ಆ ದಂಪತಿ ಬೆಂಗಳೂರು ಮೂಲದವರು. ಕುಟುಂಬ ಸಮೇತ ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲಿನ ಧಾರ್ಮಿಕ ಪ್ರದೇಶಗಳಿಗೆ ಭೇಟಿ ಕೊಡಲು ಬಂದಿದ್ದರು. ಧರ್ಮಸ್ಥಳ ಸೇರಿದಂತೆ ವಿವಿಧ ದೇವಸ್ಥಾನಗಳ ದರ್ಶನದ ಬಳಿಕ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಆದರೆ ರೋಡ್ ರೇಗ್ ನಿಂದಾಗಿ ದಂಪತಿ ಪೊಲೀಸರ ವಶವಾಗಿದ್ದಾರೆ!
ಬೆಂಗಳೂರಿನಿಂದ ಬಂದಿದ್ದ ಶರತ್ ಕುಮಾರ್ ದಾರಿಯಲ್ಲಿ ಆಂಬುಲೆನ್ಸ್ ಚಾಲಕನಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಈತನ ಪತ್ನಿ ಶೃತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ರೀತಿಯ ಗಲಾಟೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಲಾಯಿಲ ಬಳಿ ನೆರೆದಿದ್ದ ಜನರು ಸಾಕ್ಷಿಯಾಗಿದ್ದಾರೆ.
ತುರ್ತು ಸೇವೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ವಾಹನದ ಚಾಲಕನ ಮೇಲೆ ಕ್ಷುಲ್ಲಕ ವಿಚಾರದಲ್ಲಿ ಅಂಬುಲೆನ್ಸ್ ಬಾಗಿಲು ತೆಗೆದು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ಮಾಡಿರುವ ಘಟನೆ ಮೊನ್ನೆ ಮಂಗಳವಾರ ಬೆಳ್ತಂಗಡಿಯಲ್ಲಿ ನಡೆದಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು.
ತಕ್ಷಣ ದಂಪತಿಗ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ ತೆರಳುತಿದ್ದ ಅಂಬುಲೆನ್ಸ್ ಚಾಲಕನ ಮೇಲೆ ಲಾಯಿಲ ಜಂಕ್ಷನ್ ನಲ್ಲಿ ದಾರಿ ಬಿಡುವ ವಿಚಾರದಲ್ಲಿ ಕಾರು ಚಾಲಕರಾಗಿದ್ದ ಪತಿ ಶರತ್ ಮತ್ತು ಪತ್ನಿ ಶೃತಿ ಇಬ್ಬರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
Also Read: Holi 2024 – ಮನೆಯಲ್ಲಿಯೇ ನೈಸರ್ಗಿಕ ಬಣ್ಣಗಳನ್ನು ತಯಾರಿಸುವುದು ಹೇಗೆ?
ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿ HDFC ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಶರತ್ (40) ಮತ್ತು ಆತನ ಪತ್ನಿ ಶೃತಿ (34) ಎಂದು ಗುರುತಿಸಲಾಗಿದೆ. ಗಂಡ, ಹೆಂಡತಿ, ಗಂಡು ಮಗು ಮತ್ತು ಶೃತಿ ತಾಯಿ ಸೇರಿ ಒಟ್ಟು ನಾಲ್ಕು ಜನ ವಿವಿಧ ದೇವಾಲಯಗಳಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಇನ್ನು ಇನ್ಸೂರೆನ್ಸ್ ಇಲ್ಲದ ಕಾರು ಮತ್ತು ಹಲ್ಲೆ ಮಾಡಿದ ಶರತ್ ಮತ್ತು ಶೃತಿಯನ್ನು ಬೆಳ್ತಂಗಡಿ ಪೊಲೀಸ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸರಕಾರಿ ಅಂಬುಲೆನ್ಸ್ ಹೊರ ಗುತ್ತಿಗೆದಾರನಾದ ಚಾಲಕ ಸುಬ್ರಮಣ್ಯ ನಿವಾಸಿ ರಕ್ಷಿತ್ ಕುಮಾರ್ (27) ಹಲ್ಲೆಗೊಳಗಾದ ಚಾಲಕನಾಗಿದ್ದಾನೆ. ಆತನನ್ನು ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪಶು ಇಲಾಖೆ ವಾಹನದ ಚಾಲಕ ರಜೆ ಇದ್ದ ಕಾರಣ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ನೆರಿಯದಿಂದ ಬಂದ ಕರೆ ಬಂದ ಕಾರಣ ಬೆಳ್ತಂಗಡಿ ಪಶು ಇಲಾಖೆಗೆ ಕಡಬದಿಂದ ಬಂದ ಅಂಬುಲೆನ್ಸ್ ನೆರಿಯ ಕಡೆ ಅಂಬುಲೆನ್ಸ್ ಚಾಲಕ ಹೊರಟು ಲಾಯಿಲ ಜಂಕ್ಷನ್ ಹೋಗುವಾಗ ಎದುರಿನಿಂದ ಬಂದು ಕಾರು ಚಾಲಕ ಮತ್ತು ಆತನ ಪತ್ನಿ ಅಡ್ಡ ಬಂದದ್ದನ್ನು ಪ್ರಶ್ನಿಸಿದಾಗ ಏಕಾಏಕಿ ಅಂಬುಲೆನ್ಸ್ ಬಾಗಿಲು ತೆಗೆದು ಹಲ್ಲೆ ಮಾಡಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಂಬುಲೆನ್ಸ್ ಚಾಲಕ ರಕ್ಷಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಕಾರು ಚಾಲಕ ಶರತ್ ಮತ್ತು ಪತ್ನಿ ಶೃತಿ ವಿರುದ್ಧ 504,341,323,427 ಜೊತೆಗೆ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇನ್ನು ದಂಪತಿ ಪ್ರಕಾರ ಆಂಬುಲೆನ್ಸ್ ಚಾಲಕ ಅಸಹ್ಯಕರವಾಗಿ ಬೈದು ಅಶ್ಲೀಲ ಸಂಜ್ಞೆ ಮಾಡಿದ್ರಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ. ಅದೇನೆ ಇದ್ರು ಕೋಪದಿಂದ ಆದ ಘಟನೆಗೆ ಪೊಲೀಸ್ ಠಾಣೆ ಮೆಟ್ಟಿಲೇರೋ ಸ್ಥಿತಿ ಬಂದಿದ್ದು ಮಾತ್ರ ವಿಪರ್ಯಾಸ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Thu, 14 March 24