ಬೆಂಗಳೂರು, ಡಿಸೆಂಬರ್ 23: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಸಂಬಂಧ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಅದು ಮುಗಿದುಹೋದ ಅಧ್ಯಾಯ ಎಂದಿದ್ದಾರೆ. ಸದನದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿದ್ದೇವೆ. ಸದನದವನ್ನು ಅನಿರ್ದಿಷ್ಟವಾಧಿಗೆ ಮುಂದೂಡಿಕೆ ಬಳಿಕ ಸಿಟಿ ರವಿ ಬಂಧನ ಆಗಿತ್ತು. ಸದ್ಯ, ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹಕ್ಕುಚ್ಯುತಿ ಆಗಿದೆ ಅಂತ ದೂರು ಕೊಟ್ಟರೆ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅದು ಅವರ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಎಫ್ಐಆರ್ ಆಗಿದೆ, ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ. ಆದರೆ ಪೊಲೀಸರು ಒಳಗೆ ಬಂದಿಲ್ಲ. ನಮ್ಮಲ್ಲಿ ವೀಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಬೇರೆ ಯಾರಾದರೂ ಕಳುಹಿಸಿದರೆ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸುತ್ತೇವೆ. ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದು ಹೊರಟ್ಟಿ ಹೇಳಿದರು.
ಸುವರ್ಣ ವಿಧಾನ ಸೌಧದಲ್ಲಿ ಎಂಎಲ್ಸಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ 10 ಜನ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸೆಕ್ರೆಟರಿ ಕಚೇರಿಯಿಂದ ಕಮಿಷನರ್ ಕಚೇರಿಗೆ ದೂರಿನ ಪತ್ರ ಸಲ್ಲಿಕೆಯಾಗಿತ್ತು. ಎಂಎಲ್ಸಿ ಡಿಎಸ್.ಅರುಣ್, ಎಸ್ವಿ ಸಂಕನೂರ, ಕಿಶೋರ್ ಬಿಆರ್ ಬೆಂಗಳೂರಿನ ಸೆಕ್ರೆಟರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿತ್ತು. ಅದರಂತೆ, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸಿಟಿ ರವಿಯನ್ನ ಫೇಕ್ ಎನ್ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 189(2), 191(2), 126(2), 352, 351(4) ಕಲಂ ಹಾಗೂ 190ರ ಅಡಿ ದೂರು ಎಫ್ಐಆರ್ ದಾಖಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Mon, 23 December 24