ಅತ್ತ ರಾಜಧಾನಿ ಬೆಂಗಳೂರು ಸುತ್ತಮುತ್ತ ಚಿರತೆ ಹಾವಳಿ. ಇತ್ತ ಗಡಿನಾಡು ಬಳ್ಳಾರಿಯಲ್ಲಿ ಬೀದಿ ನಾಯಿಗಳ ಕಾಟ (Dog attack). ಬೀದಿಯಲ್ಲಿ ಆಟ ಆಡ್ತಾ ಇದ್ದ ಇಬ್ಬರು ಮಕ್ಕಳಿಗೆ ಹುಚ್ಚು ನಾಯಿ ಕಡಿದು (Dog Bite) ಸರಿಯಾಗಿ ಚಿಕಿತ್ಸೆ ಸಿಗದೇ ಮಕ್ಕಳಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ ನೋಡಿ. ಮಕ್ಕಳನ್ನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ. ಬೀದಿ ನಾಯಿ, ಹುಚ್ಚು ನಾಯಿಗಳ ಹಾವಳಿಯಿಂದ ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದಾರೆ. ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಯೆಸ್. ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಮಕ್ಕಳಿಬ್ಬರು ಜೀವ ಕಳೆದುಕೊಂಡ ನಂತರದ ದೃಶ್ಯಗಳಿವು.
ಹುಚ್ಚು ನಾಯಿ ಕಡಿತಕ್ಕೆ ಮಕ್ಕಳಿಬ್ಬರು ಬಲಿ..! ಸರಿಯಾದ ಚಿಕಿತ್ಸೆ ಸಿಗದೇ ಮಕ್ಕಳ ಸಾವು, ಹೊಣೆ ಯಾರು?
ಮುದ್ದಾದ ಬಾಲಕಿ ಸುರಕ್ಷಿತಾ ಗಾಯತ್ರಿ-ಬಸವರಾಜ ದಂಪತಿಯ ಮಗು. ಇವಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಹೆಸರಿಗೆ ತಕ್ಕಂತೆ ಸುರಕ್ಷಿತವಾಗಿರುತ್ತಿದ್ದಳು. ಅದೇ ರೀತಿ ಈರಣ್ಣ-ಗಂಗಮ್ಮರ ಮಗನಾಗಿದ್ದ ಶಾಂತಕುಮಾರ್ ಗೆ ಪೋಷಕರು ಚಿಕಿತ್ಸೆ ಕೊಡಿಸಿದ್ದರೆ (bellary vims hospital) ಈ ಮಗುವಾದರೂ ಬದುಕುಳಿಯುತ್ತಿತ್ತು. ಆದ್ರೆ ಈ ಇಬ್ಬರೂ ಮಕ್ಕಳು ಗ್ರಾಮದಲ್ಲಿದ್ದ ಹುಚ್ಚು ನಾಯಿ ಕಡಿತಕ್ಕೆ ಬಲಿಯಾಗಿದ್ದಾರೆ. ಕಳೆದ ನವಂಬರ್ ಒಂದರಂದು ಕುರಗೋಡು ತಾಲೂಕಿನ ಬಾದನಗಹಟ್ಟಿ ಗ್ರಾಮದ ಮನೆ ಮುಂದೆ ಆಟ ಆಡ್ತಾ ಇದ್ದ ಈ ಇಬ್ಬರು ಮಕ್ಕಳಿಗೆ ಒಂದೇ ದಿನ ಹುಚ್ಚು ನಾಯಿ ಕಡಿದು ಗಾಯಗೊಳಿಸಿತ್ತು.
ಮನೆ ಮುಂದೆ ಆಟ ಆಡ್ತಾ ಇದ್ದ ಸುರಕ್ಷಿತಾಳ ಮುಖವನ್ನೆಲ್ಲಾ ಕಚ್ಚಿದ್ದ ಹುಚ್ಚು ನಾಯಿ, ಇನ್ನೊಂದು ಓಣಿಯಲ್ಲಿ ಆಟ ಆಡ್ತಿದ್ದ ಶಾಂತಕುಮಾರ್ ಗೂ ಕಡಿದಿತ್ತು. ಹುಚ್ಚು ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡ ಸುರಕ್ಷಿತಾಳಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ. ಹುಚ್ಚು ನಾಯಿ ಕಡಿತದ ನಂತರ ಚಿಕಿತ್ಸೆಗೆ ಬೇಕಾದ ಔಷಧವು ಸಹ ಸಿಗದ ಪರಿಣಾಮ ಪೋಷಕರು ಸುರಕ್ಷಿತಾಳನ್ನ ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಗಂಭೀರವಾಗಿ ಗಾಯಗೊಂಡ ಸುರಕ್ಷಿತಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇದ್ದೊಬ್ಬ ಮಗಳನ್ನ ಕಳೆದುಕೊಂಡ ಪೋಷಕರು ಕಣ್ಣೀರಿಡುವಂತಾಗಿದೆ.
ಸುರಕ್ಷತಾಳಿಗೆ ಗಂಭೀರವಾಗಿ ಗಾಯವಾದ ಪರಿಣಾಮ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದರೂ ಮೂರು ವರ್ಷದ ಬಾಲಕಿ ಮಾತ್ರ ಬದುಕುಳಿಯಲಿಲ್ಲ. ಇನ್ನೊಂದು ಕಡೆ ಎಳು ವರ್ಷದ ಶಾಂತಕುಮಾರ್ ಕೈಗೆ ಹುಚ್ಚು ನಾಯಿ ಸ್ವಲ್ಪ ಪ್ರಮಾಣದಲ್ಲಿ ಕಡಿದ ಪರಿಣಾಮ ಪೋಷಕರು ಚಿಕಿತ್ಸೆ ಕೊಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ರು (parents negligence). ಮಗುವಿಗೆ ದೇವರ ತಾಯತ ಕಟ್ಟಿಸಿ ಕೈ ಬಿಟ್ಟಿದ್ರು.
ಹೀಗಾಗಿ ಹುಚ್ಚು ನಾಯಿ ಕಡಿತದಿಂದ ನಂಜಾದ ಪರಿಣಾಮ ಶಾಂತಕುಮಾರ್ ಸಹ ಕಳೆದ ನವಂಬರ್ 21 ರಂದು ಸಾವನ್ನಪ್ಪಿದ್ದಾನೆ. ಹುಚ್ಚು ನಾಯಿ ಕಡಿತದ ನಂತರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಪೋಷಕರು ಮಕ್ಕಳನ್ನ ಆಟ ಆಡಲು ಹೊರಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಅಲ್ಲದೇ ಹುಚ್ಚು ನಾಯಿ ಕಡಿತಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮಕ್ಕಳು ಸಾವನ್ನಪ್ಪಿರುವುದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ಕಾರಣ ಅಂತಾ ಗ್ರಾಮಸ್ಥರು ದೂರುತ್ತಿದ್ದಾರೆ.
ಗ್ರಾಮದ ಇಬ್ಬರು ಮಕ್ಕಳನ್ನ ಬಲಿ ಪಡೆದ ನಂತರ ಗ್ರಾಮಸ್ಥರು ರೊಚ್ಷಿಗೆದ್ದು ಹುಚ್ಚು ನಾಯಿಯನ್ನ ಹೊಡೆದು ಸಾಯಿಸಿದ್ದಾರೆ. ಆದ್ರೆ ಹುಚ್ಚು ನಾಯಿ ಕಡಿತಕ್ಕೆ ತುತ್ತಾದ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಸಿಕ್ಕಿದ್ರೆ ಮುದ್ದಾದ ಮಕ್ಕಳು ಬದುಕುಳಿಯುತ್ತಿದ್ದರು ಅಂತಾ ಗ್ರಾಮಸ್ಥರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಬಾಳಿ ಬದುಕಬೇಕಾಗಿದ್ದ ಈ ಇಬ್ಬರು ಮಕ್ಜಳ ಸಾವಿಗೆ ಹೊಣೆ ಯಾರು? ಮಕ್ಕಳ ಸಾವಿಗೆ ಸರ್ಕಾರ ಇಲ್ಲವೇ, ಜಿಲ್ಲಾಡಳಿತ ಪರಿಹಾರವಾದರೂ ಕೊಡುತ್ತಾ ಅನ್ನೋದನ್ನ ಕಾಯ್ದು ನೋಡಬೇಕಿದೆ. (ವರದಿ: ವೀರೇಶ್ ದಾನಿ, ಟಿವಿ 9, ಬಳ್ಳಾರಿ)