ ಜಲಾಶಯದ ನೀರನ್ನೇ ನಂಬಿಕೊಂಡು ಭತ್ತ ಮೆಣಿಸಿನಕಾಯಿ ಬೆಳೆ ಬೆಳೆಯುವ ರೈತರಿಗೆ ನೀರಿಲ್ಲದಾಗಿದೆ. ಹೀಗಾಗಿ ಬಳ್ಳಾರಿ ಗ್ರಾಮಿಣ, ಸಿರಗುಪ್ಪ ಹಾಗೂ ಪಕ್ಕದ ಆಂಧ್ರ ಪ್ರದೇಶದ ಹತ್ತಾರು ಹಳ್ಳಿಗಳ ರೈತರ ಬೆಳೆಗಳಿಗೆ ಇದೀಗ ನೀರಿಲ್ಲದಾಗಿದೆ. ಹೀಗಾಗಿ ಸೇತುವೆಯ ಪಿಲ್ಲರ್ ಕಾಮಗಾರಿಯನ್ನ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವವರೆಗೂ ಸ್ಥಳದಿಂದ ಕದಲಲ್ಲ ಎಂದು ಸಚಿವ ಶ್ರೀರಾಮುಲು ಪಟ್ಟು ಹಿಡಿದು ಕುಳಿತಿದ್ದಾರೆ. ನಿನ್ನೆ (ನ.01) ಬರದಾನಹಳ್ಳಿ ಬಳಿಯ ಸೇತುವೆಯ ಪಕ್ಕದಲ್ಲೇ ವಾಸ್ತವ್ಯ ಹೂಡಿರುವ ಸಚಿವರು ರಾತ್ರಿ ನದಿ ಪಕ್ಕದಲ್ಲೇ ಮಲಗಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ.
ಬಳ್ಳಾರಿಯಲ್ಲಿ ಸೇತುವೆ ದುರಸ್ತಿ ಕಾಮಗಾರಿ ವಿಳಂಬ ವಿರೋಧಿಸಿ ವೇದಾವತಿ ನದಿ ದಡದಲ್ಲೇ ರಾತ್ರಿ ಕಳೆದ ಸಚಿವ ಶ್ರೀರಾಮುಲು
ರೈತರ ಜಮೀನುಗಳಿಗೆ ನೀರು ಹರಿಯುವವರೆಗೂ ಸ್ಥಳ ಬಿಟ್ಟು ಕದಲಲ್ಲ ಅಂತಿರೋ ಸಚಿವರು ನದಿ ದಡದಲ್ಲಿ ಮಲಗಿ ಇಂದು(ನ.02) ಮುಂಜಾನೆ ಶಿವಪೂಜೆ ನಡೆಸಿದ್ರು. ರೈತರ ಜಮೀನುಗಳಿಗೆ ನೀರುಣಿಸುವವರೆಗೂ ನಾನೂ ಸ್ಥಳದಿಂದ ಕದಲಲ್ಲ. ನಾನು ಇಲ್ಲೇ ಇರ್ತೇನೆ. ಕಾಲುವೆ ಹಾಗೂ ರೈತರ ಜಮೀನುಗಳಿಗೆ ನೀರು ಹರಿಸಯೇ ಸ್ಥಳದಿಂದ ಹೋಗುವುದಾಗಿ ಸಚಿವರು ಪಟ್ಟು ಹಿಡಿದಿದ್ದಾರೆ. ಪರಿಣಾಮ ಟಿಬಿ ಬೋರ್ಡ್ ಕಾಮಗಾರಿ ಚುರುಕುಗೊಳಿಸಿದೆ.
ಸೇತುವೆ ದುರಸ್ತಿ ಕಾಮಗಾರಿ ಆರಂಭವಾದ ನಂತರ ಸ್ಥಳಕ್ಕೆ ಮೊದಲು ಭೇಟಿ ನೀಡಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ರು. ಆದ್ರೆ ಶಾಸಕ ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿದ ಸುದ್ದಿ ತಿಳಿದ ನಂತರ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿದ ಸಚಿವ ಶ್ರೀರಾಮುಲು ರೈತರ ಜಮೀನುಗಳಿಗೆ ನೀರು ಹರಿಸುವವರೆಗೂ ಸ್ಥಳ ಬಿಟ್ಟು ಕದಲಲ್ಲ ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ. ಇದಕ್ಕೆ ಕಾಂಗ್ರೆಸ್ ಶಾಸಕ ನಾಗೇಂದ್ರ ಸಹ ಹೊರತಾಗಿಲ್ಲ.
ಇಂದು ನಸುಕಿನ ಜಾವವೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ನಾಗೇಂದ್ರ. ಅವರ ಸಹೋದರರಾಗಿರುವ ಆಂಧ್ರದ ಸಚಿವ ಗುಮ್ಮನೂರ ಜಯರಾಂರನ್ನ ಸ್ಥಳಕ್ಕೆ ಕರೆಯಿಸಿಕೊಂಡು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ರು. ರೈತರ ಜಮೀನುಗಳಿಗೆ 2-3 ದಿನಗಳಲ್ಲಿ ನೀರು ಹರಿಸದಿದ್ದರೇ ರೈತರ ಬೆಳೆಗಳೆಲ್ಲಾ ಬತ್ತಿ ಹೋಗಲಿವೆ, ಹೀಗಾಗಿ ರೈತರ ಜಮೀನುಗಳಿಗೆ ನೀರು ಹರಿಸಿಯೇ ಸ್ಥಳದಿಂದ ಹೋಗುವುದಾಗಿ ಶಾಸಕ ನಾಗೇಂದ್ರ ಸಹ ಪಟ್ಟು ಹಿಡಿದು ಕುಳಿತಿದ್ದಾರೆ. ಸಚಿವರು ಪಟ್ಟು ಹಿಡಿದು ಕುಳತಿರುವುದು ತಪ್ಪಲ್ಲ. ನಮ್ಮ ರೈತರಿಗೆ ನಾವೆಲ್ಲಾ ಪಕ್ಷಾತೀತವಾಗಿ ನೀರು ಕೊಡಿಸಬೇಕಾಗಿದೆ ಒಟ್ಟಿನಲ್ಲಿ ರೈತರಿಗೆ ಒಳ್ಳೆಯದಾದ್ರೆ ಸಾಕು ಎನ್ನುವುದು ಶಾಸಕ ನಾಗೇಂದ್ರ ಅವರ ಮಾತು.
ಎಲ್ಎಲ್ ಸಿ ಕಾಲುವೆಗಳಿಗೆ ನೀರು ಸ್ಥಗಿತವಾದ ನಂತರ ಈಗಾಗಲೇ ಸೇತುವೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಇನ್ನೊಂದೆಡೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣೀಟ್ಟಿರುವ ಸಚಿವರು, ಶಾಸಕರು ರೈತರ ಜಮೀನುಗಳಿಗೆ ನೀರು ಹರಿಸುವ ವಿಚಾರದಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಇದ್ರಿಂದ ಕಾಮಗಾರಿ ಚುರುಕುಗೊಂಡಿದ್ರು, ಕೆಲವರು ಸಚಿವರು ಶಾಸಕರ ವಾಟರ್ ಪೊಲಿಟಿಕ್ಸ್ ಜೋರಾಗಿದೆ ಎನ್ನುತ್ತಿದ್ದಾರೆ.
ರಾಜಕಾರಣ ಏನೇ ಇರಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ, ಮೆಣಸಿನಕಾಯಿ ಬೆಳೆ ಒಣಗುವ ಮುನ್ನವೇ ರೈತರ ಜಮೀನುಗಳಿಗೆ ನೀರು ಹರಿದುಬಂದ್ರೆ ಸಾಕು ಅಂತಿದ್ದಾರೆ ರೈತರು.
Published On - 11:28 pm, Wed, 2 November 22