
ಬೆಂಗಳೂರು, ಸೆಪ್ಟೆಂಬರ್ 06: ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ (Banu Mushtaq) ಬಗ್ಗೆ ವಿರೋಧ ಕೇಳಿಬಂದಿದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇತ್ತೀಚೆಗೆ ಹಾಸನದ ಅಮೀರ್ ಮೊಹಲ್ಲಾದಲ್ಲಿನ ಅವರ ನಿವಾಸಕ್ಕೆ ತೆರಳಿ, ಸರ್ಕಾರದ ಪರ ಜಿಲ್ಲಾಡಳಿತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿತ್ತು. ಸದ್ಯ ಈ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ರನ್ನು ಘೋಷಿಸಿದಾಗಿನಿಂದಲೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದರು. ಅವರ ವಿರುದ್ಧ ಕಿಡಿಕಾರಿದ್ದರು. ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ದು, ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ‘ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ’. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಅವರನ್ನು ಆಯ್ಕೆ ಮಾಡಿದೆ ಎಂದಿದ್ದಾರೆ.
ಇದನ್ನೂ ಓದಿ: ಬಾನು ಮುಷ್ತಾಕ್ಗೆ ಚಾಮುಂಡಿ ತಾಯಿಯ ಶಾಪ ತಟ್ಟಬಾರದು ಅಂದರೆ: ಬಸನಗೌಡ ಯತ್ನಾಳ್ ಹೀಗೆಂದಿದ್ದೇಕೆ ನೋಡಿ
ಮೈಸೂರಿನ ರಾಜಮನೆತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸಲು ಮಾಜಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಇನ್ನೂ ಹಿಂದೂಪರ ಸಂಘಟನೆಗಳು ಕೂಡ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಪ್ರತಿಭಟನೆ ಮಾಡಿದ್ದವು. ಇತ್ತೀಚೆಗೆ ರಾಷ್ಟ್ರ ರಕ್ಷಣಾ ಸೇನೆ ಕಾರ್ಯಕರ್ತರು ಬಾನು ಮುಷ್ತಾಕ್ರನ್ನ ಭೇಟಿಯಾಗಿ, ದಸರಾ ಉದ್ಘಾಟನೆ ಮಾಡಬೇಡಿ, ಆಹ್ವಾನವನ್ನ ತಿರಸ್ಕರಿಸಿ ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್ಗೆ ಅಧಿಕೃತ ಆಹ್ವಾನ
ಅಧಿಕೃತ ಆಹ್ವಾನ ಬಳಿಕ ಪ್ರತಿಕ್ರಿಯಿಸಿದ್ದ ಬಾನು ಮುಷ್ತಾಕ್, ಆಹ್ವಾನ ಕೊಟ್ಟಿರೋದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದರು. ಇನ್ನು ದಸರಾ ಹಬ್ಬದ ಕುರಿತು ಮಾತನಾಡುತ್ತಾ ದಸರಾ ನಮ್ಮ ಎಲ್ಲರ ಮನೆಯ ಹಬ್ಬ ಎಂದು ಕೊಂಡಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Sat, 6 September 25