ಬಳ್ಳಾರಿ: ಗಣಿನಾಡಿನ ಜನರೇ ಎಚ್ಚರ ಎಚ್ಚರ… ಕೊರೊನಾ ಮೂರನೇ ಅಲೆ(Corona 3rd Wave) ಈಗಾಗಲೇ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಕೊರೊನಾ ಎರಡನೇ ಅಲೆ ಕಡಿಮೆಯಾದ ಬೆನ್ನಲ್ಲೇ ಈಗ ಮೂರನೇ ಅಲೆಯ ಭೀತಿ ಶುರುವಾಗಿದೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲೂ ಮೂರನೇ ಅಲೆ ಹೆಚ್ಚು ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಕಳೆದ ಬಾರಿಯ ನಿರ್ಲಕ್ಷ್ಯವನ್ನ ಜಿಲ್ಲಾಡಳಿತ ಮಾಡದೇ ಈಗಿನಿಂದಲೇ ತಯಾರಿ ನಡೆಸ್ತಿದೆ. ಅಂದಹಾಗೆ ಕೊರೊನಾ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ 60 ಸಾವಿರ ಪ್ರಕರಣಗಳು ದಾಖಲಾಗಿದ್ದವು. 8 ಸಾವಿರ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದ್ರೆ ಇದುವರೆಗೆ 6ಸಾವಿರದಷ್ಟಿರೋ ಸೊಂಕಿತರ ಸಂಖ್ಯೆ 3ನೇ ಅಲೆಯಲ್ಲಿ 1ಲಕ್ಷಕ್ಕೇರುವ ಸಾಧ್ಯತೆ ಇದೆ. ಹೀಗಾಗಿ ಹೊಸ ಕೊರೊನಾ ಕೇಸ್ಗಳನ್ನು ನಿಭಾಯಿಸೋ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಲು ರೆಡಿಯಾಗಿದೆ.
ಜಿಲ್ಲಾಡಳಿತದಿಂದ ಸಿದ್ಧತೆ ಶುರು
ಈಗಾಗಲೇ 20 ಸಾವಿರ ಕೊವಿಡ್ ಟೆಸ್ಟಿಂಗ್ ಕಿಟ್, 15 ಸಾವಿರ ರೆಮ್ಡಿಸಿವಿರ್ ಇಂಜೆಕ್ಷನ್ ಸೇರಿ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಸಂಗ್ರಹಿಸಲಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್,ಹೊಸಪೇಟೆ ಎಂಸಿಎಚ್ ಆಸ್ಪತ್ರೆ, ಹರಪನಳ್ಳಿ, ಹಡಗಲಿ ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯವಾದ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್ಗಳಲ್ಲಿ ಐಸಿಯು ಬೆಡ್‍ಗಳ ವ್ಯವಸ್ಥೆ ಹೆಚ್ಚಿಸಲಾಗುತ್ತಿದೆ ಮತ್ತು ಅಗತ್ಯ ಪ್ರಮಾಣದ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಕೊರೊನಾ ಸೊಂಕಿತರಿಗಾಗಿ 1 ಸಾವಿರ ಆಕ್ಸಿಜನ್ ಬೆಡ್ಗಳ ಜಿಂದಾಲ್ ಬಳಿಯ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯನ್ನು ಪುನಾರಂಭ ಮಾಡಲಾಗಿದೆ.
ಝೀರೋ ಆಗಿದ್ದ ಹೊಸ ಸೋಂಕಿತರ ಸಂಖ್ಯೆ ಈಗ ಮತ್ತೆ ಎರಡಂಕಿ ದಾಟುತ್ತಿದೆ. ಹೀಗಾಗಿ ಆಲರ್ಟ್ ಆಗಿರುವ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ. ಕೊರೊನಾ ಹರಡದಂತೆ ತಡೆಯಲು ಇರೋ ಪ್ರಮುಖ ಅಸ್ತ್ರವಾಗಿರೋ ದೈಹಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಜನಸಂದಣಿ ಹೆಚ್ಚಿರುವ ತರಕಾರಿ ಮತ್ತು ಹಣ್ಣು ಮಾರುಕಟ್ಟೆಗಳನ್ನು ಮೈದಾನಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮಾಸ್ಕ್ ಧರಿಸದೆ ದೈಹಿಕ ಅಂತರ ಕಾಪಾಡದೆ ಇದ್ದರೆ ದಂಡ ವಿಧಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಶೀಘ್ರದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸೋ ಬಗ್ಗೆ ನಿರ್ಧರಿಸ್ತೇವೆ ಅಂತಾ ಎಸ್ಪಿ ಸೈದುಲ್ ಅದಾವತ್ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಸಮರ್ಪಕವಾಗಿ ವೆಂಟಿಲೇಟರ್ ಸಿಗದೇ ಸೋಂಕಿತರು ಸಾವನ್ನಪ್ಪಿದ್ದಾರೆ. ಜೊತೆಗೆ ಹೋಮ್ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ಜಿಲ್ಲಾಡಳಿತ ಸರಿಯಾಗಿ ನಿಗಾವಹಿಸಲಿಲ್ಲ. ಹೀಗಾಗಿ ಎರಡನೇ ಅಲೆಯಲ್ಲಿ ಜಿಲ್ಲೆಯ ಜನರನ್ನ ಆತಂಕ ಸೃಷ್ಟಿಸಿತ್ತು. ಆದ್ರೆ ಮತ್ತೆ ಈ ತಪ್ಪುಗಳು ಆಗದಂತೆ ಜಿಲ್ಲಾಡಳಿತ ಈಗಿನಿಂದಲೇ ಎಚ್ಚೆತ್ತುಕೊಂಡಿದ್ದು ಮೂರನೇ ಅಲೆ ಎದುರಿಸಲು ಸಜ್ಜಾಗಿದೆ.
ಇದನ್ನೂ ಓದಿ: ತಣ್ಣೀರು ತರಲು ಚಿತಾಗಾರಕ್ಕೆ ಹೋದ 7 ವರ್ಷದ ಬಾಲಕಿ; ಮುಂದಾಗಿದ್ದೆಲ್ಲ ಊಹಿಸಲಾರದಷ್ಟು ಭೀಕರ
Published On - 11:52 am, Tue, 3 August 21