ವಿಜಯನಗರ: ಕಲುಷಿತ ನೀರು ಸೇವಸಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದಾರೆ. ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಈಗಾಗಲೇ 6 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇಂದು (ಅಕ್ಟೋಬರ್ 11) ಮತ್ತೊಬ್ಬರನ್ನು ಕಲುಷಿತ ನೀರು ಬಲಿ ಪಡೆದಿದೆ. ಸೆಪ್ಟೆಂಬರ್ 23 ರಂದು ಕಲುಷಿತ ನೀರು ಸೇವನೆ ಮಾಡಿ ಅಸ್ವಸ್ಥಗೊಂಡಿದ್ದ ವೃದ್ಧೆ ನಾಗಮ್ಮ ದೊಡ್ಡಬಾರಿಕೇರ( 72) ಮೃತಪಟ್ಟಿದ್ದಾರೆ. ಮಕರಬ್ಬಿಯ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗಮ್ಮನನ್ನು ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯುವಾಗ ಕಾಂತೆಬೆನ್ನೂರು ಬಳಿ ವೃದ್ದೆ ಮೃತಪಟ್ಟಿದ್ದಾರೆ. ಆ ಮೂಲಕ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
ನೀರು ಕಲುಷಿತಗೊಳ್ಳಲು ಕಾರಣವೇನು?
ಬೋರ್ ವೆಲ್ನಿಂದ ಹೊಸ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಈ ವೇಳೆ, ಹಳೆ ಪೈಪ್ ಗಳಿಗೆ ಡ್ಯಾಮೇಜ್ ಆಗಿದೆ. ಡ್ಯಾಮೇಜ್ ಆದ ಪೈಪ್ ನೊಳಗೆ ಚರಂಡಿ ನೀರು ಮಿಶ್ರವಾಗಿದ್ದು, ಇದೇ ನೀರನ್ನು ಮಕರಬ್ಬಿ ಗ್ರಾಮಸ್ಥರು ಸೇವಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರೋ ಮಕರಬ್ಬಿ ಗ್ರಾಮದಲ್ಲಿ ಈ ಕಾರಣದಿಂದ ಸುಮಾರು 200 ಕ್ಕೂ ಜನರು ವಾಂತಿಬೇಧಿಯಿಂದ ಬಳಲಿದ್ದರು. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮ ತೊರೆದ ಜನರು, ಶಾಲೆಗೆ ರಜೆ ಘೋಷಣೆ
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 7 ಜನ ಸಾವನ್ನಪ್ಪಿರುವ ಕಾರಣ ಆತಂಕಗೊಂಡ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿವೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕರಬ್ಬಿ ಗ್ರಾಮದಲ್ಲಿ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ.
ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ ತಮ್ಮ ಮಕ್ಕಳನ್ನು ಗ್ರಾಮಸ್ಥರು ಸಂಬಂಧಿಕರ ಮನೆಗಳಿಗೆ ಕಳುಹಿಸಿದ್ದಾರೆ. ಸರಣಿ ಸಾವಿನಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಉಳಿದವರಿಗೆ ಚಿಕಿತ್ಸೆ ಮುಂದುವರಿದಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ 7-8 ತರಗತಿ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:
ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ; ಗ್ರಾಮ ತೊರೆದ ಜನರು, ಶಾಲೆಗೆ ರಜೆ ಘೋಷಣೆ
ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟಿದ್ದ ಮಕರಬ್ಬಿ ಗ್ರಾಮಕ್ಕೆ ಮನೀಶ್ ಮೌದ್ಗೀಲ್ ಭೇಟಿ