ವಿಜಯನಗರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕುಟುಂಬ ಸಮೇತವಾಗಿ ವಿಶ್ವ ವಿಖ್ಯಾತ ಹಂಪಿಗೆ ಇಂದು ಭೇಟಿ ನೀಡಿ ಸ್ಮಾರಕಗಳ ವೀಕ್ಷಣೆ ಮಾಡಿ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತರು. ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ, ಅವರ ಪತ್ನಿ ಮಲ್ಲಿಕಾ ನಡ್ಡಾ, ಪುತ್ರರಾದ ಹರಿಚಂದ್ರ ನಡ್ಡಾ, ಗಿರೀಶಚಂದ್ರ ನಡ್ಡಾ ಹಾಗೂ ಸೊಸೆಯೊಂದಿಗೆ ಹಂಪಿಯ ವಿರುಪಾಕ್ಷೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಸ್ಮಾರಕಗಳನ್ನ ವೀಕ್ಷಣೆ ಮಾಡಿ ಸಂಭ್ರಮಿಸಿದರು (BJP President JP Nadda visit to Hampi).
ವಿಜಯನಗರ ಸಾಮ್ರಾಜ್ಯದ ವೈಭವ ಕಂಡು ಅಚ್ಚರಿ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸಪ್ತ ಸ್ವರಗಳಗಳಿಗೆ ಕಿವಿಗೊಟ್ಟು ಆಲಿಸಿದ್ರು.. ಹೌದು, ಹಂಪಿಯ ಸೊಬಗು, ಸ್ಮಾರಕಗಳ ಕಲಾವೈಭವ, ಸಾಲು ಕಂಬಗಳು, ಸಾವಿರಾರು ಸ್ಮಾರಕಗಳು ನೋಡುವುದೇ ಕಣ್ಣಿಗೆ ಹಬ್ಬ. ಅಂತಹ ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕುಟುಂಬ ಸಮೇತರಾಗಿ ಭೇಟಿ ನೀಡಿ, ಇಡೀ ದಿನ ಸ್ಮಾರಕಗಳನ್ನು ವೀಕ್ಷಿಸಿ ಬೆರಗಾದರು. ನಿನ್ನೆ ಇಡೀ ದಿನ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬ್ಯುಸಿಯಾಗಿದ್ದ ಜೆಪಿ ನಡ್ಡಾ ಇಂದು ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯೊಂದಿಗೆ ಹಂಪಿಗೆ ಭೇಟಿ ನೀಡಿ ಸ್ಮಾರಕಗಳ ವೀಕ್ಷಣೆ ಮಾಡಿದ್ರು.
ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ
ಇಂದು ಬೆಳಗ್ಗೆ ಹಂಪಿಯ ವಿರುಪಾಕ್ಷೇಶ್ವರ ದೇವಾಲಯಕ್ಕೆ ಆಗಮಿಸಿದ ಜೆಪಿ ನಡ್ಡಾಗೆ ವಿರುಪಾಕ್ಷೇಶ್ವರ ದೇಗುಲದ ಆನೆಯಿಂದ ಮಾರ್ಲಾಪಣೆ ಮಾಡಿಸಲಾಯ್ತು. ನಂತರ ವಿರುಪಾಕ್ಷೇಶ್ವರನಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಹಂಪಿ ವಿದ್ಯಾರಣ್ಯ ಪೀಠದ ಭಾರತೀ ಸ್ವಾಮೀಜಿಗಳಿಂದ ವಿಜಯನಗರದ ಇತಿಹಾಸ ಮತ್ತು ವಿರೂಪಾಕ್ಷೇಶ್ವರನಿಗೆ ಶ್ರೀಕೃಷ್ಣ ದೇವರಾಯ ಅರ್ಪಿಸಿದ ಬಂಗಾರದ ಮುಖವಾಡದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಉದ್ದಾನ ವೀರಭದ್ರೇಶ್ವರ, ಉಗ್ರ ನಾರಸಿಂಹ, ಕಡಲೆಕಾಳು ಗಣಪ, ಸಾಸಿವೆ ಕಾಳು ಗಣಪ, ಕಮಲ್ ಮಹಲ್ ಮಹಾನವಮಿ ದಿಬ್ಬ ವೀಕ್ಷಣೆ ಮಾಡಿದರು.
ಕಲ್ಲಿನ ತೇರಿನ ಮುಂದೆ ಪೋಟೋಗೆ ಪೋಸ್.. ಸಪ್ತಸ್ವರ ಕಂಬಕ್ಕೆ ಕಿವಿಗೊಟ್ಟ ನಡ್ಡಾ
ಜೆಪಿ ನಡ್ಡಾ ಕುಟುಂಬ ಹಂಪಿಯ ಐತಿಹಾಸಿಕ ಐಕಾನಿಕ್ ವಿಜಯ ವಿಠ್ಠಲ ದೇಗುಲದಲ್ಲಿನ ಕಲ್ಲಿನ ತೇರು ವೀಕ್ಷಣೆ ಮಾಡಿದ್ರು. ಈ ವೇಳೆ 50 ರೂಪಾಯಿ ನೋಟಿನಲ್ಲಿರುವ ಕಲ್ಲಿನ ತೇರಿನ ಭಾವಚಿತ್ರ ನೋಡಿ ಬೆರಗಾದ ನಡ್ಡಾ, ನೋಟಿನೊಂದಿಗೆ ಕಲ್ಲಿನ ರಥದ ಪೋಟೋ ತಗೆಸಿಕೊಂಡರು. ಸಪ್ತಸ್ವರಗಳ ಕಂಬಗಳ ನಿನಾದ ಆಲಿಸಿದ ನಡ್ಡಾ ಹಾಗೂ ಕುಟುಂಬಸ್ಥರು ಕಿವಿಗೊಟ್ಟು ಸ್ವರ ಕಂಬದಲ್ಲಿ ಬರುವ ಸ್ವರ ಆಲಿಸಿದರು. ಹಂಪಿ ವೀಕ್ಷಣೆ ನಂತರ ಮಾತನಾಡಿದ ಜೆ.ಪಿ. ನಡ್ಡಾ, ಐತಿಹಾಸಿಕ ದೃಷ್ಟಿಯಿಂದ ನಮ್ಮ ಪೂರ್ವಜರು ಋಷಿ ಮುನಿಗಳು ಎಷ್ಟೊಂದು ಜ್ಞಾನಿ ಮಾಹಿತಿಯುಳ್ಳವರು ಎಂದು ತಿಳಿಯಬಹುದು. ಹಂಪಿಯನ್ನು ಯುನಸ್ಕೋ ಪಟ್ಟಿಯಲ್ಲಿ ಸೇರಿಸಿರುವುದು ನಮ್ಮ ಹೆಮ್ಮೆ. ಹಂಪಿಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.
ಪ್ರವಾಸಿಗರೊಂದಿಗೂ ಪೋಟೋ ಸೆಷನ್
ಹಂಪಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಂದಿಗೆ ಉಭಯ ಕುಶಲೋಪರಿಯಾಗಿ ಚರ್ಚಿಸಿದ ನಡ್ಡಾ ಅವರು ಪ್ರವಾಸಿಗರು, ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರೊಂದಿಗೆ ನಗುಮೊಗದಿಂದ ಪೋಟೋ ತಗೆಸಿಕೊಂಡರು. ಜೆಪಿ ನಡ್ಡಾ ಹಾಗೂ ಕುಟುಂಬಸ್ಥರು ಹಂಪಿ ಸ್ಮಾರಕಗಳ ವೀಕ್ಷಣೆ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ್ ಕಟೀಲ್, ಸ್ಥಳೀಯ ಜನಪ್ರಿಯ ನಾಯಕ- ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರುಗಳು ಹೆಜ್ಜೆ ಹೆಜ್ಜೆಗೂ ನಡ್ಡಾ ಕುಟುಂಬಕ್ಕೆ ಹಂಪಿಯ ಇತಿಹಾಸದ ಬಗ್ಗೆ ವಿವರಿಸುತ್ತಿದ್ದರು.
ಪುಲ್ ರಿಲ್ಯಾಕ್ಸ್! ಸದಾ ರಾಜಕಾರಣದಲ್ಲಿ ಬ್ಯೂಸಿಯಾಗಿರುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಕುಟುಂಬದೊಂದಿಗೆ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿ ಕುಟುಂಬ ಸಮೇತವಾಗಿ, ಹಂಪಿ ವೀಕ್ಷಣೆ ಮಾಡಿ ಮರಳಿ ದೆಹಲಿಗೆ ತೆರಳಿದರು.
ಹಂಪಿ ಭೇಟಿ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್:
ಹಂಪಿ ಸೊಬಗನ್ನು ಕಣ್ತುಂಬಿಸಿಕೊಳ್ಳುವುದಕ್ಕೆ ಜೆಪಿ ನಡ್ಡಾ ಅವರು ತಮ್ಮ ಕುಟುಂಬಕ್ಕಷ್ಟೇ ಸೀಮಿತವಾಗಲಿಲ್ಲ. ಜೊತೆಗೆ, ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ದೇಶವಾಸಿಗಳು ದೇಶದಲ್ಲಿನ ಅದ್ಭುತ ಸ್ಥಳಗಳನ್ನು ಸಂದರ್ಶಿಸಬೇಕು ಎಂದು ಕರೆ ನೀಡಿದ್ದಾರೆ. ಅದರಲ್ಲಿ ಐತಿಹಾಸಿಕ ಹಂಪಿ ಸಹ ಒಂದು. ನಮ್ಮ ಜನ ತಪ್ಪದೆ ಹಂಪಿಗೆ ಬಂದು ಮನಸೂರೆಗೊಳ್ಳುವ ಸೊಬಗನ್ನು ಕಣ್ತುಂಬಿಕೊಳ್ಳಬೇಕು ಎಂದು ನಾನು ಔಚಿತ್ಯಪೂರ್ಣವಾಗಿ ಆಶಿಸುತ್ತೇವೆ ಎಂದೂ ಅವರು ಫೋಟೋಗಳ ಸಮೇತ ಟ್ವೀಟ್ ಮಾಡಿ, ಹರ್ಷ ಪಟ್ಟಿದ್ದಾರೆ.
Our Hon. PM @narendramodi ji urged our citizens to promote tourism in our country by visiting the many majestic sites of India. Hampi, is one such site and on this #WorldHeritageDay, I encourage our people to come visit this grand spectacle of the past and bask in its glory.
— Jagat Prakash Nadda (@JPNadda) April 18, 2022
Published On - 5:51 pm, Mon, 18 April 22