ಶಾಸಕ ಜಮೀರ್ ಅಹ್ಮದ್ಗೆ ಎಐಸಿಸಿ ತರಾಟೆ; ಡಿಕೆ ಶಿವಕುಮಾರ್ ಹೇಳಿದ್ದು ಹೀಗೆ
ವಾರ್ನಿಂಗ್ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಜಮೀರ್ಗೆ ಎಚ್ಚರಿಕೆ ಕೊಟ್ಟಿರುವ ಮಾಹಿತಿ ನನಗೂ ಬಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ (Assembly Election) ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿಗಾಗಿ ಫೈಟ್ ನಡೆಯುತ್ತಿದೆ. ಈ ನಡುವೆ ಶಾಸಕ ಜಮೀರ್ ಅಹ್ಮದ್ (Zameer Ahmed ) ಮುಂದಿನ ಸಿಎಂ ಸಿದ್ದರಾಮಯ್ಯ (Siddaramaiah) ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜಮೀರ್ ಅಹ್ಮದ್ಗೆ ಪತ್ರ ಬರೆದು ಈ ರೀತಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಾರ್ನಿಂಗ್ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಜಮೀರ್ಗೆ ಎಚ್ಚರಿಕೆ ಕೊಟ್ಟಿರುವ ಮಾಹಿತಿ ನನಗೂ ಬಂದಿದೆ. ಹೈಕಮಾಂಡ್ ಏನೆಲ್ಲ ಕ್ರಮಕೈಗೊಳ್ಳಬೇಕೋ ಕೈಗೊಳ್ಳಲಿದೆ. ಯಾರ ಮೇಲೆ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೆ ಎಂದಿದ್ದಾರೆ.
ಇದೇ ವೇಳೆ ಸೋನಿಯಾ ಅವರಿಗೆ ವಿಚಾರಣೆ ನಡೆಯುತ್ತಿರುವ ಬಗ್ಗೆ ಮಾತನಾಡಿದ ಡಿಕೆಶಿ, ಸೋನಿಯಾ ಅವರನ್ನು ವಾಪಸ್ ಕಳಿಸುವವರೆಗೂ ಪ್ರತಿಭಟನೆ ಮಾಡುತ್ತೀವಿ. ಪ್ರತಿಭಟನೆಗೆ ಎಲ್ಲ ನಾಯಕರು ಬರಲು ಸೂಚನೆ ಕೊಡಲಾಗಿದೆ. ಮೌನವಾಗಿ ಪ್ರತಿಭಟನೆ ಮಾಡುತ್ತೇವೆ. ದೆಹಲಿಯಲ್ಲೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: Suresh Raina: ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕ್ರಿಕೆಟಿಗರು ಯಾರು ಗೊತ್ತೇ?
ಪ್ರತಿಕ್ರಿಯೆ ನೀಡದೆ ತೆರಳಿದ ಜಮೀರ್: ಎಚ್ಚರಿಕೆ ವಿಚಾರಕ್ಕೆ ಜಮೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ನಿನ್ನೆ ನೋಟಿಸ್ ಬಂದಿದ್ದರು ಯಾವುದೇ ನೋಟಿಸ್ ಬಂದಿಲ್ಲವೆಂದು ಜಮೀರ್ ಹೇಳಿಕೆ ಕೊಟ್ಟಿದ್ದರು. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಮಾತನಾಡದೆ ಕಾಂಗ್ರೆಸ್ ಭವನಕ್ಕೆ ತೆರಳಿದ್ದಾರೆ.