ಕಾಲುವೆಗೆ ಆಟೋ ಪಲ್ಟಿಯಾಗಿ ಮೂವರು ಕಾರ್ಮಿಕರ ಸಾವು, ಹಲವರಿಗೆ ಗಾಯ

| Updated By: ಆಯೇಷಾ ಬಾನು

Updated on: Sep 14, 2022 | 1:26 PM

ಕೊಳಗಲ್ ಗ್ರಾಮದಿಂದ‌‌ ಆಟೋದಲ್ಲಿ 9 ಕಾರ್ಮಿಕರು ಕೂಲಿ‌ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ತುಂಗಭದ್ರಾ ಕಾಲುವೆಗೆ ಆಟೋ ಪಲ್ಟಿಯಾಗಿದೆ.

ಕಾಲುವೆಗೆ ಆಟೋ ಪಲ್ಟಿಯಾಗಿ ಮೂವರು ಕಾರ್ಮಿಕರ ಸಾವು, ಹಲವರಿಗೆ ಗಾಯ
ಕಾಲುವೆಗೆ ಆಟೋ ಪಲ್ಟಿ
Follow us on

ಬಳ್ಳಾರಿ: ಕಾಲುವೆಗೆ ಆಟೋ ಪಲ್ಟಿಯಾಗಿ ಮೂವರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್​ ಬಳಿ ನಡೆದಿದೆ. ಕೊಳಗಲ್ ಗ್ರಾಮದಿಂದ‌‌ ಆಟೋದಲ್ಲಿ 9 ಕಾರ್ಮಿಕರು ಕೂಲಿ‌ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ತುಂಗಭದ್ರಾ ಕಾಲುವೆಗೆ ಆಟೋ ಪಲ್ಟಿಯಾಗಿದೆ.

ಘಟನೆ ಸಂಬಂಧ ನಿಂಗಮ್ಮ, ದುರ್ಗಮ್ಮ, ಪುಷ್ಪಾವತಿ ಎಂಬುವವರ ಮೃತದೇಹಗಳು ಪತ್ತೆಯಾಗಿದ್ದು ಹೇಮಾವತಿ, ಶಿಲ್ಪಾ, ಮಹೇಶ್, ಭೀಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೋ ಚಾಲಕನ ನಿರ್ಲಕ್ಷ್ಯವೇ ಅಪಘಾತ ಸಂಭವಿಸಲು ಕಾರಣ ಎಂದು ಕೆಲವರು ಆರೋಪಿಸಿದ್ದಾರೆ. ಕಲ್ಲು ತಪ್ಪಿಸಲು ಹೋಗಿ ಕಾಲುವೆಗೆ ಆಟೋ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ದುರ್ಮರಣ

ಹುಬ್ಬಳ್ಳಿ ತಾಲೂಕಿನ ವರೂರು ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾರುಖ್, ಸೋಹೆಲ್, ಸುಶೀಲಾ ಮೃತ ದುರ್ದೈವಿಗಳು. ಮೃತ ಶಾರುಖ್, ಸೋಹೆಲ್ ದಾವಣಗೆರೆ ಮೂಲದವರು. ದಾವಣಗೆರೆಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಕಾರು ಅತಿವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹಾರಿಸಿಕೊಂಡು ದುರ್ಗಾ ಗ್ರಾ.ಪಂ ಸದಸ್ಯ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾ.ಪಂ ಸದಸ್ಯ ಭಾಸ್ಕರ್ ಹೆಗ್ಡೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಭಾಸ್ಕರ್ ಹೆಗ್ಡೆ, ಸಾವಯವ ಕೃಷಿಕರಾಗಿಯೂ ಹೆಸರು ಮಾಡಿದ್ದರು. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Published On - 11:09 am, Wed, 14 September 22