ಬಳ್ಳಾರಿ: ಕರ್ನಾಟಕ ಸರ್ಕಾರ (Karnataka Gorvernment) ಗೃಹ ಜ್ಯೋತಿ (Gruha Jyoti) ಯೋಜನೆ ಅಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದೆ. ಯೋಜನೆಗೆ ಈಗಾಗಲೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇತ್ತ ಎಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್ ದರ ಏರಿಕೆ ಬಿಸಿ ತಟ್ಟಿದೆ. ಹೆಚ್ಚಿನ ವಿದ್ಯುತ್ ಬಿಲ್ ಬರುತ್ತಿದ್ದು, ಗ್ರಾಹಕರು ಕಂಗಾಲ ಆಗಿದ್ದಾರೆ. ಜೆಸ್ಕಾಂ ಸಿಬ್ಬಂದಿ ಓರ್ವ ಗ್ರಾಹಕರಿಗೆ ನಾಲ್ಕು ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ನೀಡಿದ್ದಾರೆ.
ಹೌದು ಬಳ್ಳಾರಿಯ ಇಂದಿರಾ ನಗರ ನಿವಾಸಿಯಾಗಿರುವ ಮಹೇಶ್ ಅವರ ಸಿಂಗಲ್ ಬೆಡ್ ರೂಮ್ ಮನೆಗೆ ಈ ತಿಂಗಳು 4,25,852 ರೂ. ಬಿಲ್ ಬಂದಿದೆ. ಇದನ್ನು ಕಂಡ ಗ್ರಾಹಕ ಮಹೇಶ್ ಹೌಹಾರಿದ್ದಾರೆ. ಈ ಬಗ್ಗೆ ಮಾತನಾಡಿದ ಮಹೇಶ್ ಶನಿವಾರ ಜೆಸ್ಕಾಂ ಸಿಬ್ಬಂದಿ ಮನಗೆ ಬಂದು ಬಿಲ್ ಕೊಟ್ಟು ಹೋಗಿದ್ದಾರೆ. ಪ್ರತಿ ತಿಂಗಳು ನಮ್ಮ ಮನೆಗೆ 1,700 ರೂ. ರೂ ಬರುತ್ತಿತ್ತು. ಆದರೆ ಈ ಬಾರಿ ಇಷ್ಟೊಂದು ಬಿಲ್ ಬಂದಿದೆ ಎಂದು ಗಾಬರಿಯಾಗಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನಕ್ಕಾಗಿ ವಿದ್ಯುತ್ ದರ ಏರಿಕೆ ಮಾಡಿದ್ದಾರೆ; ಹೆಚ್ಡಿ ಕುಮಾರಸ್ವಾಮಿ ಆರೋಪ
ಇನ್ನು ಇಷ್ಟೊಂದು ವಿದ್ಯುತ್ ಬಿಲ್ ಕಂಡ ಸಿಬ್ಬಂದಿ ಮನಗೆ ಕೊಟ್ಟ ಬಿಲ್ ವಾಪಸ್ ಪಡೆದು, ಆನ್ ಲೈನ್ನಲ್ಲಿ ಬಿಲ್ ಚೆಕ್ ಮಾಡಿಕೊಂಡು ಬಿಲ್ ಪಾವತಿ ಮಾಡಿ ಎಂದು ಹೇಳಿ ಹೋಗಿದ್ದಾರೆ. ಅದರಂತೆ ಆನ್ಲೈನ್ನಲ್ಲೂ ಚೆಕ್ ಮಾಡಿದಾಗ ನಾಲ್ಕು ಲಕ್ಷ ಬಿಲ್ ತೋರಿಸಿದೆ.
ಈ ಬಗ್ಗೆ ಮಹೇಶ್ ಅವರು ದೂರು ನೀಡಿದ ಬಳಿಕ, ಮತ್ತೆ ಇಂದು (ಜು.10) ಮನೆಗೆ ಬಂದ ಜೆಸ್ಕಾಂ ಸಿಬ್ಬಂದಿ ಮರುಪರಿಶೀಲನೆ ಮಾಡಿ ಎಂದಿನಂತೆ 885 ರೂ. ಬಿಲ್ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 10 July 23