ಯಾವುದೇ ಶಾಲಾ-ಕಾಲೇಜಿನಲ್ಲಿ ಕುಂಕುಮ, ಬಳೆ ವಿವಾದ ಉದ್ಭವಿಸಿಲ್ಲ: ಬಿಸಿ ನಾಗೇಶ್
ಹೈಕೋರ್ಟ್‌ನ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಆದೇಶ ಉಲ್ಲಂಘಿಸಿದರೆ ಪ್ರಕರಣ ದಾಖಲು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ತುಮಕೂರು: ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕುಂಕುಮ ಮತ್ತು ಬಳೆಯ ವಿವಾದ ಉದ್ಘವಿಸಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಹಿಜಾಬ್, ಕೇಸರಿ ಶಾಲು ನಡುವೆ ಕುಂಕುಮ, ಬಳೆಯ ಪ್ರಸ್ತಾಪ ಏಕೆ? ಸದ್ಯಕ್ಕೆ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿವಾದ ನಡೆಯುತ್ತಿದೆ. ಇದರಲ್ಲಿ ಕಾಣದ ಕೈ ಅಂತ ಯಾವುದೂ ಇಲ್ಲ. ಕಾಣುವ ಕೈ ಎಲ್ಲವನ್ನೂ ಮಾಡುತ್ತಿದೆ. ಇಂಥ ವಿವಾದ ತೆಗೆದು ಸಮಾಜದ ಸಾಮರಸ್ಯ ಹಾಳು ಮಾಡಬೇಡಿ. ತುಮಕೂರಿನಲ್ಲಿ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ವಿಚಾರದ ಬಗ್ಗೆ ಮಾತನಾಡಿದ ಅವರು, ಹೈಕೋರ್ಟ್‌ನ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಆದೇಶ ಉಲ್ಲಂಘಿಸಿದರೆ ಪ್ರಕರಣ ದಾಖಲು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಕೆಲವು ಹೆಣ್ಣುಮಕ್ಕಳು ಕುಂಕುಮ-ಸಿಂಧೂರ ವಿಷಯಗಳ ಬಗ್ಗೆ ಪ್ರಸ್ತಾಪಿಸಿರುವುದನ್ನು ನಾನೂ ಕೂಡ ಟಿವಿಯಲ್ಲಿ ನೋಡಿದ್ದೇನೆ. ವಿಷಯವೇ ಇಲ್ಲದೆ ಹೈಕೋರ್ಟ್ನಲ್ಲಿ ಈ ಬಗ್ಗೆ ಮಾತನಾಡುವ ಕೆಲವು ಲಾಯರ್ಗಳನ್ನೂ ನೋಡಿದ್ದೇನೆ. ಸಧ್ಯಕ್ಕೆ ಸಮವಸ್ತ್ರದ ಮಾತುಗಳನ್ನು ಬಿಟ್ಟರೆ ಬೇರೆ ಯಾವುದೇ ವಿಚಾರಗಳೂ ಪ್ರಸ್ತಾಪವಾಗಿಲ್ಲ. ಯಾವುದೇ ಶಾಲಾ ಕಾಲೇಜುಗಳಲ್ಲಿ ಈ ತರಹದ ವಿಚಾರಗಳು ನಡೆದಿಲ್ಲ. 1985ರಿಂದ ಯಾವ ಸಮವಸ್ತ್ರ ಧರಿಸಿಕೊಂಡು ಬರುತ್ತಿದ್ದವರು ಇಂದು ಪ್ರಶ್ನಿಸುತ್ತಿದ್ದಾರೆ. ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಬರಬೇಕು ಎಂಬ ಸರ್ಕಾರದ ಆದೇಶ ಇರುವುದು ಎಲ್ಲರಿಗೂ ಗೊತ್ತಿದೆ. ಹಿಜಾಬ್, ಕೇಸರಿ ಶಾಲು, ಸ್ಕಾರ್ಫ್ಗಳನ್ನು ಹಾಕಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ಬರಬಾರದು ಎಂದು ಕೋರ್ಟ್ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.
ಇಂಥ ವಿಚಾರಗಳನ್ನು ದೊಡ್ಡದು ಮಾಡಿ ಸಮಾಜದಲ್ಲಿರುವ ಸಾಮರಸ್ಯವನ್ನು ಹಾಳುಮಾಡಬೇಡಿ. ಇದರಲ್ಲಿ ಕಾಣದ ಕೈ ಅಂತ ಯಾವುದೂ ಇಲ್ಲ. ಸಿಎಫ್ಐ ಸಂಘಟನೆ ಈ ವಿಚಾರದಲ್ಲಿ ಇನ್ವಾಲ್ವ್ ಆಗ್ತಿದೆ. ರಾಜಕೀಯ ನಾಯಕರು ಏನೆಲ್ಲಾ ಮಾತನಾಡುತ್ತಿದ್ದಾರೆ ಎನ್ನುವುದನ್ನು ನೋಡುತ್ತಿದ್ದೇವೆ. ತುಮಕೂರಿನಲ್ಲಿ ಹೆಸರನ್ನೇ ಉಲ್ಲೇಖಿಸದೇ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ದಾಖಲಿಸುವ ವಿಚಾರ ಪ್ರಸ್ತಾಪಿಸಿದ ಅವರು, ಹೈಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹೈಕೋರ್ಟ್ ಆದೇಶವನ್ನು ನಾವು, ವಿದ್ಯಾರ್ಥಿಗಳೆಲ್ಲರೂ ಪಾಲಿಸಬೇಕು. ಅವರಿಗೆ ಶಿಕ್ಷಣ ಕೊಡುವುದೇ ಒಳ್ಳೆಯ ಪ್ರಜೆಗಳಾಗಬೇಕು ಎಂದು. ಹೈಕೋರ್ಟ್ ಆದೇಶ ಉಲ್ಲಂಘನೆಯಾದಾಗ ಪ್ರಕರಣ ದಾಖಲಿಸುವುದು ಅನಿವಾರ್ಯವಾಗುತ್ತದೆ ಎಂದರು.
ಸಮವಸ್ತ್ರಕ್ಕೂ ಓಲೆ-ಜುಮುಕಿಗೂ ಸಂಬಂಧವಿಲ್ಲ
ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್ಕೋಡ್ ಇಲ್ಲ. ಡ್ರೆಸ್ಕೋಡ್ ಇರುವ ಕಾಲೇಜಿನಲ್ಲಿ ನಿಯಮ ಪಾಲಿಸಬೇಕು. ಮಲ್ಲೇಶ್ವರಂನ ಮಹಿಳಾ ಕಾಲೇಜಿನಲ್ಲಿ ಪ್ರಚೋದಿಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಹೋಗಿದ್ದರಂತೆ. ಯಾರು ಇವರನ್ನು ಪ್ರವೋಕ್ ಮಾಡ್ತಿದ್ದಾರೆ ಅನ್ನೋದು ತನಿಖೆಯಾಗ್ತಿದೆ. ಅಲಂಕಾರದ ವಸ್ತುಗಳ ಬಗ್ಗೆ ನಾವು ಯಾವತ್ತೂ ಮಾತಾಡಿಲ್ಲ. ಓಲೆ, ಜುಮುಕಿ, ಕುಂಕುಮ, ಲಿಫ್ಟಿಕ್ಗೆ ಡ್ರೆಸ್ಗೂ ಸಂಬಂಧವಿಲ್ಲ. ನೂತನ ಸಮವಸ್ತ್ರ ನೀತಿ ಜಾರಿ ಬಗ್ಗೆ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಹೈಕೋರ್ಟ್ ಆದೇಶದ ನಂತರ ತೀರ್ಮಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಹೈಸ್ಕೂಲ್ ಪ್ರಾರಂಭವಾದ ಬಳಿಕ ಕೆಲವೆಡೆ ಗೊಂದಲ ಆಗಿದೆ. ಎಲ್ಲರೂ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ನಿನ್ನೆ 112 ಮಕ್ಕಳು ಕಾಲೇಜಿನಿಂದ ವಾಪಸ್ ಹೋಗಿದ್ದಾರೆ. ಇವತ್ತು 38 ಮಕ್ಕಳು ಕಾಲೇಜಿನಿಂದ ವಾಪಸ್ ಹೋಗಿದ್ದಾರೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮತಕ್ಕಾಗಿ ಜನರ ದಾರಿ ತಪ್ಪಿಸಬೇಡಿ: ಸಿದ್ದರಾಮಯ್ಯಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿರುಗೇಟು