ಬಳ್ಳಾರಿ: ನೆರೆಯ ಆಂಧ್ರದ ಕರ್ನೂಲ್ ಹಾಗೂ ಅನಂತಪುರಂ ಜಿಲ್ಲೆಗಳಲ್ಲಿ ಕೊರೊನಾ ಹೆಮ್ಮಾರಿ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಗಳ ಪೈಕಿ ದೇಶದಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿರುವುದು ಕರ್ನೂಲ್ನಲ್ಲಿ. ಈ ಎರಡು ಜಿಲ್ಲೆಗಳು ಬಳ್ಳಾರಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳು. ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೇ ತಡ ಆಂಧ್ರದ ಗಡಿ ಗ್ರಾಮಗಳ ಜನರು ಮದ್ಯ ಖರೀದಿಗಾಗಿ ನಿತ್ಯ ಬಳ್ಳಾರಿ ಗಡಿ ಗ್ರಾಮಗಳಿಗೆ ಲಗ್ಗೆಯಿಟ್ಟಿದ್ದರು. ಇದು ಗಣಿ ಜಿಲ್ಲೆಗೆ ಮತ್ತಷ್ಟು ಕೊರೊನಾ ವೈರಸ್ ಭೀತಿ ಶುರುವಾಯ್ತು.
ಕಳ್ಳಮಾರ್ಗ ಮೂಲಕ ಎಂಟ್ರಿ:
ಗಡಿ ಭಾಗದಲ್ಲಿ ಎಷ್ಟೇ ಕಟ್ಟುನಿಟ್ಟಿನ ಚೆಕ್ ಪೋಸ್ಟ್ಗಳನ್ನ ನಿರ್ಮಾಣ ಮಾಡಿದ್ರೂ ಕಾಲು ದಾರಿಗಳ ಮೂಲ ರೆಡ್ ಝೋನ್ ಜಿಲ್ಲೆಗಳಿಂದ ಬಳ್ಳಾರಿಗೆ ಬರುತ್ತಲೇ ಇದ್ದಾರೆ. ಯಾಕಂದ್ರೆ ಆಂಧ್ರದಲ್ಲಿ ಮದ್ಯದ ಅಬಕಾರಿ ತೆರಿಗೆ ಶುಲ್ಕ ಹೆಚ್ಚಾಗಿದ್ದರಿಂದ ಬಳ್ಳಾರಿ ಗಡಿ ಗ್ರಾಮಗಳಿಗೆ ಬಂದು ಮದ್ಯ ಖರೀದಿ ಮಾಡಿಕೊಂಡು ಆಂಧ್ರದ ಗಡಿ ಗ್ರಾಮಗಳ ಜನರು ಹೋಗುತ್ತಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲೆಗೆ ಕೊರೊನಾ ಭೀತಿ ಹೆಚ್ಚಾಗಿತ್ತು. ಇದರಿಂದಾಗಿ ಅಲ್ಲಿನ ಜನರು ಬಳ್ಳಾರಿ ಗಡಿ ಗ್ರಾಮಗಳಿಗೆ ನಿತ್ಯ ಬಂದು ಹೋಗುವುದರಿಂದ ಈ ಭಾಗದ ಜನರಿಗೆ ಕೊರೊನಾ ಬರಬಹುದು ಅನ್ನೋ ಲೆಕ್ಕಚಾರದಿಂದ ಬಳ್ಳಾರಿ ಜಿಲ್ಲಾಡಳಿತ ಮದ್ಯ ಮಾರಾಟ ಬಂದ್ ಮಾಡಿ ಆದೇಶಗೊಳಿಸಿದೆ.
ಮದ್ಯ ಮಾರಾಟ ಬಂದ್:
ಬಳ್ಳಾರಿ ತಾಲೂಕಿನ 29 ಗ್ರಾಮಗಳು ಸಿರುಗುಪ್ಪ ತಾಲೂಕಿನ 27 ಗ್ರಾಮಗಳು ಹಾಗೂ ಸಂಡೂರು ತಾಲೂಕಿನ 10 ಗ್ರಾಮಗಳು ಆಂಧ್ರದ ಗಡಿಭಾಗದಲ್ಲಿರುವ ಗ್ರಾಮಗಳಾಗಿವೆ. ಆಂಧ್ರದ ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಆ ಮೂಲಕ ಆಂಧ್ರದ ಗಡಿ ಗ್ರಾಮಗಳಿಂದ ಮದ್ಯ ಖರೀದಿಗಾಗಿ ಬಳ್ಳಾರಿ ಗಡಿ ಗ್ರಾಮಗಳಿಗೆ ಬರುತ್ತಿದ್ದ ಜನರಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನೂ ಚೆಕ್ ಪೋಸ್ಟ್ ಗಳನ್ನ ಕಣ್ಣು ತಪ್ಪಿಸಿ ಬರುತ್ತಿದ್ದ ಜನರಿಗೂ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ಅಕ್ರಮವಾಗಿ ಮದ್ಯ ಸಾಗಾಟ:
ಬಳ್ಳಾರಿ ಗಡಿ ಗ್ರಾಮಗಳಲ್ಲಿ ಮದ್ಯ ಖರೀದಿ ಮಾಡಿ ಆಂಧ್ರದ ಗಡಿ ಗ್ರಾಮಗಳಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ಕಳ್ಳಮಾರ್ಗ ಮೂಲಕ ಮದ್ಯ ಸಾಗಾಟವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಬಳ್ಳಾರಿ ಜಿಲ್ಲಾಡಳಿತ ಗಡಿ ಭಾಗದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದೆ. ಆದರೆ ಬಳ್ಳಾರಿ ಗಡಿ ಗ್ರಾಮಗಳಿಂದ ಆಂಧ್ರದ ಗಡಿ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿದೆ. ಈ ಸಂಬಂಧ ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಪೊಲೀಸ್ ಠಾಣೆ ಹಾಗೂ ಅನಂತಪುರಂ ಜಿಲ್ಲೆ ಇಡಪನಕಲ್ಲು ಪೊಲೀಸ್ ಠಾಣೆಗಳಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುವವರ ವಿರುದ್ದ ಪ್ರಕರಣಗಳು ಕೂಡ ದಾಖಲಾಗಿವೆ.