ಬೆಂಗಳೂರು: ಎರಡು ಟೆಕ್ ಹಬ್‌ಗಳಾದ ಬೆಂಗಳೂರು (Bangalore) ಮತ್ತು ಹೈದರಾಬಾದ್‌ಗಳನ್ನು (Hyderabad) ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Express) ಇದೇ ತಿಂಗಳು ಚಾಲನೆ ದೊರೆಯುವ ಸಾಧ್ಯತೆ ಇದೆ. ಇದು ಬೆಂಗಳೂರು ಮತ್ತು ಹೈದರಾಬಾದ್ ಎರಡೂ ನಗರಗಳಿಗೆ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿರಲಿದೆ. ಆಗಸ್ಟ್ 6 ಅಥವಾ ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ರೈಲ್ವೆ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ರೈಲು ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್‌ನ ಕಾಚೇಗುಡ ನಡುವೆ ಸಂಚರಿಸಲಿದೆ.
ಎಕ್ಸ್‌ಪ್ರೆಸ್ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಅಂದಾಜು ಏಳು ಗಂಟೆಗಳವರೆಗೆ ಕಡಿಮೆ ಮಾಡಲಿದೆ. ಪ್ರಸ್ತುತ, ದುರೊಂತೊ ಎಕ್ಸ್‌ಪ್ರೆಸ್ ರೈಲು ಎರಡು ನಗರಗಳ ಮಧ್ಯೆ ವಂದೇ ಭಾರತ್ಗಿಂತ ಎರಡು ಗಂಟೆ ಹೆಚ್ಚು ಸಮಯದಲ್ಲಿ ಸಂಚರಿಸುತ್ತದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.
ಬೆಂಗಳೂರು ಹೈದರಾಬಾದ್ ಮಧ್ಯೆ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ (SCR) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕಾಚೇಗುಡ ಮತ್ತು ಧೋನೆ ನಡುವೆ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: Vande Bharat Express: ರಾಮನಗರದಲ್ಲಿ ಮತ್ತೆ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆತ! ಗಾಜು ಪುಡಿ ಪುಡಿ
ಧಾರವಾಡ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಕರ್ನಾಟಕದ ಎರಡನೇ ವಂದೇ ಭಾರತ್ ರೈಲಾಗಿದ್ದು, ಇದಕ್ಕೆ ಜೂನ್ 27 ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈ, ಮೈಸೂರು ಹಾಗೂ ಬೆಂಗಳೂರು ನಡುವೆ ಸಂಚರಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ