ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ನನ್ನ ಹತ್ರ ಬ್ರಹ್ಮಾಸ್ತ್ರವಿದೆ; ಬಯಲು ಮಾಡಿದ್ರೆ ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ: ಶಾಸಕ ಯತ್ನಾಳ್
ಯುಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ಧನಾಗಿದ್ದೇನೆ. ಆದ್ರೆ ನಾನು ಅರ್ಜುನನಾಗುತ್ತೇನೆ. ಈಗ ವನವಾಸ, ಅಜ್ಞಾತವಾಸ ಎಲ್ಲವೂ ಕೂಡ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಬಾಕಿ ಇದೆ
ಮೈಸೂರು: ಯಡಿಯೂರಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ ಎಂದು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ನಮ್ಮ ಬಳಿ ಇದೆ. ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಪಕ್ಷದ ಹಿತದೃಷ್ಟಿಯಿಂದ ಹಾಗೂ ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ನಿವೃತ್ತಿ ಒಳ್ಳೆಯದು ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಯುಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ಧನಾಗಿದ್ದೇನೆ. ಆದ್ರೆ ನಾನು ಅರ್ಜುನನಾಗುತ್ತೇನೆ. ಈಗ ವನವಾಸ, ಅಜ್ಞಾತವಾಸ ಎಲ್ಲವೂ ಕೂಡ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಬಾಕಿ ಇದೆ. ನಾಯಕತ್ವ ಬದಲಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಏಕಾಂಗಿಯಲ್ಲ. ಸಾಕಷ್ಟು ಸಚಿವರು ಸಂಪರ್ಕದಲ್ಲಿದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ಹೋರಾಟವನ್ನು ಮುಂದುವರಿಸಿ ಎಂದು ಅವರು ನನಗೆ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ನನ್ನ ಹೋರಾಟದ ಫಲ ಸಿಗುತ್ತದೆ ಎಂದು ಯತ್ನಾಳ್ ತಿಳಿಸಿದರು.
ಸಿಎಂ ಯಡಿಯೂರಪ್ಪಗೆ ತಮ್ಮ ಬಳಿ ಬರುವ ಫೈಲ್ಗೇ ಸಹಿ ಹಾಕಲು ಶಕ್ತಿಯಿಲ್ಲ ಎಂದು ಕಿಡಿಕಾರಿದ ಯತ್ನಾಳ್, ಪ್ರಧಾನಿ ಮೋದಿ ಉದಾಹರಣೆ ನೀಡಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನಾಲ್ಕು ತಾಸು ಮಾತ್ರ ಮಲಗುತ್ತಾರೆ. ಸಿಎಂ ಮಗನ ಒತ್ತಾಯಕ್ಕೆ ಮಣಿದು ವಿಧಾನಸೌಧಕ್ಕೆ ಹೋಗುತ್ತಾರೆ. ಸಭೆಗಳು ಕೇವಲ 15 ನಿಮಿಷ ಮಾತ್ರ ನಡೆಯುತ್ತದೆ. 30 ರಿಂದ 40 ವಿಷಯ ಇದ್ದರು 30 ನಿಮಿಷದಲ್ಲಿ ಮುಗಿಯುತ್ತದೆ. ಸಿಎಂ ಯಡಿಯೂರಪ್ಪ ನಿಷ್ಕ್ರಿಯರಾಗಿದ್ದಾರೆ. ಅವರ ಮಗ ಆಡಳಿತ ನಡೆಸುತ್ತಿದ್ದಾನೆ ಎಂದು ಯತ್ನಾಳ್ ಹೇಳಿದರು.
ನ್ಯಾಯಾಂಗದ ತೀರ್ಪಿನ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ. ಎಲ್ಲರನೂ ಖರೀದಿ ಮಾಡುತ್ತೇವೆ ಎನ್ನುವ ಭಾವನೆ ಇದೆ. ನ್ಯಾಯಾಂಗವನ್ನು ಖರೀದಿ ಮಾಡುತ್ತೇನೆ ಎನ್ನುವ ಮೂರ್ಖತನದಲ್ಲಿ ಇದ್ದಾರೆ. ಆದರೆ ರಾಜ್ಯ ದೇಶದ ನ್ಯಾಯಾಂಗ ವ್ಯವಸ್ಥೆ ಇಂತಹ ಆಸೆ ಆಮಿಷಗಳಿಗೆ ಒಳಗಾಗುವುದಿಲ್ಲ. ಐತಿಹಾಸಕ ಕರ್ನಾಟಕವನ್ನು ಭ್ರಷ್ಟಾಚಾರಿಗಳಿಂದ ಮುಕ್ತ ಮಾಡುವ ತೀರ್ಪು ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶಾಸಕ ಯತ್ನಾಳ್ ತಿಳಿಸಿದರು.
ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ ಎಂದ ಯತ್ನಾಳ್ ಯತ್ನಾಳ್ ರಾಜೀನಾಮೆ ನೀಡಿ ಹೊರಬರಲಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ವಿಜಯೇಂದ್ರ ಜೊತೆ ಹೊಂದಿಕೊಂಡಿದ್ದಾರೆ. ಪರಸ್ಪರ ಭೇಟಿಯಾಗಿ ಸಲಹೆ ಕೊಡುತ್ತಾರೆ ಎಂದರು. ಜೊತೆಗೆ 104 ಸ್ಥಾನ ಯಡಿಯೂರಪ್ಪರಿಂದ ಬಂದಿಲ್ಲ. ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಾಯಕರ ಪರಿಶ್ರಮ ಮತ್ತು ದೇಶದ ಪ್ರಧಾನಿ ನೋಡಿ ರಾಜ್ಯದ ಜನರು ಮತ ಹಾಕಿದ್ದಾರೆ. ಬಿಜೆಪಿಯ ಮೂಲ ಸಿದ್ಧಾಂತ ತಳಹದಿಯಿಂದ ಬಂದಿದೆ. ಎಲ್ಲಾ ಶ್ರೇಯಸ್ಸು ವ್ಯಕ್ತಿಗೆ ಕೊಡಲು ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದರು.
ನಾನು ಈ ಹಿಂದೆಯೇ ಮುಖ್ಯಮಂತ್ರಿ ಆಗಬೇಕಿತ್ತು. ನಾನೇ ಕೆಲವು ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಸದಾನಂದಗೌಡ, ಜಗದೀಶ್ ಶೆಟ್ಟರ್‌ಗಿಂತ ನಾನು ಸೀನಿಯರ್. ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ, ಆಗಲೇ ಕೇಂದ್ರ ಸಚಿವನಾಗಿದ್ದೆ. ನನ್ನ ರಾಜಕೀಯ ಜೀವನ ಅಂತ್ಯವಾದರೂ ಪರವಾಗಿಲ್ಲ. ಭ್ರಷ್ಟಾಚಾರ, ಕುಟುಂಬಶಾಹಿ ವಿರುದ್ಧ ನನ್ನ ಹೋರಾಟ ನಿಲ್ಲಿಸಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದರು.
ಇದನ್ನೂ ಓದಿ
ಸ್ಟಾಲಿನ್ಗೆ ಯಡಿಯೂರಪ್ಪ ಪತ್ರ ಬರೆದಿದ್ದೇ ತಪ್ಪು; ನಾವು ಡ್ಯಾಂ ಕಟ್ಟಲು ಅವರ ಅನುಮತಿ ಏಕೆ ಬೇಕು?: ಸಿದ್ದರಾಮಯ್ಯ
G Madegowda: ಮಾಜಿ ಸಂಸದ, ಹಿರಿಯ ರೈತ ಹೋರಾಟಗಾರ ಜಿ. ಮಾದೇಗೌಡರಿಗೆ ತೀವ್ರ ಅನಾರೋಗ್ಯ
(Basanagouda Yatnal urges BS Yediyurappa to retire from CM post)
Published On - 10:14 am, Tue, 6 July 21