ಬೆಂಗಳೂರು: ನಾಗವಾರ ಬಳಿಯ ಎಚ್ಬಿಆರ್ ಲೇಔಟ್ನಲ್ಲಿ ಮೂರು ವಾರಗಳ ಹಿಂದೆ ಸಂಭವಿಸಿದ ಮೆಟ್ರೋ ಪಿಲ್ಲರ್ ಕುಸಿತದ (Metro Pillar Crash Incident) ದುರಂತ ಘಟನೆಗೆ ಕಾರಣವನ್ನು ಪತ್ತೆ ಮಾಡಲಾಗಿದೆ. ಮೊದಲೇ ಶಂಕಿಸಿದಂತೆ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ಗೆ ಸರಿಯಾದ ಆಧಾರವನ್ನು ಕೊಡದೇ ಹೋಗಿದ್ದು, ಅದು ಕುಸಿದು ಬೀಳಲು ಕಾರಣ ಎಂದು ಐಐಟಿ ಹೈದರಾಬಾದ್ನ ತಜ್ಞರ ತಂಡವೊಂದು ಹೇಳಿದೆ.
ಜನವರಿ 10ರಂದು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro Pier) ಕುಸಿದು ಇಬ್ಬರು ಬಲಿಯಾಗಲು ಕಾರಣವಾದ ದುರಂತಕ್ಕೆ ಏನು ಕಾರಣ ಎಂದು ಪತ್ತೆ ಮಾಡಲು ಬೆಂಗಳೂರು ಪೊಲೀಸರು ಐಐಟಿ ಹೈದರಾಬಾದ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ಗಳ ತಂಡವೊಂದಕ್ಕೆ ಜವಾಬ್ದಾರಿ ವಹಿಸಿತ್ತು. ಅದರಂತೆ ತಜ್ಞರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದುರಂತಕ್ಕೆ ಕಾರಣವೇನಿರಬಹುದು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಬೇರೆ ಕೆಲ ತಜ್ಞರೂ ಕೂಡ, ಈ ಪಿಲ್ಲರ್ಗೆ ಸರಿಯಾದ ಆಸರೆ ನಿರ್ಮಿಸದಿರುವುದು ದುರಂತಕ್ಕೆ ಕಾರಣ ಎಂದಿದ್ದರು. ಐಐಟಿಯ ತಂಡವೂ ಕೂಡ ಇದೇ ಅಭಿಪ್ರಾಯಪಟ್ಟಿದೆ ಎಂದು ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ.
ಕಬ್ಬಿಣದ ಚೌಕಟ್ಟನ್ನು (Reinforcement Cage) ಹಿಡಿದಿಡುವ ವ್ಯವಸ್ಥೆಯಲ್ಲಿ ಲೋಪವಾಗಿದೆ. ಇದರಿಂದ ಅದು ಕುಸಿದಿದೆ ಎಂಬ ಮಾಹಿತಿಯನ್ನು ಮೂಲಗಳು ತಮಗೆ ತಿಳಿಸಿವೆ ಎಂದು ಡೆಕನ್ ಹೆರಾಲ್ಡ್ ತನ್ನ ವರದಿಯಲ್ಲಿ ತಿಳಿಸಿದೆ.
ರೀಇನ್ಫೋರ್ಸ್ಮೆಂಟ್ ಕೇಜ್ ಅನ್ನು 32 ಎಂಎಂ ಬಾರ್ಗಳಿಂದ ಸೇರಿಸಿ ಮಾಡಲಾಗಿತ್ತು. ಅದನ್ನು ಬೈಂಡಿಂಗ್ ವೈರ್ಗಳಿಂದ ಕಟ್ಟಲಾಗಿತ್ತು. ಇಡೀ ಕಬ್ಬಿಣದ ಚೌಕಟ್ಟನ್ನು ಹಿಡಿದಿಡಲು ಕೇವಲ ನಾಲ್ಕು ಗಯ್ ವೈರ್ಗಳನ್ನು ಬಳಸಲಾಗಿತ್ತು. ಇದರಿಂದ ರೀಇನ್ಫೋರ್ಸ್ಮೆಂಟ್ ಕೇಜ್ಗೆ ಇದ್ದ ಆಸರೆ ಸಮರ್ಪಕವಾಗಿರಲಿಲ್ಲ ಎಂಬುದು ವರದಿಯಲ್ಲಿ ಹೇಳಲಾಗಿದೆ.
ಜನವರಿ 10ರಂದು ನಾಗವಾರದ ಹೆಣ್ಣೂರು ಕ್ರಾಸ್ ಬಳಿಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು, ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಮಗನ ಮೇಲೆ ಬಿದ್ದು, ಅವರಿಬ್ಬರೂ ಬಲಿಯಾಗಿದ್ದರು. ನಾಗಾರ್ಜು ಕನ್ಸ್ಟ್ರಕ್ಷನ್ ಕಂಪನಿಯಿಂದ (ಎನ್ಸಿಸಿ) ಈ ಕಾಮಗಾರಿ ನಡೆದಿದೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಮುಂಚೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಂಸ್ಥೆಯ ಸದಸ್ಯರು ಸ್ಥಳದಲ್ಲಿ ಪರಿಶೀಲನೆ ನಡೆಸಿ ವರದಿಯನ್ನೂ ನೀಡಿದ್ದರು. 12 ಅಡಿ ಎತ್ತರದ ಈ ಮೆಟ್ರೋ ಪಿಲ್ಲರ್ ನಿರ್ಮಾಣವು ಅವೈಜ್ಞಾನಿಕವಾಗಿ ನಡೆದಿದೆ ಎಂದು ಅಭಿಪ್ರಾಯಪಟ್ಟಿತ್ತು.
ಕಬ್ಬಿಣ ಆಧಾರದ ಪಿಲ್ಲರ್ ನಿರ್ಮಿಸುವಾಗ ಕೆಲ ಕ್ರಮಗಳನ್ನು ಪಾಲಿಸುವುದು ಬಹಳ ಮುಖ್ಯ. ದುರಂತ ಸಂಭವಿಸಿದ ಆ ಪಿಲ್ಲರ್ನ ನಿರ್ಮಾಣದಲ್ಲಿ ಈ ಕ್ರಮಗಳ ಬಗ್ಗೆ ನಿಗಾ ವಹಿಸಿಲ್ಲ. ಹಂತ ಹಂತವಾಗಿ ಕಬ್ಬಿಣದ ಜೊತೆ ಕಾಂಕ್ರೀಟ್ ಹಾಕುತ್ತಾ ಪಿಲ್ಲರ್ ನಿರ್ಮಿಸಬೇಕು. ಇದಕ್ಕೆ ಕೆಲ ದಿನಗಳೇ ಬೇಕಾಗುತ್ತದೆ. ಆದರೆ, ಬೇಗನೇ ಪಿಲ್ಲರ್ ನಿರ್ಮಿಸಬೇಕೆಂಬ ತರಾತುರಿಯಲ್ಲಿ ಕೆಲ ಅಗತ್ಯ ಹಂತಗಳನ್ನು ತಪ್ಪಿಸಿ ಕಾಮಗಾರಿ ನಡೆಸಲಾಗಿದೆ ಎಂದು ಐಐಎಸ್ಸಿಯ ತಜ್ಞರು ಹೇಳಿದ್ದರು.
Published On - 10:03 am, Sat, 28 January 23