ಬಳ್ಳಾರಿ: ವಾರದೊಳಗೆ ಮೇಯರ್ ಚುನಾವಣೆ ನಡೆಸದಿದ್ದರೆ ಹೋರಾಟ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ (Syed Naseer Hussain) ಎಚ್ಚರಿಕೆ ನೀಡಿದ್ದಾರೆ. ಪಾಲಿಕೆ (Ballari City Corporation) ಚುನಾವಣೆ ನಡೆದು 9 ತಿಂಗಳಾದರೂ ಮೇಯರ್, ಉಪಮೇಯರ್ ಚುನಾವಣೆ ನಡೆಯದ ಕುರಿತು ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇಯರ್ ಚುನಾವಣೆ ನಡೆಸುವಂತೆ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಪಾಲಿಕೆ ಚುನಾವಣೆ ನಡೆದು 9 ತಿಂಗಳಾದರೂ ಪ್ರಾದೇಶಿಕ ಆಯುಕ್ತರು, ಡಿಸಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಹೊಸಪೇಟೆ ನಗರಸಭೆ ಚುನಾವಣೆ ನಡೆದ 15 ದಿನದಲ್ಲೇ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಎಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲವೋ ಅಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಬಳ್ಳಾರಿ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಕ್ಕಿದೆ. 26 ಕಾರ್ಪೊರೇಟರ್, ಮೂವರು ಚುನಾಯಿತ ಪ್ರತಿನಿಧಿಗಳಿದ್ದಾರೆ. ಬಳ್ಳಾರಿ ಪಾಲಿಕೆಯಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ನಮ್ಮ ಸದಸ್ಯರಿಗೆ ಕೋಟಿ ಕೋಟಿ ಹಣದ ಆಮಿಷವೊಡ್ಡುತ್ತಿದ್ದಾರೆ. ಕಾಂಗ್ರೆಸ್ ಸದಸ್ಯರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಾಸಿರ್ ಹುಸೇನ್ ಗಂಭೀರ ಆರೋಪ ಮಾಡಿದ್ದಾರೆ.
‘ಕೈ’ ಸದಸ್ಯರ ಮನೆಗಳಿಗೆ ಹೋಗಿ ಅಲಿಖಾನ್ ಮಾತಾಡುತ್ತಿದ್ದಾರೆ. ನಮ್ಮ ಬಾಸ್ ಕಳಿಸಿದ್ದಾರೆಂದು ಸದಸ್ಯರಿಗೆ ಆಮಿಷವೊಡ್ಡುತ್ತಿದ್ದಾರೆ. ಕೋಟಿ ಕೋಟಿ ಹಣ, ಕಾರು ನೀಡುವುದಾಗಿ ಸದಸ್ಯರಿಗೆ ಆಮಿಷ ನೀಡಲಾಗುತ್ತಿದೆ. ಅಲಿಖಾನ್ ಯಾರೆಂದು ಬಳ್ಳಾರಿ ಜಿಲ್ಲೆ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ನಾಸೀರ್ ಹುಸೇನ್ ಹೇಳಿದ್ದಾರೆ.
ವಾರದೊಳಗೆ ಮೇಯರ್ ಉಪಮೇಯರ್ ಚುನಾವಣೆ ನಡೆಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಜನರ ತೀರ್ಮಾನಕ್ಕೆ ತಲೆಬಾಗಿ ಮೇಯರ್ ಉಪಮೇಯರ್ ಚುನಾವಣೆ ನಡೆಸಬೇಕು. ಹಿಂದೆ ನಡೆದ ರೀತಿ ರಿಪಬ್ಲಿಕ್ ಬಳ್ಳಾರಿ ಮಾಡಲು ಬಿಡಲ್ಲ. ನಮ್ಮ 7 ಸದಸ್ಯರು, 5 ಸದಸ್ಯರು ಈಗಾಗಲೇ ಒಪ್ಪಿಕೊಂಡಿದ್ದಾರೆ. ನೀವೂ ಬನ್ನಿ ಎಂದು ಸದಸ್ಯರನ್ನು ಸೆಳೆಯುತ್ತಿದ್ದಾರೆ. ಕಾಂಗ್ರೆಸ್ ಸದಸ್ಯರು ಅವರ ಬಳಿ ಹೋಗದಿದ್ದರೂ, ಅವರೇ ನಮ್ಮ ಸದಸ್ಯರ ಮನೆಗೆ ಬಂದೂ ಆಫರ್ ಮಾಡುತ್ತಿದ್ದಾರೆ ಎಂದು ಹುಸೇನ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಉಪಸ್ಥಿತರಿದ್ದರು.
ಇದನ್ನೂ ಓದಿ:
ಆಹೋರಾತ್ರಿ ಧರಣಿಗೆ ಸರ್ಕಾರದ ಊಟ ಬೇಡ ಎಂದ ಕಾಂಗ್ರೆಸ್: ಅಶೋಕ್ ಟೀಕೆಗೆ ಕಾಂಗ್ರೆಸ್ ಸೆಡ್ಡು
ಯಾವುದೇ ಶಾಲಾ-ಕಾಲೇಜಿನಲ್ಲಿ ಕುಂಕುಮ, ಬಳೆ ವಿವಾದ ಉದ್ಭವಿಸಿಲ್ಲ: ಬಿಸಿ ನಾಗೇಶ್