Mangaluru: ಮಂಗಳೂರು ಪಬ್ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರ ಅಡ್ಡಿ
Bajrang Dal: ಏಕಾಏಕಿ ಪಬ್ಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು ಒತ್ತಾಯದಿಂದ ಪಾರ್ಟಿ ನಿಲ್ಲಿಸಿದ್ದರಲ್ಲದೆ, ಯುವಕ-ಯುವತಿಯನ್ನು ಅಶ್ಲೀಲವಾಗಿ ನಿಂದಿಸಿದರು ಎಂದು ಹೇಳಲಾಗಿದೆ.
ಮಂಗಳೂರು: ಪಬ್ ಒಂದರಲ್ಲಿ ಸೋಮವಾರ ರಾತ್ರಿ ಪಾರ್ಟಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಬಜರಂಗದಳ ಕಾರ್ಯಕರ್ತರು (Bajrang Dal workers) ತಡೆಯೊಡ್ಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಮಂಗಳೂರಿನ ‘ರಿಸೈಕಲ್-ದಿ ಲಾಂಜ್ ಪಬ್’ನಲ್ಲಿ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಯುವಕ-ಯುವತಿಯರು ಕುಡಿದು ಕುಣಿಯುತ್ತಿದ್ದರು ಎಂದು ಹೇಳಲಾಗಿದೆ. ಏಕಾಏಕಿ ಪಬ್ಗೆ ನುಗ್ಗಿದ ಬಲಪಂಥೀಯ ಯುವಕರು ಒತ್ತಾಯದಿಂದ ಪಾರ್ಟಿ ನಿಲ್ಲಿಸಿದ್ದರಲ್ಲದೆ, ಯುವಕ-ಯುವತಿಯನ್ನು ಅಶ್ಲೀಲವಾಗಿ ನಿಂದಿಸಿದರು ಎಂದು ಹೇಳಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಜರಂಗದಳ ಕಾರ್ಯಕರ್ತರನ್ನು ಅಲ್ಲಿಂದ ಹೊರಗೆ ಕಳಿಸಿದರು.
‘ಕಾರ್ಯಕರ್ತರು ಪಬ್ ಒಳಗೆ ಹೋಗಿರಲಿಲ್ಲ’
ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಂಗಳವಾರ (ಜುಲೈ 26) ಮುಂಜಾನೆ ಪಬ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಜರಂಗದಳ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ ಎಂದು ಪಬ್ನ ಬೌನ್ಸರ್ ಹೇಳಿದ್ದಾರೆ’ ಎಂದರು.
ಬಲ್ಮಠದ ರಿ-ಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಬಹಳಷ್ಟು ವರ್ಷಗಳಿಂದ ಇದೆ. ನಿನ್ನೆ ರಾತ್ರಿ 9 ಗಂಟೆಗೆ ಸಂಘಟನೆಯೊಂದಕ್ಕೆ ಸೇರಿದ ಐದಾರು ಹುಡುಗರು ಬಂದು, ಇಲ್ಲಿನ ಬೌನ್ಸರ್ ದಿನೇಶ್ಗೆ ಮೈನರ್ ಹುಡುಗ-ಹುಡುಗಿ ಇದ್ದಾರೆ ಎಂದು ದೂರಿದರು. ಮ್ಯಾನೇಜರ್ ಪರಿಶೀಲಿಸಿದ ನಂತರ ಸ್ಥಳೀಯ ಕಾಲೇಜಿನ ಕೆಲ ವಿದ್ಯಾರ್ಥಿಗಳು ಇದ್ದುದು ಕಂಡು ಬಂತು. ಮ್ಯಾನೇಜರ್ ಸೂಚನೆ ಮೇರೆಗೆ ಅವರು ಹೊರಗೆ ಹೋಗಿದ್ದಾರೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರ ಭಾಗದಲ್ಲೇ ಮಾತನಾಡಿ ವಾಪಸ್ ಹೋಗಿದ್ದಾರೆ. ಸದ್ಯ ಸಿಸಿಟಿವಿ ವೆರಿಫೈ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು.
ಪ್ರಕರಣ ಸಂಬಂಧ ಪಬ್ನ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದೆ. ಹೊರಗಿನ ವ್ಯಕ್ತಿಗಳು ಬಂದು ಈ ರೀತಿ ಮಾಡಲು ಅವಕಾಶ ಇಲ್ಲ. ಐಡಿ, ಲೈಸೆನ್ಸ್ ಕೇಳಲು ಬೇರೆಯವರಿಗೆ ಅವಕಾಶ ಇಲ್ಲ. ಈ ಬಗ್ಗೆ ಪರಾಮರ್ಶೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮೊನ್ನೆ ನಡೆದ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಿಗೇ ಮತ್ತೊಂದು ಪ್ರಕರಣ ವರದಿಯಾಗಿದೆ. ಆದರೆ ಆ ಪ್ರಕರಣದ ವಿದ್ಯಾರ್ಥಿಗಳು ಮತ್ತು ಈ ವಿದ್ಯಾರ್ಥಿಗಳಿಗೆ ಸಂಬಂಧ ಇಲ್ಲ ಎಂದು ಹೇಳಿದರು.
ಈ ಪಬ್ನ ನಿಯಮಗಳ ಪ್ರಕಾರ 21 ವರ್ಷದ ಮೇಲಿನವರು ಬರಬಹುದು. ಇಲ್ಲಿಗೆ ಅಂತಿಮ ಪದವಿ ವಿದ್ಯಾರ್ಥಿಗಳು ಬಂದಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.
ಇಂಗ್ಲಿಷ್ನಲ್ಲಿ ಸುದ್ದಿ ಓದಲು ಲಿಂಕ್: Bajrang Dal workers raid pub party by students
ನಗರದಲ್ಲಿ ‘ಟ್ರೂತ್ ಅಂಡ್ ಡೇರ್’ ಚಾಲೆಂಜ್ನಲ್ಲಿ ವಿದ್ಯಾರ್ಥಿಗಳು ಲಿಕ್ಲಾಕ್ ಮಾಡಿಕೊಂಡಿದ್ದ ವಿಡಿಯೊಗಳು ಬಹಿರಂಗಗೊಂಡು ದೊಡ್ಡ ವಿವಾದವಾಗಿದ್ದ ಬೆನ್ನಿಗೇ ಈ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ 26, 2009ರಲ್ಲಿಯೂ ಇದೇ ಪಬ್ ಮೇಲೆ ನಡೆದಿದ್ದ ದಾಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಶ್ರೀರಾಮಸೇನೆ ಕಾರ್ಯಕರ್ತರು ಪಬ್ ಒಂದರ ಮೇಲೆ ದಾಳಿ ಮಾಡಿ ಕೆಲ ಯುವಕ-ಯುವತಿಯನ್ನು ಥಳಿಸಿದ್ದರು.
Published On - 8:46 am, Tue, 26 July 22