ಬಳ್ಳಾರಿ: ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; ಕಾರ್ಮಿಕ ಸಾವು, ಒಬ್ಬ ಗಂಭೀರ

| Updated By: Rakesh Nayak Manchi

Updated on: Jan 14, 2024 | 7:12 PM

ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಬಳಿಯ ಕಲ್ಲಿನ ಕ್ವಾರಿನಲ್ಲಿದ್ದ ನೀರಿನಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ರಾಮನಗರದಲ್ಲಿ ದನಗಳ ಮೈತೊಳೆಯಲು ಕೆರೆಗೆ ಇಳಿದ ವ್ಯಕ್ತಿ ನೀರು ಪಾಲಾದ ಘಟನೆ ನಡೆದಿದೆ.

ಬಳ್ಳಾರಿ: ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; ಕಾರ್ಮಿಕ ಸಾವು, ಒಬ್ಬ ಗಂಭೀರ
ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದಲ್ಲಿರುವ ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ
Follow us on

ಬಳ್ಳಾರಿ, ಜ.14: ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬಳ್ಳಾರಿಯ (Ballari) ಗುಗ್ಗರಹಟ್ಟಿ ಪ್ರದೇಶದಲ್ಲಿ ನಡೆದಿದೆ. ಸಲೀಂ ಮೃತ ದುರ್ದೈವಿಯಾಗಿದ್ದಾರೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರು ಭರತ್ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಳ್ಳಲು ಕಾರಣ ತಿಳಿದುಬಂದಿಲ್ಲ. ತನಿಖೆ ನಂತರವಷ್ಟೇ ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿದು ಬರಲಿದೆ.

ಕೊಪ್ಪಳ: ಈಜಲು ಹೋಗಿದ್ದ ಬಾಲಕ ನೀರುಪಾಲು

ಕೊಪ್ಪಳ: ಈಜಲು ಹೋಗಿದ್ದ ಬಾಲಕನೊಬ್ಬ ನೀರುಪಾಲಾದ ಘಟನೆ ಜಿಲ್ಲೆಯ ಕುಕನೂರು ಬಳಿಯ ಕಲ್ಲಿನ ಕ್ವಾರಿಯಲ್ಲಿ ನಡೆದಿದೆ. ಪ್ರದೀಪ್‌ (15) ಮೃತ ದುರ್ದೈವಿ. ರಜೆ ಹಿನ್ನೆಲೆ ಈಜಾಡಲೆಂದು ಕುಕನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಂಪೌಂಡ್ ಹಾರಿ ಮೂವರು ವಿದ್ಯಾರ್ಥಿಗಳು ಕಲ್ಲುಕ್ವಾರಿ ಬಳಿ ಬಂದಿದ್ದರು. ಹೊಂಡದಲ್ಲಿ ನೀರು ತುಂಬಿದ್ದು, ಇದಕ್ಕೆ ಇಳಿದ ಮೂವರು ಬಾಲಕರ ಪೈಕಿ ಪ್ರದೀಪ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಕಾರವಾರ: ಹೊಳೆಯಲ್ಲಿ ಮುಳುಗುತ್ತಿರುವವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು

ಬಾಲಕನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಾಲಕನ ಸಾವಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾಮನಗರ: ದನಗಳ ಮೈತೊಳೆಯಲು ಕೆರೆಗೆ ಇಳಿದ ವ್ಯಕ್ತಿ ನೀರುಪಾಲು

ರಾಮನಗರ: ದನಗಳ ಮೈತೊಳೆಯಲೆಂದು ಕೆರೆಗೆ ಇಳಿದ ವ್ಯಕ್ತಿ ನೀರುಪಾಲಾದ ಘಟನೆ ಜಿಲ್ಲೆಯ ಚನ್ನಪಟ್ಟಣ ‌ತಾಲೂಕಿನ‌ ಕೋಮನಹಳ್ಳಿಯಲ್ಲಿ ನಡೆದಿದೆ. ರಾಮಸಂಜೀವಯ್ಯ (40) ಎಂಬವರು ಸಂಕ್ರಾಂತಿ ಹಿನ್ನೆಲೆ ದನಗಳ ಮೈತೊಳೆಯಲು ಕೆರೆ ಬಳಿ ಹೋಗಿದ್ದರು. ಈ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬದಿ ಶೋಧಕಾರ್ಯ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ