ಬೆಂಗಳೂರು: ಕೊರೊನಾ ಎರಡನೇ ಅಲೆಯ ಪ್ರಸರಣ ಅತೀ ವೇಗವಾಗಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಹೆಚ್ಚಳ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರ ರೂಪ ಪಡೆದುಕೊಂಡಿದ್ದು, ಸಿಲಿಕಾನ್ ಸಿಟಿಯಲ್ಲಿ ಆತಂಕ ಮೂಡಿದೆ. ಹೀಗಾಗಿ ಬಿಬಿಎಂಪಿ ಈ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯ ಮೊರೆ ಹೋಗಿದೆ. ನಗರದಲ್ಲಿರುವ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್ಗಳು ಸೋಂಕಿತರಿಂದ ಭರ್ತಿಯಾಗಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ಅಭಾವ ಉಂಟಾಗುವ ಮೊದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ.
ಈ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಹಾಗೂ ವಾಯು ಸೇನೆಗೆ ಸೇರಿದ ಕಮಾಂಡೋ ಆಸ್ಪತ್ರೆಯಲ್ಲಿ ಬೆಡ್ ನೀಡುವಂತೆ ಬಿಬಿಎಂಪಿ ಮನವಿ ಮಾಡಿದೆ. ಸರ್ಕಾರದ ಮುಖಾಂತರ ನಗರದಲ್ಲಿ ತಾತ್ಕಾಲಿಕ ಫೀಲ್ಡ್ ಹಾಸ್ಪಿಟಲ್ ನಿರ್ಮಾಣಕ್ಕೆ ಕೂಡ ಬಿಬಿಎಂಪಿ ಕೋರಿದ್ದು, ಇದಕ್ಕೂ ಮುನ್ನ ಬೆಡ್‌ಗಳನ್ನು ನೀಡುವಂತೆ ಮನವಿ ಮಾಡಿದೆ.
ಈಗಾಗಲೇ ಬೆಡ್ ಭರ್ತಿಯಾಗಿದ್ದು, ಐಸಿಯು ಬೆಡ್‌ಗಳ ಸಂಖ್ಯೆ ಕಡಿಮೆ ಇದೆ ಎಂದು ಬಿಬಿಎಂಪಿ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದೆ. ಫೀಲ್ಡ್ ಆಸ್ಪತ್ರೆಯನ್ನು ಆದಷ್ಟು ಬೇಗ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದೆ. ಆದರೆ ಈಗಾಗಲೇ ಸೇನೆಯಲ್ಲಿರುವ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗೆ ಬೆಡ್‌ಗಳನ್ನು ನೀಡಿದ್ದು, ಹೀಗಾಗಿ ಬೆಡ್ ಭರ್ತಿಯಾಗಿದೆ. ಅಲ್ಲದೇ ಐಸಿಯು ಬೆಡ್‌ಗಳ ಸಂಖ್ಯೆ ಕಡಿಮೆ ಇರುವ ಬಗ್ಗೆ ಕೂಡ ಕಮಾಂಡೋ ಆಸ್ಪತ್ರೆ ಮಾಹಿತಿ ನೀಡಿದೆ.
ಈ ನಿಟ್ಟಿನಲ್ಲಿ ಇದಕ್ಕೆ ಪರ್ಯಾಯವಾಗಿ ಫೀಲ್ಡ್ ಹಾಸ್ಪಿಟಲ್ಗಳನ್ನ ನಿರ್ಮಾಣ ಮಾಡಿ, ಅಗತ್ಯ ಸೇವೆ ನೀಡುವ ವ್ಯವಸ್ಥೆ ಮಾಡಿಕೊಡಲು ರಕ್ಷಣಾ ಇಲಾಖೆಗೆ ಸರ್ಕಾರದ ಮುಖಾಂತರ ಬಿಬಿಎಂಪಿ ಮನವಿ ಮಾಡಿದೆ.
ಇದನ್ನೂ ಓದಿ:
ಜೀವಂತವಾಗಿದೆಯೇ ಬಿಬಿಎಂಪಿ ಆರೋಗ್ಯ ವಿಭಾಗ? ಶವ ದಹನ ಹೊಗೆಯಿಂದ ಕಂಗಾಲಾಗಿದ್ದಾರೆ ಸ್ಥಳೀಯರು
(Bangalore BBMP Seeking Defense ministry for preparing field Hospital in Bengaluru)