ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣದಿಂದ ಅಂತರ ಕಾಪಾಡಿಕೊಂಡ ಶ್ರೀರಾಮುಲು: ಸಾಮಾಜಿಕ ಜಾಲತಾಣದಲ್ಲಿ ಗುಸು ಗುಸು ಚರ್ಚೆ
ಇತ್ತೀಚೆಗೆ ನಡೆದ ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದಾರೆ. ಕಾರ್ಯಕ್ರಮಕ್ಕೆ ಬಿ.ಎಸ್.ಯಡಿಯೂರಪ್ಪ ಹೋದರೂ ಶ್ರೀರಾಮುಲು ಹೋಗಿಲ್ಲ.
ಬಳ್ಳಾರಿ: ಎರಡು ದೇಹ ಒಂದೇ ಜೀವದಂತಿದ್ದ ಆಪ್ತ ಸ್ನೇಹಿತರಾದ ಸಚಿವ ಶ್ರೀರಾಮುಲು, ಮಾಜಿ ಸಚಿವ ಜನಾರ್ದನರೆಡ್ಡಿ ನಡುವೆ ಬಿರುಕು ಕಾಣಿಸಿಕೊಂಡಂತಿದೆ. ಏಕೆಂದರೆ ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದಾರೆ. ಹೀಗಾಗಿ ಅನೇಕ ಗಾಳಿ ಮಾತುಗಳು ಕೇಳಿ ಬರುತ್ತಿವೆ.
ಸಾಮಾನ್ಯವಾಗಿ ಜನಾರ್ದನ ರೆಡ್ಡಿ ಅವರ ಯಾವುದೇ ಕಾರ್ಯಕ್ರಮವಿದ್ದರೂ ಶ್ರೀ ರಾಮುಲು ತಮ್ಮನಂತೆ ಹಾಜರಾಗುತ್ತಿದ್ದರು. ಯಾರಿಗೆ ಆಹ್ವಾನವಿಲ್ಲದಿದ್ದರು ಶ್ರೀರಾಮುಲುಗೆ ಆಹ್ವಾನ, ಪ್ರಮುಖ್ಯತೆ ಇದ್ದೇ ಇರುತ್ತಿತ್ತು. ಆದ್ರೆ ಇತ್ತೀಚೆಗೆ ನಡೆದ ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದಾರೆ. ಕಾರ್ಯಕ್ರಮಕ್ಕೆ ಬಿ.ಎಸ್.ಯಡಿಯೂರಪ್ಪ ಹೋದರೂ ಶ್ರೀರಾಮುಲು ಹೋಗಿಲ್ಲ. ಹೀಗಾಗಿ ಆಪ್ತ ಗೆಳೆಯರ ಮಧ್ಯೆ ಮುನಿಸು ಉಂಟಾಗಿದೆಯಾ? ಎಂಬ ಚರ್ಚೆಗಳು ಶುರುವಾಗಿವೆ. ಜನಾರ್ದನ ರೆಡ್ಡಿಯಿಂದ ಆಪ್ತ ಸ್ನೇಹಿತ ಸಚಿವ ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದೇಕೆ? ಎಂಬ ಬಗ್ಗೆ ಗುಸು ಗುಸು ನಡೆಯುತ್ತಿದೆ.
ಬಿಜೆಪಿಯಲ್ಲಿ ಮನ್ನಣೆ ಸಿಗದ ಹಿನ್ನೆಲೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಚಿವ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಹೋದರರು ಮಾತ್ರ ಹಾಜರಾಗಿದ್ದಾರೆ. ಸಚಿವ ಶ್ರೀರಾಮುಲು ಗೈರು ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.
ಹೊಸ ಪಕ್ಷ ಕಟ್ಟಲು ಮುಂದಾದ ಜನಾರ್ದನ ರೆಡ್ಡಿ?
ಕಾಂಗ್ರೆಸ್ಗಿಂತ ಬಿಜೆಪಿ ನಾಯಕರೇ ನನಗೆ ತೊಂದರೆ ಕೊಡುತ್ತಿದ್ದಾರೆ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಈ ಹಿಂದೆ ಸಮಾರಂಭವೊಂದರಲ್ಲಿ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಅಸಮಾಧಾನಿತ ಹಾಘೂ ಟಿಕೆಟ್ ಗೊಂದಲದಲ್ಲಿರುವವರ ಜೊತೆ ಜನಾರ್ದನ ರೆಡ್ಡಿ ಸಪರ್ಕದಲ್ಲಿದ್ದಾರೆ. ಈ ಸಂಬಂಧವೇ ಈ ಹಿಂದೆ ಶ್ರೀರಾಮುಲು ಜೊತೆಗೂ ಚರ್ಚೆ ನಡೆದಿದೆ. ಆದ್ರೆ ರಾಮುಲು ಇದಕ್ಕೆ ಮಣೆ ಹಾಕುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಇವರಿಬ್ಬರ ನಡುವೆ ಮುನಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಶ್ರೀರಾಮುಲು ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ಪ್ರಾಬಲ್ಯವಿರುವ ಗಡಿ ಪ್ರದೇಶಗಳು ಸೇರಿದಂತೆ 30 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ರಾಜಕೀಯ ಹೊರತುಪಡಿಸಿ ನಾನು, ಜನಾರ್ದನ ರೆಡ್ಡಿ ಸ್ನೇಹಿತರು
ಇನ್ನು ಕಾರ್ಯಕ್ರಮಕ್ಕೆ ಭೇಟಿ ನೀಡದ ಸಂಬಂಧ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಮೀಜಿಯೊಬ್ಬರ ತಂಗಿ ಮದುವೆಗೆ ಜೈಪುರಕ್ಕೆ ನಾನು ಹೋಗಿದ್ದೆ. ಹಾಗಾಗಿ ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಹೋಗಿಲ್ಲ. ಈ ವಿಚಾರದಲ್ಲಿ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಜಕೀಯ ಹೊರತುಪಡಿಸಿ ನಾನು, ಜನಾರ್ದನ ರೆಡ್ಡಿ ಸ್ನೇಹಿತರು. ಹೊಸ ಪಕ್ಷ ಕಟ್ಟುವ ವಿಚಾರ ಜನಾರ್ದನ ರೆಡ್ಡಿ ವಿವೇಚನೆಗೆ ಬಿಟ್ಟಿದ್ದು. ಪಕ್ಷ ಕಟ್ಟುವ ವಿಚಾರವನ್ನು ಜನಾರ್ದನ ರೆಡ್ಡಿ ನನ್ನ ಜೊತೆ ಚರ್ಚಿಸಿಲ್ಲ. ರಾಜಕೀಯವಾಗಿ ಎಲ್ಲೇ ಇದ್ದರೂ ಜನಾರ್ದನ ರೆಡ್ಡಿಗೆ ಒಳ್ಳೆಯದಾಗಲಿ. ಕೆಲವು ವಿಚಾರದಲ್ಲಿ ಬಿಜೆಪಿ ಮೇಲೆ ಜನಾರ್ದನ ರೆಡ್ಡಿಗೆ ಬೇಸರ ಆಗಿದೆ. ಅವರು ಹೊಸ ಪಕ್ಷ ನೋಂದಣಿ ಮಾಡಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ರೆಡ್ಡಿ ಅಸಮಾಧಾನ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.
Published On - 10:12 am, Sun, 4 December 22