ನೂರಾರು ಉದ್ಯೋಗಿಗಳನ್ನ ಕೈಬಿಟ್ಟ ಜಿಂದಾಲ್ ಕಂಪನಿ; ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಸಿಬ್ಬಂದಿ, ಕುಟುಂಬಸ್ಥರ ಕಣ್ಣೀರು
ಒಂದು ಕಡೆ ಕೊರೊನಾ ಮಹಾಮಾರಿ ಹೊಡೆತ. ಮತ್ತೊಂದೆಡೆ ಆರ್ಥಿಕ ಸಂಕಷ್ಟ. ಇದ್ರ ನಡುವೆ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಲವಂತವಾಗಿ ರಾಜೀನಾಮೆ ಕೊಡಿಸಿ ಮನೆಗೆ ಕಳಿಸಿದ್ದಾರೆ ಅಂತಾ ಸಿಬ್ಬಂದಿ ಕುಟುಂಬಸ್ಥರು ಬೀದಿಗಿಳಿದು ಪ್ರತಿಭಟಿಸ್ತಿದ್ದು, ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ತೋರಣಗಲ್ಲು ಬಳಿಯ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ನೂರಾರು ಸಿಬ್ಬಂದಿಯನ್ನು ಮನೆಗೆ ಕಳಿಸಲಾಗಿದೆ. ಕೊರೊನಾ ನೆಪವೊಡ್ಡಿ ಸಿಬ್ಬಂದಿಗೆ ಗೇಟ್ಪಾಸ್ ನೀಡಿದ್ದಾರೆ. ಕೊರೊನಾ ಮಹಾಮಾರಿ ಕಾಲದಲ್ಲೇ ಇವ್ರನ್ನೆಲ್ಲಾ ಜಿಂದಾಲ್ ಕಂಪನಿ ಕೆಲಸದಿಂದ ತೆಗೆದುಹಾಕಿದ್ದರಿಂದ ಉದ್ಯೋಗಿಗಳು ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಉದ್ಯೋಗಿಗಳಿಂದ ಬಲವಂತವಾಗಿ ರಾಜೀನಾಮೆ ಪಡೆದು ಗೇಟ್ ಪಾಸ್ ನೀಡಿದ್ದಾರೆ ಅಂತಾ ಆರೋಪಿಸಲಾಗಿದೆ. ಹೀಗಾಗಿ ನೊಂದ ಜಿಂದಾಲ್ ಉದ್ಯೋಗಿಗಳು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ರು. ಆದ್ರೆ ಪ್ರತಿಭಟನೆ ನಡೆಸಿದ ಯಾವೊಬ್ಬ ಉದ್ಯೋಗಿಗಳಿಗೆ ಮತ್ತೆ ಕೆಲ್ಸ ಕೊಟ್ಟಿಲ್ಲ. ಪ್ರತಿಭಟನೆ ನಡೆಸದ ಉದ್ಯೋಗಿಗಳಿಗೆ ಮತ್ತೆ ಕೆಲ್ಸಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಕೆಲಸ ಸಿಗದೆ ಜಿಂದಾಲ್ ಮಾಜಿ ಉದ್ಯೋಗಿಗಳ ಬದುಕು ಮೂರಾಬಟ್ಟೆಯಾಗಿದೆ.
ಕೆಲ್ಸ ಕಳೆದುಕೊಂಡ ಜಿಂದಾಲ್ ಕಂಪನಿ ಮಾಜಿ ಉದ್ಯೋಗಿಗಳು ನಿರಂತರವಾಗಿ ನ್ಯಾಯಕ್ಕಾಗಿ ಅಲೆದಾಡುತ್ತಲೇ ಇದ್ದಾರೆ. ಜೊತೆಗೆ ನೊಂದ ಮಾಜಿ ಉದ್ಯೋಗಿಗಳು ದೇಶದ ಪ್ರಧಾನಿ ನರೇಂದ್ರ ಮೋದಿಗೆ ಕೂಡ ಪತ್ರ ಬರೆದು ಮನವಿ ಮಾಡಿದ್ದಾರೆ. ಕಲಬುರಗಿಯಲ್ಲಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಆದ್ರೆ ಜಿಂದಾಲ್ ಕಂಪನಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹತ್ತಾರು ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಕೆಲ್ಸ ಮಾಡಿದ್ದೇವೆ. ನಮಗೆ ಯಾವುದೇ ಪರಿಹಾರ ನೀಡದೇ ಏಕಾಏಕಿಯಾಗಿ ಕೆಲ್ಸದಿಂದ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಅಂತಾ ಜಿಂದಾಲ್ ಮಾಜಿ ಉದ್ಯೋಗಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ತಮ್ಮ ಕುಟುಂಬಕ್ಕೆ ಆಧಾರವಾಗಿದ್ದವ್ರನ್ನು ಕೆಲಸದಿಂದ ತೆಗೆದು ಹಾಕಿರೋದಕ್ಕೆ ಕುಟುಂಬಸ್ಥರೂ ಕಣ್ಣೀರು ಹಾಕ್ತಿದ್ದಾರೆ.
ಕೋವಿಡ್ ಹಾಗೂ ಆರ್ಥಿಕ ನಷ್ಟದ ನೆಪವೊಡ್ಡಿ ಜಿಂದಾಲ್ ಕಂಪನಿಯಲ್ಲಿ ಕೆಲ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ ಎನ್ನಲಾಗುತ್ತಿದೆ. ಆದ್ರೆ ಕೆಲ್ಸದಿಂದ ತೆಗೆದ ಉದ್ಯೋಗಿಗಳಿಗೆ ಕನಿಷ್ಠ ಪರಿಹಾರವಾದ್ರೂ ನೀಡ್ಬೇಕು. ಆದ್ರೆ ಅದ್ಯಾವುದನ್ನೂ ಮಾಡದ ಜಿಂದಾಲ್ ಕಂಪನಿ ಏಕಾಏಕಿಯಾಗಿ ಕೆಲ್ಸದಿಂದ ತೆಗೆದಿರುವುದು ಹಲವು ಮಾಜಿ ಉದ್ಯೋಗಿಗಳ ಕುಟುಂಬಗಳನ್ನ ಅಕ್ಷರಶ: ಬೀದಿಗೆ ಬೀಳುವಂತೆ ಮಾಡಿದೆ.
ಇದನ್ನೂ ಓದಿ: ಮತ್ತೆ ಯಡಿಯೂರಪ್ಪ ಸರ್ಕಾರದ ಬೆನ್ನುಹತ್ತಿದ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ವಿಚಾರ