ಕಂಪ್ಲಿ ಕೋಟೆಯಲ್ಲಿ ಪಿರಂಗಿ ಗುಂಡುಗಳು ಪತ್ತೆ! ಅವು ಆದಿಲ್ ಶಾಹಿ ಕಾಲದ್ದು ಎಂದರು ಇತಿಹಾಸ ಸಂಶೋಧಕ ಕೋಲ್ಕಾರ್

| Updated By: ಆಯೇಷಾ ಬಾನು

Updated on: Jun 24, 2022 | 4:20 PM

ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ ದೊರೆತ ಪಿರಂಗಿ ಗುಂಡುಗಳ ವಿಚಾರವಾಗಿ ಕೋಟೆಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಭೇಟಿ ನೀಡಿ ಪರಿಶೀಲಿಸಿದರು, ಕೋಟೆ ಮಹಾದ್ವಾರದ ಮೇಲ್ಬಾಗದಲ್ಲಿ ದೊರೆತ ಫಿರಂಗಿ ಗುಂಡುಗಳು ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ದಂಡನಾಯಕನಾಗಿದ್ದ ಶಹಾಜಿ (ಶಿವಾಜಿಯ ತಂದೆ) ಯ ಕಾಲದ್ದಾಗಿವೆ.

ಕಂಪ್ಲಿ ಕೋಟೆಯಲ್ಲಿ ಪಿರಂಗಿ ಗುಂಡುಗಳು ಪತ್ತೆ! ಅವು ಆದಿಲ್ ಶಾಹಿ ಕಾಲದ್ದು ಎಂದರು ಇತಿಹಾಸ ಸಂಶೋಧಕ ಕೋಲ್ಕಾರ್
ಪಿರಂಗಿ ಗುಂಡುಗಳು
Follow us on

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಐತಿಹಾಸಿಕ ಗಂಡುಗಲಿ ಕುಮಾರ ರಾಮನ ಕೋಟೆಯ ಮಹಾದ್ವಾರದ ಸಂರಕ್ಷಣಾ ಸಂದರ್ಭದಲ್ಲಿ ದೊರೆತ 39 ಫಿರಂಗಿ ಗುಂಡುಗಳು(Cannon Bullets) ಬಿಜಾಪುರದ ಆದಿಲ್ ಶಾಹಿ(Adil Shahi) ಸಾಮ್ರಾಜ್ಯದ ದಂಡನಾಯಕನಾಗಿದ್ದ ಶಹಾಜಿ ಕಾಲದ್ದಾಗಿದೆ ಎಂದು ಗಂಗಾವತಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ ದೊರೆತ ಪಿರಂಗಿ ಗುಂಡುಗಳ ವಿಚಾರವಾಗಿ ಕೋಟೆಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಭೇಟಿ ನೀಡಿ ಪರಿಶೀಲಿಸಿದರು, ಕೋಟೆ ಮಹಾದ್ವಾರದ ಮೇಲ್ಬಾಗದಲ್ಲಿ ದೊರೆತ ಫಿರಂಗಿ ಗುಂಡುಗಳು ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯದ ದಂಡನಾಯಕನಾಗಿದ್ದ ಶಹಾಜಿ (ಶಿವಾಜಿಯ ತಂದೆ) ಯ ಕಾಲದ್ದಾಗಿವೆ. 1657 ರಲ್ಲಿ ಶಹಾಜಿಯು ಕನಕಗಿರಿ ಮೇಲೆ ದಾಳಿ ಮಾಡಿ ಇಮ್ಮಡಿ ಉಡುಚಪ್ಪ ನಾಯಕನನ್ನು ಸೋಲಿಸಿ ಕನಕಗಿರಯನ್ನು ವಶಪಡಿಸಿಕೊಂಡು, ನಂತರ ಆನೆಗೊಂದಿ, ಇದಾದ ಮೇಲೆ ಕಂಪ್ಲಿ ಮೇಲೆ ದಾಳಿ ಮಾಡಿ ಕಂಪ್ಲಿ ಕೋಟೆಯನ್ನೂ ವಶಕ್ಕೆ ಪಡೆಯುತ್ತಾನೆ. ಕೋಟೆಗಳನ್ನು ಗೆದ್ದ ಸುದ್ದಿಯನ್ನು ಬಿಜಾಪುರದ ಸುಲ್ತಾನ್ ಅಲಿ ಆದಿಲ್‌ಶಾಹಿಗೆ 1657 ರ ಜುಲೈ 6 ರಂದು ಪತ್ರ ಬರೆದು ತಿಳಿಸುತ್ತಾನೆ. ಇದರ ಜತೆಗೆ ಫಿರಂಗಿ, ಮದ್ದುಗುಂಡುಗಳನ್ನು ಸಂಗ್ರಹಿಸಲು ಕಂಪ್ಲಿ ಕೋಟೆ ಪ್ರಶಸ್ತವಾಗಿದ್ದು, ಇದನ್ನೇ ಜಹಾಗೀರ್ ಆಗಿ ನೀಡುವಂತೆ ಕೋರುತ್ತಾನೆ. ಕಂಪ್ಲಿ ಕೋಟೆಯಲ್ಲೇ ಶಹಾಜಿ ಕೆಲಕಾಲ ವಾಸವಿರುತ್ತಾನೆ. ಈ ಸಮಯದಲ್ಲಿ ಆತ ಫಿರಂಗಿ ಗುಂಡುಗಳನ್ನು ಸಂಗ್ರಹಿಸಿರುವ ಸಾಧ್ಯತೆಗಳಿವೆ ಎಂದರು.

ಬಿಜಾಪುರದ ಅದಿಲ್ ಶಾಹಿಗಳು ಮದ್ದು ಗುಂಡುಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಕೋಟೆಯ ರಕ್ಷಣಾ ಉದ್ದೇಶಕ್ಕಾಗಿ ಕೋಟೆಯ ಮೇಲ್ಬಾಗದಲ್ಲಿ ಫಿರಂಗಿ ಗುಂಡುಗಳನ್ನು ಸಂಗ್ರಹಿಸುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೆಚ್ಚಿನ ಸಂಶೋಧನೆಯಿಂದ ಇನ್ನಷ್ಟು ಮಾಹಿತಿ ತಿಳಿಯಲು ಸಾಧ್ಯ ಎಂದರು. ಡಾ.ಸುರೇಶ್‌ಗೌಡ ಪ್ರಮುಖರಾದ ಎಸ್.ಡಿ.ಬಸವರಾಜ್, ಬಾಗಲಿ, ಮಂಜುನಾಥ ಬಂಗಿ ದೊಡ್ಡ ಮಂಜುನಾಥ ಇತರರಿದ್ದರು. ಇದನ್ನೂ ಓದಿ: ನಾಡಿಯನ್ನು ಒತ್ತಿ ಹಿಡಿದರೆ ನಿದ್ರಾಹೀನತೆ ಸಮಸ್ಯೆ ಮಾಯ!

Published On - 4:20 pm, Fri, 24 June 22