ಬೆಂಗಳೂರು: ಮುಖ್ಯ ರಸ್ತೆಗಳನ್ನು ಶುಚಿಗೊಳಿಸುವ ಸ್ವಯಂ ಚಾಲಿತ ಯಂತ್ರಗಳ ಮತ್ತಷ್ಟು ಖರೀದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. ಈಗಾಗಲೇ 26 ಸ್ವಯಂ ಚಾಲಿತ ಸ್ವಚ್ಛಗೊಳಿಸವ ಯಂತ್ರಗಳನ್ನು ಹೊಂದಿರುವ ಬಿಬಿಎಂಪಿಯು, ಇದೀಗ 75 ಹೊಸ ಯಂತ್ರಗಳ ಖರೀದಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಹೆಚ್ಚಿನ ವೆಚ್ಚ ತಗುಲುವುದರಿಂದ ಪ್ರಸ್ತುತ 26 ವಾಹನಗಳನ್ನು ನಿರ್ವಹಿಸುತ್ತಿರುವ ನಾಗರಿಕ ಸಂಸ್ಥೆಯು ಹೊಸ ಯಂತ್ರಗಳನ್ನು ನಿರ್ವಹಿಸಲು ವಿಧಾನಗಳ ಬಗ್ಗೆ ಇನ್ನೂ ಒಮ್ಮತಕ್ಕೆ ಬರಬೇಕಿದೆ.
ಸೋಮವಾರ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯುಎಂ) ಸೆಲ್‌ನ ಹಿರಿಯ ಅಧಿಕಾರಿಗಳು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಪ್ರಸ್ತಾವನೆ ಬಗ್ಗೆ ಚರ್ಚಿಸಿದರು. ಆದರೆ ಚರ್ಚೆ ವೇಳೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕನಿಷ್ಠ ಅರ್ಧದಷ್ಟು ಯಂತ್ರಗಳನ್ನು ಖರೀದಿಸಲು ಹಾಗೂ ಇನ್ನರ್ಧವನ್ನು ‘ಸೇವಾ ಒಪ್ಪಂದ’ ಮೂಲಕ ಖರೀದಿಸಲು ನಾಗರಿಕ ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಸೇವಾ ಒಪ್ಪಂದದ ಅಡಿಯಲ್ಲಿ ಯಂತ್ರಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ನಾಗರಿಕ ಸಂಸ್ಥೆಯು ಸರಬರಾಜುದಾರರಿಗೆ ಮಾಸಿಕವಾಗಿ ಪಾವತಿಸಲಿದೆ.
75 ಯಂತ್ರಗಳ ಖರೀದಿಗೆ ಬಿಬಿಎಂಪಿಗೆ ಒಟ್ಟು 90 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ. 15ನೇ ಹಣಕಾಸು ಆಯೋಗದಡಿ 50 ಕೋಟಿ ಅನುದಾನ ಬಂದಿದ್ದು, 15 ಕೋಟಿ ರೂಪಾಯಿ ಶುಭ ಬೆಂಗಳೂರು ಕಾರ್ಯಕ್ರಮದಡಿ ಮತ್ತು ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಹೆಚ್ಚುವರಿಯಾಗಿ 25 ಕೋಟಿ ರೂ. ಅನುದಾನವನ್ನು ಪಡೆಯಬೇಕಾಗುತ್ತದೆ.
ತಯಾರಿಕೆಯ ಆಧಾರದ ಮೇಲೆ ಪ್ರತಿ ಯಂತ್ರದ ಬೆಲೆ ಸುಮಾರು 1 ಕೋಟಿಯಿಂದ 3 ಕೋಟಿ ರೂ. ಇರಲಿದ್ದು, ವಾಹನಗಳ ನಿರ್ವಹಣೆಗೆ ಕೂಡ ಅಷ್ಟೇ ವೆಚ್ಚವಾಗುತ್ತದೆ. ಪ್ರತಿ ಯಂತ್ರವು ಎಂಟು ಗಂಟೆಗಳ ಪಾಳಿಯಲ್ಲಿ 40 ಕಿಮೀ ವಿಸ್ತಾರವನ್ನು ಗುಡಿಸುವ ನಿರೀಕ್ಷೆ ಹೊಂದಲಾಗಿದೆ.
ಸಿಬಿಡಿ ಪ್ರದೇಶಗಳಲ್ಲಿ ಮತ್ತು ಒಳ ರಸ್ತೆಗಳನ್ನು ಗುಡಿಸಲು ನಾವು ಸ್ವಯಂ ಚಾಲಿತ ಯಂತ್ರಗಳನ್ನು ಬಳಸುತ್ತೇವೆ. ಸುಮಾರು 35 ಯಂತ್ರಗಳನ್ನು ಟ್ರಕ್‌ಗೆ ಅಳವಡಿಸಲಾಗುವುದು ಮತ್ತು ಅವುಗಳನ್ನು ಹೊರ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ಸದ್ಯ 26 ವಾಹನಗಳಲ್ಲಿ 17 ಸ್ವಯಂ ಚಾಲಿತ ಮತ್ತು ಎಂಟು ಟ್ರಕ್ ಮೌಂಟೆಡ್ ವಾಹನಗಳಾಗಿವೆ. ಇದು ರೈಡ್-ಆನ್ ಸ್ವೀಪರ್ ಎಂಬ ಮತ್ತೊಂದು ಯಂತ್ರವನ್ನು ಸಹ ಹೊಂದಿದ್ದು, ಸಣ್ಣ ಲೇನ್‌ಗಳನ್ನು ಒಳಗೊಂಡಿದೆ. ಈ ಯಂತ್ರಗಳನ್ನು ಎಲ್ಲಾ ಎಂಟು ವಲಯಗಳಿಗೆ ಹಸ್ತಾಂತರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published On - 11:30 am, Tue, 26 July 22