ಬಳ್ಳಾರಿ: ಪಾಠ ನಡೆಯುತ್ತಿದ್ದ ಸಂದರ್ಭದಲ್ಲೇ ಶಾಲಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದಲ್ಲಿರುವ ಸುದೀಕ್ಷಾ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪವರ್ ಕಟ್ ಆಗಿ ಜನರೇಟರ್ ಆನ್ ಮಾಡಿದಾಗ ಜನರೇಟರ್ ರೂಮ್ ಹಾಗೂ ಮತ್ತೊಂದು ರೂಮ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಶಾಲೆಯಲ್ಲಿದ್ದ 150 ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿ ರಕ್ಷಿಸಿದ್ದಾರೆ.
ಶಾಲೆಯಲ್ಲಿ ಪಾಠ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಸ್ಥಗಿತ ಕೊಂಡಿತ್ತು. ಈ ಹಿನ್ನಲೆಯಲ್ಲಿ ಜನರೇಟರ್ ಆನ್ ಮಾಡಿದ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ. ಜನರೇಟರ್ ರೂಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಮತ್ತೊಂದು ಕೊಠಡಿಯಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಶಾಲಾ ಮಕ್ಕಳು ಆತಂಕಗೊಂಡಿದ್ದು ತಕ್ಷಣವೇ ಶಾಲಾ ಸಿಬ್ಬಂದಿ ಶಾಲೆಯಲ್ಲಿದ್ದ 150 ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿದ್ದಾರೆ. ಶಾಲೆಯ ಇನ್ನೊಂದು ಬಾಗಿಲಿನಿಂದ ಮಕ್ಕಳನ್ನ ಹೊರಗೆ ಕರೆತಂದಿದ್ದಾರೆ. ಶಾಲೆಯ ಜನರೇಟರ್ ರೂಂ ಹಾಗೂ ಒಂದು ಕೊಠಡಿಯಲ್ಲಿನ ವಸ್ತುಗಳು ಬೆಂಕಿಗಾಹುತಿಯಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ಭಾರಿ ಅವಘಡ ತಪ್ಪಿದೆ.
ಇದನ್ನೂ ಓದಿ: Video: ಹೈದರಾಬಾದ್ನ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ ಅಗ್ನಿ ಅವಘಡ, ಹಲವು ಕಾರುಗಳು ಬೆಂಕಿಗಾಹುತಿ
ಶಾಲೆಯ ಪಕ್ಕದಲ್ಲೆ ವಿಎಎಂ ಫುಡ್ ಬಜಾರಿನಲ್ಲಿ ಸುಮಾರು ಎರಡು ಕೋಟಿ ಅಂದಾಜು ಮೌಲ್ಯದ ದಾಸ್ತಾನು ಇತ್ತು. ಅಗ್ನಿಶಾಮಕ ಸಿಬ್ಬಂದಿ ಬರುವುದು ಸ್ವಲ್ಪ ತಡವಾಗಿದ್ದರೂ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸಿರಗುಪ್ಪ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಬೆಂಕಿ ನಂದಿಸಿದ್ದು ಯಾವುದೇ ಗಾಯ ಅಥವಾ ಅಹಿತಕರ ಘಟನೆ ಬಗ್ಗೆ ತಿಳಿದುಬಂದಿಲ್ಲ.
ಒಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ