ರಿಯಾಲಿಟಿ ಶೋ ನೋಡಿ ಸಾಧನೆ ಮಾಡಲು ಮನೆ ಬಿಟ್ಟ ನಾಲ್ವರು ಬಾಲಕಿಯರು; ಬಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಮರಳಿ ಮನೆಗೆ!
ಹೊರ ಬರುವ ಮುನ್ನ ಮನೆಯ ಮೊಬೈಲ್‌ನಲ್ಲಿ ‘ತಾವು ಬೇಗ ವಾಪಸ್ ಬರುತ್ತೇವೆ. ಏನಾದರೂ ಸಾಧನೆ ಮಾಡಿ ಬರುತ್ತೇವೆ‘ ಎಂದು ಆಡಿಯೋ ರೆಕಾರ್ಡ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಬೆಂಗಳೂರಿಗೆ ಹೋಗಲು ಬಸ್ ಚಾರ್ಜ್ಗೆಂದು ಮನೆಯ ದೇವರಿಗೆ ಇಟ್ಟಿದ್ದ 800 ರೂ. ಮುಡುಪು ಹಣವನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಸಂಜೆ 4-5 ಗಂಟೆ ಸುಮಾರಿಗೆ ಬೆಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ.
ಬಳ್ಳಾರಿ: ಮನೆಯಂಗಳದಲ್ಲಿ ಆಡಿಕೊಂಡಿರಬೇಕಾದ ಮಕ್ಕಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳನ್ನು ನೋಡಿ ಏನಾದ್ರು ಸಾಧನೆ ಮಾಡಬೇಕೆಂದು ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದು, ಕೆಎಸ್ಸಾರ್ಟಿಸಿ ಬಸ್ ಚಾಲಕ- ನಿರ್ವಾಹಕರ ಸಮಯ ಪ್ರಜ್ಞೆಯಿಂದ ಪುನಃ ಪೋಷಕರ ಮಡಿಲು ಸೇರಿದ ನಾಲ್ವರು ಬಾಲಕಿಯರ ಕಥೆಯಿದು.
ಬಳ್ಳಾರಿಯ ಪಾರ್ವತಿ ನಗರದ ನಿವಾಸಿಗಳಾದ ಚಂದ್ರಶೇಖರ, ವೀರೇಶ್ ಎನ್ನುವವರ ನಾಲ್ವರು ಬಾಲಕಿಯರು ಇನ್ನೂ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಸಹ ಪೂರೈಸದ ಈ ಮಕ್ಕಳಲ್ಲಿ ಈಗಲೇ ಏನಾದರು ಸಾಧನೆ ಮಾಡಬೇಕೆಂಬ ಛಲ ಹುಟ್ಟಿಕೊಂಡಿದೆ. ಪ್ರತಿನಿತ್ಯ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳನ್ನು ನೋಡಿರುವ ಈ ಮಕ್ಕಳು, ಶೋಗಳಲ್ಲಿ ತಾವು ಭಾಗವಹಿಸಿ ಸಾಧನೆ ಮಾಡುವುದಾಗಿ ಬಳ್ಳಾರಿಯಿಂದ ಏಪ್ರಿಲ್ 26 ರಂದು ಮಂಗವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಮನೆಬಿಟ್ಟು ಹೊರ ಬಂದಿದ್ದಾರೆ.
ಹೊರ ಬರುವ ಮುನ್ನ ಮನೆಯ ಮೊಬೈಲ್‌ನಲ್ಲಿ ‘ತಾವು ಬೇಗ ವಾಪಸ್ ಬರುತ್ತೇವೆ. ಏನಾದರೂ ಸಾಧನೆ ಮಾಡಿ ಬರುತ್ತೇವೆ‘ ಎಂದು ಆಡಿಯೋ ರೆಕಾರ್ಡ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಬೆಂಗಳೂರಿಗೆ ಹೋಗಲು ಬಸ್ ಚಾರ್ಜ್ಗೆಂದು ಮನೆಯ ದೇವರಿಗೆ ಇಟ್ಟಿದ್ದ 800 ರೂ. ಮುಡುಪು ಹಣವನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಸಂಜೆ 4-5 ಗಂಟೆ ಸುಮಾರಿಗೆ ಬೆಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ.
ಹೆದರಿದ ಮಕ್ಕಳು: ಬಸ್‌ನಲ್ಲಿ ಚಾಲಕ ರವಿಕುಮಾರ್, ನಿರ್ವಾಹಕ ಬಂದೇ ನವಾಜ್ ಅವರು ಮಕ್ಕಳನ್ನು ಗಮನಿಸಿದ್ದಾರೆ. ಟಿಕೇಟ್ ನೀಡುವಾಗ ನಿರ್ವಾಹಕ ಬಂದೇ ನವಾಜ್ ಎಲ್ಲಿಗೆ ಎಂದು ಕೇಳಿದಾಗ ತಮ್ಮಲ್ಲಿದ್ದ 800 ರೂ.ಗಳನ್ನು ನೀಡಿದ ಮಕ್ಕಳು, ಬೆಂಗಳೂರಲ್ಲಿನ ತಮ್ಮ ಸಂಬಂಧಿಕರ ಮನೆಗೆ ಎಂದು ತಿಳಿಸಿದ್ದಾರೆ. ರಾತ್ರಿ 11.30 ಸುಮಾರಿಗೆ ಬೆಂಗಳೂರಿಗೆ ತೆರಳಿದ ಮಕ್ಕಳು ಬಸ್‌ನಿಂದ ಇಳಿಯಲು ಹೆದರಿದಾಗ ಅಸಲಿ ವಿಷಯ ತಿಳಿದಿದೆ.
ಈ ವೇಳೆ ಸಂಬಂಧಿಕರು, ಪೋಷಕರ ಫೋನ್ ನಂಬರ್ ಕೇಳಿದ ಚಾಲಕ, ನಿರ್ವಾಹಕರಿಗೆ ನಂಬರ್ ನೀಡಲು ಮಕ್ಕಳು ನಿರಾಕರಿಸಿದ್ದಾರೆ. ಇದರಿಂದ ಚಾಲಕ, ನಿರ್ವಾಹಕರು ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಮಕ್ಕಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರಿಗೂ ಫೋನ್ ನಂಬರ್ ನೀಡದ ಮಕ್ಕಳು, ಮಧ್ಯ ರಾತ್ರಿ 1.30 ಗಂಟೆ ಸುಮಾರಿಗೆ ನೀಡಿದ್ದಾರೆ. ಬಳಿಕ ಉಪ್ಪಾರಪೇಟೆ ಪೊಲೀಸರು ಪೋಷಕರಿಗೆ ಮಕ್ಕಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿಕ ಬಸವರಾಜ ತಿಳಿಸಿದ್ದಾರೆ.
ಇತ್ತ ಮೊಬೈಲ್‌ನಲ್ಲಿನ ಆಡಿಯೋವನ್ನು ಕೇಳಿ ಗಾಬರಿಗೊಂಡಿದ್ದ ಪೋಷಕರು, ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಎಲ್ಲ ಕಡೆ ಹುಡುಕಾಟ ನಡೆಸಿದ ಪೋಷಕರು, ಸಂಬಂಧಿಕರ ಮನೆಗಳಿಗೆ ಹೋಗಿರಬಹುದು ಎಂದು ಹೊಸಪೇಟೆ, ಗಂಗಾವತಿ ಸೇರಿ ಹಲವು ಊರುಗಳಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲೂ ಪತ್ತೆಯಾಗಿಲ್ಲ.
ಮಹಿಳಾ ಪೊಲೀಸ್ ಠಾಣೆಯಲ್ಲೂ ದೂರು ನೀಡಲಾಗಿತ್ತು. ಆದರೆ, ಮಧ್ಯರಾತ್ರಿ 1.30 ಗಂಟೆ ಸುಮಾರಿಗೆ ಪೊಲೀಸರು ಫೋನ್ ಮಾಡಿ ವಿಷಯ ತಿಳಿಸಿದಾಗ ಸಮಾಧಾನಗೊಂಡ ಪೋಷಕರು, ರಾತ್ರೋ ರಾತ್ರಿ ಬೆಂಗಳೂರಿಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಬಂದು, ಮಹಿಳಾ ಠಾಣೆ ಪೊಲೀಸರ ಅನುಮತಿ ಮೇರೆಗೆ ಮನೆಗೆ ಕರೆದೊಯ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಸಮಯ ಪ್ರಜ್ಞೆ ಮೆರೆದ ಚಾಲಕ ರವಿಕುಮಾರ್, ನಿರ್ವಾಹಕ ಬಂದೇ ನವಾಜ್ ಅವರಿಗೆ ಪೋಷಕರು ಧನ್ಯವಾದ ತಿಳಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. -ವೀರಪ್ಪ ದಾನಿ