ಬಳ್ಳಾರಿ: ರಾಜ್ಯದಲ್ಲಿ ಭಾರೀ ಪ್ರಮಾಣದ ದಾಖಲೆ ಮಟ್ಟದಲ್ಲಿ ಮಳೆ(Karnataka Rains) ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಕೆರೆಯಂತಾಗಿವೆ. ಯಾವ ಕ್ಷಣದಲ್ಲಿ ಮನೆ ಧರೆಗೆ ಉರುಳುತ್ತೋ, ಯಾವ ಗುಡ್ಡ ಕುಸಿಯುತ್ತೋ ಎಂಬ ಆತಂಕ ಮಲೆನಾಡಿನ ಜನರನ್ನು ಕಾಡುತ್ತಿದೆ. ಇದರ ನಡುವೆ ಬಳ್ಳಾರಿಯಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಕಂಪ್ಲಿಯ ಕೋಟೆ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.
ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನದೊಳಗೆ ನೀರು ನುಗ್ಗಿದೆ. ಆಂಜನೇಯ ಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಕೋಟೆ ಪ್ರದೇಶದ ಸುತ್ತಮುತ್ತಲಿನ ಮೀನುಗಾರರ ಮನೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಕೋಟೆ ಪ್ರದೇಶದ ಸುತ್ತಮುತ್ತಲಿನ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೋಟೆ ಪ್ರದೇಶ ಜಲಾವೃತವಾದ ಕಾರಣ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ದಿನದಿಂದ ದಿನಕ್ಕೆ ತುಂಗಭದ್ರಾ ನದಿ ನೀರಿನ ಪ್ರವಾಹ ಹೆಚ್ಚುತ್ತಿದೆ.
ತುಂಗಭದ್ರಾ ನದಿ ನೀರಿನಲ್ಲಿ ರೈತರ ದುಸ್ಸಾಹಸ
ಇನ್ನು ತುಂಗಭದ್ರಾ ನದಿ ನೀರು ಉಕ್ಕಿ ಹರಿಯುತ್ತಿದ್ದು ನದಿ ನೀರಿನಲ್ಲಿ ರೈತರು ದುಸ್ಸಾಹಸ ಮೆರೆಯುತ್ತಿದ್ದಾರೆ. ಪ್ರಾಣ ಭಯವನ್ನೂ ಲೆಕ್ಕಿಸದೇ ತೆಪ್ಪದ ಮೂಲಕ ನದಿ ದಾಟಿ ಜಮೀನಿಗೆ ತೆರಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪದ ನಿಟ್ಟೂರು ಗ್ರಾಮದಲ್ಲಿ ಇಂತಹ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ನಿಟ್ಟೂರು ಗ್ರಾಮಸ್ಥರು ರಭಸವಾಗಿ ಹರಿಯುತ್ತಿರುವ ನದಿ ನೀರನ್ನು ದಾಟುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಅಪಾಯವನ್ನು ಲೆಕ್ಕಿಸದೆ ಒಂದೇ ತೆಪ್ಪದಲ್ಲಿ ನಾಲ್ಕೈದು ಜನರು ಪ್ರಯಾಣ ಮಾಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನದಿಗೆ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ನದಿಗೆ ಜನ ಇಳಿಯದಂತೆ ಈಗಾಗಲೇ ಮೂರು ಬಾರಿ TB Bord ಎಚ್ಚರಿಕೆ ಕೊಟ್ಟಿದೆ. ಆದ್ರೆ ಇದಕ್ಕೇ ತಲೆ ಕೆಡಿಸಿಕೊಳ್ಳದ ರೈತರು ನಡುಗಡ್ಡೆ ಜಮೀನುಗಳಿಗೆ ತೆಪ್ಪದಲ್ಲಿ ತೆರಳುತ್ತಿದ್ದಾರೆ. ಸಿರುಗುಪ್ಪ ಅಧಿಕಾರಿಗಳ ನಿರ್ಲಕ್ಷ್ಯ ಇದೀಗ ಜನರಿಗೆ ಪ್ರಾಣ ಭೀತಿ ತಂದಿದೆ.