ಸಿ ಎಂ ಉದಾಸಿ ನಿಧನದಿಂದ ತೆರವಾದ ಹಾನಗಲ್ ಕ್ಷೇತ್ರ; ಚುನಾವಣೆ ನಿಗದಿಗೂ ಮುನ್ನವೇ ಅಭ್ಯರ್ಥಿ ಹೆಸರು ಘೋಷಿಸಿದ ಜೆಡಿಎಸ್
ಹಾನಗಲ್ನಲ್ಲಿ ನಿಯಾಜ್ ಶೇಖ್ ಅವರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಹಾವೇರಿ: ಹಿರಿಯ ರಾಜಕಾರಣಿ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿದೆ. ಹಾನಗಲ್ನಲ್ಲಿ ನಿಯಾಜ್ ಶೇಖ್ ಅವರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಜೂನ್ 8 ರಂದು ಮಧ್ಯಾಹ್ನ ನಿಧನರಾಗಿದ್ದರು. 85 ವರ್ಷದ ಅವರು ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಜನತಾ ಪರಿವಾರ ಹಿನ್ನೆಲೆಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅವರು ಹಲವು ಬಾರಿ ಆಯ್ಕೆಯಾಗಿದ್ದರು. ಸದ್ಯ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಸಿ ಎಂ ಉದಾಸಿ ಅವರೂ ಒಬ್ಬರಾಗಿದ್ದರು.
ಸಿ.ಎಂ.ಉದಾಸಿ ಒಟ್ಟು ಆರು ಬಾರಿ ಶಾಸಕರಾಗಿದ್ದರು. 1974ರಲ್ಲಿ ಹಾನಗಲ್ ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1974ರಿಂದ 1980ರವರೆಗೆ ಪುರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1983ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಮೂರನೆ ಬಾರಿಗೆ ಶಾಸಕರಾಗಿದ್ದರು. 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆರನೆ ಬಾರಿಗೆ ಗೆಲುವು ಸಾಧಿಸಿದ್ದರು.
ಇದೀಗ, ಹಿರಿಯ ಶಾಸಕ, ರಾಜಕಾರಣಿಯಾಗಿದ್ದ ಸಿ.ಎಂ. ಉದಾಸಿ ನಿಧನದ ಬೆನ್ನಲ್ಲೇ, ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ, ಜೆಡಿಎಸ್ ತನ್ನ ಅಭ್ಯರ್ಥಿ ಹೆಸರನ್ನು ಘೋಷಿಸಿದೆ.
ಇದನ್ನೂ ಓದಿ: ನನ್ನನ್ನು ಬಿಜೆಪಿಗೆ ಕರೆದುಕೊಂಡು ಹೋದವರೇ ಸಿ.ಎಂ.ಉದಾಸಿ: ಬಸವರಾಜ ಬೊಮ್ಮಾಯಿ ನುಡಿನಮನ
CM Udasi Funeral: ಸಿ.ಎಂ.ಉದಾಸಿಯವರ ಮಗನಾಗಿ ಜನಿಸಿದ್ದು ನನ್ನ ಪುಣ್ಯ: ಸಂಸದ ಶಿವಕುಮಾರ್ ಉದಾಸಿ