AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ವಿಖ್ಯಾತ ಹಂಪಿಯಲ್ಲಿ JCB ಗಳ ಘರ್ಜನೆ, ನೆಲಕಚ್ಚಿದ ಅಕ್ರಮ ಹೋಂ ಸ್ಟೇಗಳು, ಅಧಿಕಾರಿಗಳ ಕಾಲಿಗೆ ಬಿದ್ದು ಕಣ್ಞೀರಿಟ್ಟ ಮಾಲೀಕರು ‌ಮಹಿಳೆಯರು

Hampi Homestay Demolition: ಹಂಪಿ ಸುತ್ತಮುತ್ತ ಮೂಲಸೌಕರ್ಯ ಕಲ್ಪಿಸದೇ ಪ್ರವಾಸಿಗರಿಗಾಗಿ ಈಗಿರುವ ಹೋಂ ಸ್ಟೇ ಗಳ ತೆರವುಗೊಳಿಸುವುದು ಎಷ್ಟರಮಟ್ಟಿಗೆ ಸರಿ ಅನ್ನುವುದು ಸ್ಥಳೀಯರ ವಾದವಾಗಿದೆ. ಆದ್ರೆ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯನ್ನ ರಕ್ಷಣೆ ಮಾಡಲು ಇಂತಹ ಕ್ರಮ ಅನಿವಾರ್ಯ ಅನ್ನುವುದು ಮಾತ್ರ ಸತ್ಯವಾಗಿದೆ.

ವಿಶ್ವ ವಿಖ್ಯಾತ ಹಂಪಿಯಲ್ಲಿ JCB ಗಳ ಘರ್ಜನೆ, ನೆಲಕಚ್ಚಿದ ಅಕ್ರಮ ಹೋಂ ಸ್ಟೇಗಳು, ಅಧಿಕಾರಿಗಳ ಕಾಲಿಗೆ ಬಿದ್ದು ಕಣ್ಞೀರಿಟ್ಟ ಮಾಲೀಕರು ‌ಮಹಿಳೆಯರು
ಹಂಪಿಯಲ್ಲಿ JCB ಗಳ ಘರ್ಜನೆ, ನೆಲಕಚ್ಚಿದ ಅಕ್ರಮ ಹೋಂ ಸ್ಟೇಗಳು
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಸಾಧು ಶ್ರೀನಾಥ್​|

Updated on: Jun 20, 2023 | 8:10 AM

Share

ವಿಶ್ವ ವಿಖ್ಯಾತ ಹಂಪಿ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯಲ್ಲಿಂದು ಜೆಸಿಬಿಗಳದ್ದೆ (JCB) ಘರ್ಜನೆ. ಬೆಳ್ಳಂಬೆಳಗ್ಗೆ ಘರ್ಜಿಸಲು ಆರಂಭಿಸಿದ ಜೆಸಿಬಿಗಳ ಸದ್ದಿಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರೆ, ಮನೆಯಲ್ಲಿದ್ದ ಮಹಿಳೆಯರು ಕಣ್ಣೀರಿಟ್ಟು ಅಧಿಕಾರಿಗಳ ಕಾಲಿಗೆ ಬಿದ್ರು.. ಅಷ್ಟಕ್ಕೂ ಹಂಪಿಯಲ್ಲಿ (Hampi) ಆಗಿದ್ದಾದ್ರು ಎನೂ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.. ಬೆಳ್ಳಂಬೆಳಗ್ಗೆ ಫೀಲ್ಡ್ ಗಿಳಿದು ಘರ್ಜಿಸುತ್ತಿರುವ ಜೆಸಿಬಿಗಳು. ನೋಡ ನೋಡುತ್ತಿದ್ದಂತೆ ನೆಲಸಮವಾದ ಕಟ್ಟಡಗಳು. ಕಟ್ಟಡ, ಮನೆ, ಹೋಮ್​ ಸ್ಟೇಗಳ (Homestay) ತೆರವಿನ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು. ಅಧಿಕಾರಿಗಳಿಗೆ ಕೈ ಮುಗಿದು ಕಾಲಿಗೆ ಬಿದ್ದು ಕಣ್ಣೀರಿಟ್ಟ ಮಹಿಳೆಯರು. ಯೆಸ್. ವಿಶ್ವ ವಿಖ್ಯಾತ ಹಂಪಿಯಲ್ಲಿ ನಿನ್ನೆ ಸೋಮವಾರ ನಡೆದ ತೆರವು ಕಾರ್ಯಾಚರಣೆಯ ನೋಟ.

ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಪ್ರವಾಸಿಗರು ವಾಸಿಸಲು ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಹೋಮ್​​ ಸ್ಟೇ ಕಟ್ಟಡಗಳಿವೆ. ಆದ್ರೆ ಯುನಿಸ್ಕೋ ಪಟ್ಟಿಯಲ್ಲಿರುವ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಹಂಪಿ ಸುತ್ತಮುತ್ತ ಅಕ್ರಮವಾಗಿ ತಲೆ ಎತ್ತಿರುವ ಹೋಮ್​ ಸ್ಟೇ. ವಾಣಿಜ್ಯ ಕಟ್ಟಡಗಳಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೊನೆಗೂ ಬಿಸಿ ಮುಟ್ಟಿಸಿದೆ.

ಅಕ್ರಮವಾಗಿ ಜಮೀನುಗಳಲ್ಲಿ ಹೋಮ್​​ ಸ್ಟೇ. ಸ್ಮಾರಕಗಳ ಸುತ್ತಮುತ್ತ ಅನಧಿಕೃತವಾಗಿ ನಿರ್ಮಿಸಿದ ವಾಣಿಜ್ಯ ಚಟುವಟಿಕೆಗಳ ಕಟ್ಟಡಗಳನ್ನ ಹಂಪಿ ಅಭಿವೃದ್ಧಿ ಪ್ರಾಧಿಕಾರ ತೆರವುಗೊಳಿಸುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಜೆಸಿಬಿ ಮೂಲಕ ಅಕ್ರಮವಾಗಿ ನಿರ್ಮಿಸಿದ ಹೋಮ್​​ ಸ್ಟೇಗಳನ್ನ ನೆಲಸಮಗೊಳಿಸಿದ್ರು. ಅನಧಿಕೃತವಾಗಿ ಸ್ಮಾರಕಗಳ ಸುತ್ತ ಆರಂಭಿಸಿದ ವಾಣಿಜ್ಯ ಕಟ್ಟಡಗಳನ್ನ ಅಧಿಕಾರಿಗಳು ಸೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿದ್ದರಾಮೇಶ್ವರ, ಆಯುಕ್ತರು, ಹಂಪಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದ್ದಾರೆ.

ಹಂಪಿ ಪ್ರಾಧಿಕಾರದ ಸುತ್ತಮುತ್ತ ಕಟ್ಟಡಗಳು, ಹೋಮ್​​ ಸ್ಟೇಗಳ ನಿರ್ಮಾಣಕ್ಕೆ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದ್ರೆ ಬಹುತೇಕ ಹೋಂ ಸ್ಟೇಗಳು ಅಕ್ರಮವಾಗಿ ನಿರ್ಮಾಣವಾಗಿವೆ. ಹಂಪಿ, ಹೊಸ ಹಂಪಿ, ಕಡ್ಡಿರಾಂಪುರ, ಕಮಲಾಪುರದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ವ್ಯಾಪಾರ ವಹಿವಾಟು, ಹೊಟೇಲ್ ನಿರ್ಮಿಸಿದ ಕಟ್ಟಡಗಳನ್ನ ಅಧಿಕಾರಿಗಳು ಇಂದು ತೆರವುಗೊಳಿಸಿದ್ರೆ ಕೆಲವು ವಾಣಿಜ್ಯ ಕಟ್ಟಡಗಳನ್ನ ಸೀಜ್ ಮಾಡಿದ್ರು.

ನೋಟಿಸ್ ನೀಡದೇ ಏಕಾಎಕಿ ಹೋಂ ಸ್ಟೇ ಗಳ ತೆರವು ಮಾಡುತ್ತಿದ್ದಂತೆ ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು. ಮಹಿಳೆಯರು ಮಾಲೀಕರಂತೂ ತೆರವು ಕಾರ್ಯಾಚರಣೆ ಮಾಡಬೇಡಿ ಅಂತಾ ಅಧಿಕಾರಿಗಳಿಗೆ ಕೈ ಮುಗಿದು ಕಾಲಿಗೆ ಬಿದ್ದು ಕಣ್ಣೀರಿಟ್ಟರು. ಅಲ್ಲದೇ ನಾವುಗಳು ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿರುವುದಕ್ಕೆ ಜಿಲ್ಲಾಡಳಿತ ಅನುಮತಿ ನೀಡದಿರುವುದು ಸರಿಯಲ್ಲವೆಂದು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ರು.

ಹಂಪಿ ಮತ್ತು ಕೊಪ್ಪಳ ಭಾಗದಲ್ಲಿನ 29 ಹಳ್ಳಿಗಳಲ್ಲಿ ಅನಧಿಕೃತವಾಗಿ ನೂರಾರು ಹೋಮ್​ ಸ್ಟೇಗಳಿವೆ. ಅದ್ರಲ್ಲೂ ಹಂಪಿ ಪ್ರದೇಶದಲ್ಲಿನ 14 ಹೋಮ ಸ್ಟೇಗಳನ್ನ ಅಧಿಕಾರಿಗಳು ಇಂದು ಜೆಸಿಬಿ ಮೂಲಕ ತೆರವುಗೊಳಿಸಿದರೆ ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಬಳಿಯ ವಾಣಿಜ್ಯ ಕಟ್ಟಡಗಳನ್ನ ಸೀಜ್ ಮಾಡುವಲ್ಲಿ ಜಿಲ್ಲಾಡಳಿತ ಯಶ್ವಸಿಯಾಗಿದೆ.

ಅಲ್ಲದೇ ಮುಂದಿನ ದಿನಗಳಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯುವಲ್ಲಿ ಟಾಸ್ಕಪೋರ್ಸ್ ರಚನೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆದ್ರೆ ಹಂಪಿ ಸುತ್ತಮುತ್ತ ಮೂಲಸೌಕರ್ಯ ಕಲ್ಪಿಸದೇ ಪ್ರವಾಸಿಗರಿಗಾಗಿ ಇರುವ ಹೋಂ ಸ್ಟೇ ಗಳ ತೆರವುಗೊಳಿಸುವುದು ಎಷ್ಟರಮಟ್ಟಿಗೆ ಸರಿ ಅನ್ನುವುದು ಸ್ಥಳೀಯರ ವಾದವಾಗಿದೆ. ಆದ್ರೆ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯನ್ನ ರಕ್ಷಣೆ ಮಾಡಲು ಇಂತಹ ಕ್ರಮ ಅನಿವಾರ್ಯ ಅನ್ನುವುದು ಮಾತ್ರ ಸತ್ಯವಾಗಿದೆ.

ಹಂಪಿ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ