ಬಸವಕಲ್ಯಾಣ ಉಪಚುನಾವಣೆ: ಪಕ್ಷದ ಪರ ಪ್ರಚಾರಕ್ಕೆ ಮುಂದಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ

| Updated By: Skanda

Updated on: Apr 13, 2021 | 12:27 PM

ಬೆಳಗಾವಿ ಲೋಕಸಭಾ ಬಸವಕಲ್ಯಾಣ-ಮಸ್ಕಿ ವಿಧಾನ ಸಭೆಗೆ ಚುನಾವಣೆ ನಡೆಯುತ್ತಿದೆ. ಬೆಳಗಾವಿ ಸಂಸದ ಸುರೇಶ್ ಅಂಗಡಿ, ಬಸವಕಲ್ಯಾಣ ಶಾಸಕ ನಾರಾಯಣರಾವ್ ಕೊರೊನಾದಿಂದ ಮೃತಪಟ್ಟರು. ಹೀಗಾಗಿ ಇಲ್ಲಿ ಚುನಾವಣೆ ‌ನಡೆಯುತ್ತಿದೆ.

ಬಸವಕಲ್ಯಾಣ ಉಪಚುನಾವಣೆ: ಪಕ್ಷದ ಪರ ಪ್ರಚಾರಕ್ಕೆ ಮುಂದಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ
ಬಸವಕಲ್ಯಾಣ ಉಪಚುನಾವಣೆ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ
Follow us on

ಬೀದರ್: ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆಯ ಕಾವು ರಂಗು ಪಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ನಾರಾಯಣರಾವ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 12ಕ್ಕೆ ಪ್ರಚಾರ ಮಾಡಿದ್ದು, ನಗರದ ಸಸ್ತಾಪುರ ಗ್ರಾಮದಲ್ಲಿ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಭಾಗಿಯಾದರು. ಪ್ರಚಾರ ಸಭೆಗೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಿದ ಗ್ರಾಮಸ್ಥರು ಮೆರವಣಿಗೆ ಮೂಲಕ ಪ್ರಚಾರ ಸಮಾವೇಶಕ್ಕೆ ಕರೆದುಕೊಂಡು ಬಂದರು.

ಬೆಳಗಾವಿ ಲೋಕಸಭಾ ಬಸವಕಲ್ಯಾಣ-ಮಸ್ಕಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬೆಳಗಾವಿ ಸಂಸದ ಸುರೇಶ್ ಅಂಗಡಿ, ಬಸವಕಲ್ಯಾಣ ಶಾಸಕ ನಾರಾಯಣರಾವ್ ಕೊರೊನಾದಿಂದ ಮೃತಪಟ್ಟರು. ಹೀಗಾಗಿ ಇಲ್ಲಿ ಚುನಾವಣೆ ‌ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಶಾಸಕ ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮ ನಾರಾಯಣರಾವ್ ‌ಪರ ಮತಯಾಚನೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗಮಿಸಿ ಬಹಿರಂಗ ಸಮಾವೇಶದಲ್ಲಿ ಪ್ರಚಾರ ಸಭೆ ನಡೆಸಿದರು.

ಎಲ್ಲಾ ಜಾತಿಯನ್ನ ಒಂದೂಗೂಡಿಸಿಕೊಂಡು ಹೋಗುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಬಿಜೆಪಿ ಯಾವಾಗಲೂ ಮೇಲ್ಜಾತಿಯವರ ಪರ ಇರುತ್ತದೆ. ಹಿಂದುಳಿದ ಜಾತಿಯ ಪರವಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆ ಬೇಡ ಎಂದು ರೈತರು ಎಷ್ಟೇ ಮನವಿ ಮಾಡಿದರು ಹಿಂಪಡೆಯುತ್ತಿಲ್ಲ. ಆರು ದಿನದಿಂದ ಸಾರಿಗೆ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಅವರನ್ನ ಹೆದರಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಎಸ್ಮಾ ಜಾರಿ ಮಾಡುತ್ತೇವೆ ಕೆಲಸದಿಂದ ವಜಾ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಮುಂಬಾಗಿಲಿನಿಂದ ಬಂದು ಯಾವತ್ತೂ ಸರ್ಕಾರ ಮಾಡಿಲ್ಲ ಹಿಂಬಾಗಿಲಿನಿಂದ ಬಂದು ಸರ್ಕಾರ ಮಾಡಿದ್ದಾರೆ. ಹೀಗಿರುವಾಗ ಅವರಿಗೆ ಜನರ ನೋವು ಹೇಗೆ ಅರ್ಥ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿ.ಎಸ್​ ಯಡಿಯೂರಪ್ಪ ಅವರ ಕುಟುಂಬದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದನ್ನ ನಾನು ಹೇಳುತ್ತಿಲ್ಲ ಈ ಮಾತನ್ನ ಅವರ ಪಕ್ಷದ ಶಾಸಕ ‌ಯತ್ನಾಳ್ ಹೇಳುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿಯಾಗಿದೆ. ಈಗ ಗೊಬ್ಬರ‌ ಬೆಲೆ ಏರಿಕೆ ಮಾಡಿದ್ದು, ಬಡ ರೈತರು‌ ಎಲ್ಲಿಂದ ತಂದು ಗೊಬ್ಬರ ಹಾಕಬೇಕು. ಈ ಬಗ್ಗೆ ಕೇಂದ್ರ ರಸಗೊಬ್ಬರ ಖಾತೆ ಸಚಿವ‌ ಸದಾನಂದ ಗೌಡರನ್ನ ಕೇಳಿದರೆ ಮೀಟಿಂಗ್ ಮಾಡುವೆ ಎಂದು ಹೇಳುತ್ತಾರೆ. ಯಾವಾಗ ಮೀಟಿಂಗ್ ಮಾಡುತ್ತೀರಿ ಯಾವಾಗ ಗೊಬ್ಬರ‌ ಬೆಲೆ ಕಡಿಮೆ ಮಾಡುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಸವಕಲ್ಯಾಣದಲ್ಲಿ ಬಿ.ಎಸ್​.ಯಡಿಯೂರಪ್ಪ ಪ್ರಚಾರ
ಇತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೂಡಾ ಬಸವಕಲ್ಯಾಣದಲ್ಲಿ ಭರ್ಜರಿ ಪ್ರಚಾರ ಮಾಡಿದ್ದು, ರಾಯಚೂರಿನ ಮುದಗಲ್​ನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಯಡಿಯೂರಪ್ಪ 12 ಗಂಟೆಯಿಂದ ತಾಲೂಕಿನ ವಿವಿಧ ಭಾಗದಲ್ಲಿ ಪ್ರಚಾರ ಮಾಡಿದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಸವಕಲ್ಯಾಣ ಉಪಚುನಾವಣೆಯ ಅಭ್ಯರ್ಥಿ ಶರಣು ಸಲಗಾರ್ ಪರ ಮತಯಾಚನೆಗೆ ಆಗಮಿಸಿ ಮೊದಲಿಗೆ ಲಾಡವಂತಿಯಲ್ಲಿ ಪ್ರಚಾರ ನಡೆಸಿದರು.

ನಂತರ ಹಾರಕೊಡ ಮಠಕ್ಕೆ ಭೇಟಿ ನೀಡಿ ಮುಡಬಿ ಹಾಗೂ ಹುಲಸೂರಿನಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡರು. ಆ ಸಮಾವೇಶದಲ್ಲಿ ಮಾತನಾಡಲು ಆರಂಭಿಸಿದ ಬಿ ಎಸ್ ಯಡಿಯೂರಪ್ಪ ಮಳೆ ಬರುವುದು ಒಳ್ಳೆಯ ಸೂಚನೆಯಿದೆ ನಮ್ಮ ಕಾರ್ಯಕ್ರಮ ನಿಂತರೂ ಪರವಾಗಿಲ್ಲ ಮಳೆ ಬರಲಿ. ನಾನು ಭರವಸೆ ನೀಡುತ್ತೇನೆ ನಿಮ್ಮ ಎಲ್ಲಾ ಬೇಡಿಕೆ ಚುನಾವಣೆ ನಂತರ ಈಡೇರಿಸುತ್ತೇನೆ. ಶಿವಾಜಿ ಪಾರ್ಕ್ ಶಿವಾಜಿ ಪುತ್ಥಳಿ ಮಾಡುವುದು ನಮ್ಮ ಕರ್ತವ್ಯ ಈ ಕ್ಷೇತ್ರದಲ್ಲಿ 25 ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ. ಅನುಭವ ಮಂಟಪಕ್ಕೆ 500 ಕೋಟಿ ರೂಪಾಯಿಯನ್ನು ನೀಡಲು ಸೂಚಿಸಿದ್ದು, ಈಗಾಗಲೇ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬಸವಕಲ್ಯಾಣದ ಅನೇಕ ಸಮಸ್ಯೆಗಳ ಬಗ್ಗೆ ಬೇಡಿಕೆ ಬಂದಿದೆ. ಚುನಾವಣಾ ಸಂದರ್ಭದಲ್ಲಿ ಘೋಷಣೆ ಸಾಧ್ಯವಿಲ್ಲ. ಎಲ್ಲಾ 16 ಬೇಡಿಕೆ ಓದಿ ಹೇಳಿದ ಸಿಎಂ ಬಿ .ಎಸ್ ಯಡಿಯೂರಪ್ಪ, ಸುಳ್ಳು ಭರವಸೆಯನ್ನು ಯಡಿಯೂರಪ್ಪ ಯಾವತ್ತು ನೀಡಿಲ್ಲ. ನೂರಕ್ಕೆ ನೂರು ಹೇಳಿದ್ದನ್ನು ಮಾಡಿದ್ದೇನೆ. ದೇವರು ಮೆಚ್ಚುವಂತೆ ಕೆಲಸ ಮಾಡಿದ್ದೇನೆ ಎಂದರು. ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಉಲ್ಲೇಖಿಸಿ ಹಿಂದೂ ಮುಸ್ಲಿಂ ಕ್ರೈಸ್ತ ಎಂದು ಭೇದ ಭಾವ ಇಲ್ಲ ಎಲ್ಲಾ ಬೇಡಿಕೆಗಳನ್ನೂ ಫಲಿತಾಂಶದ ನಂತರ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ಒಟ್ಟಾರೆಯಾಗಿ ಎರಡು ಪಕ್ಷದ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಗೆ ಆಗಮಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಬ್ಬರದ ಪ್ರಚಾರ ನಡೆಸಿದ್ದಾರೆ. ಅನುಕಂಪದ ಅಲೆ ಮೂಲಕ ಕಾಂಗ್ರೆಸ್ ದಿವಂಗತ ಶಾಸಕರ ಪತ್ನಿ ಮಲ್ಲಮ್ಮ ನಾರಾಯಣರಾವ್ ಅವರನ್ನ ಗೆಲ್ಲಿಸಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದ್ದರೆ. ಇತ್ತ ಆಡಳಿತಾರೂಢ ಬಿಜೆಪಿಯೂ ತನ್ನ ಅಭ್ಯರ್ಥಿಯ ಗೆಲುವಿಗಾಗಿ ಪಣ ತೊಟ್ಟಿದೆ.

ಇದನ್ನೂ ಓದಿ: Belagavi Lok sabha bypoll 2021: ಬೆಳಗಾವಿ ಉಪಚುನಾವಣೆ ಪ್ರಚಾರದ ಮಧ್ಯೆ ಕಾಂಗ್ರೆಸ್​ ಭಿನ್ನಮತ ಬಹಿರಂಗ

( Basavakalyana Bypoll 2021 Siddaramaiah and BS Yediyurappa Campaigning for their party candidates)