AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ 8000 ಮಹಿಳೆಯರಿಗೆ 12 ಕೋಟಿ ರೂ.ವಂಚನೆ; ಆರೋಪಿ ಪರಾರಿ

ಬೆಳಗಾವಿಯಲ್ಲಿ ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ಮಹಿಳೆಯರಿಗೆ ವರ್ಕ್​ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಗರಬತ್ತಿ ಪ್ಯಾಕಿಂಗ್ ಕೆಲಸದ ಹೆಸರಿನಲ್ಲಿ ಹಣ ಸಂಗ್ರಹಿಸಿದ ವಂಚಕ ಸುದ್ದಿಯಿಲ್ಲದೇ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬೆಳಗಾವಿ: ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ 8000 ಮಹಿಳೆಯರಿಗೆ 12 ಕೋಟಿ ರೂ.ವಂಚನೆ; ಆರೋಪಿ ಪರಾರಿ
ಬೆಳಗಾವಿಯಲ್ಲಿ ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ ಮಹಿಳೆಯರಿಗೆ 12 ಕೋಟಿ ರೂ.ವಂಚನೆ
ಭಾವನಾ ಹೆಗಡೆ
|

Updated on: Oct 27, 2025 | 10:41 AM

Share

ಬೆಳಗಾವಿ, ಅಕ್ಟೋಬರ್ 27: ಮಹಿಳೆಯರಿಗೆ ವರ್ಕ್​ ಫ್ರಂ ಹೋಮ್ ಕೆಲಸ (Work From Home Jobs) ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸುದ್ದಿಯಿಲ್ಲದೆ ಪರಾರಿಯಾಗಿದ್ದಾನೆ. ಈ ಕುರಿತು ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದಾರೆ.

ಮಹಿಳೆಯರಿಂದ ತಲಾ 2,500 ರಿಂದ 5000 ರೂ.ಗಳನ್ನು ಪಡೆದಿದ್ದ ವಂಚಕ

ಭಾನುವಾರದಂದು ಬೆಳಗಾವಿಯ ಪೊಲೀಸ್ ಠಾಣೆಗೆ ಆಗಮಿಸಿದ್ದ ಮಹಿಳೆಯರು ಸೊಲ್ಲಾಪುರದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಗರಬತ್ತಿ ಪ್ಯಾಕ್ ಮಾಡುವ ಮೂಲಕ ಹಣ ಗಳಿಬಹುದುದೆಂದು ಹೇಳಿ ತಮ್ಮನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.  ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದ. ಒಬ್ಬ ಮಹಿಳೆಯಿಂದ ಒಂದು ಗುರುತಿನ ಚೀಟಿ ರಚಿಸಲು 2,500 ರಿಂದ 5,000 ರೂ.ಗಳವರೆಗೆ ಹಣವನ್ನು ಸಂಗ್ರಹಿಸಿದ್ದ. ಪ್ರತಿಯೊಬ್ಬ ನೇಮಕಾತಿದಾರರು ಚೈನ್-ಮಾರ್ಕೆಟಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನಿಬ್ಬರು ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದ.

ಈ ಯೋಜನೆಯು ಸರಪಳಿ-ಮಾರ್ಕೆಟಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಸ್ವ-ಸಹಾಯ ಗುಂಪುಗಳಂತಹ ಮಹಿಳಾ ಗುಂಪುಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಮಹಿಳೆಯರು ತಿಳಿಸಿದ್ದಾರೆ. ಪ್ರತಿ ಮಹಿಳೆಯರ ಮನೆಗೆ ಅಗರಬತ್ತಿಗಳನ್ನು ತಲುಪಿಸಲು ಆಟೋ ರಿಕ್ಷಾ ಬಾಡಿಗೆಯಾಗಿ 2,500 ರಿಂದ 5,000 ರೂ.ಗಳವರೆಗೆ ಮುಂಗಡ ಶುಲ್ಕವನ್ನು ಅವರೇ ಪಾವತಿಸಬೇಕಿತ್ತು. ಮಹಿಳೆಯರು ಅದನ್ನು ಪ್ಯಾಕ್ ಮಾಡಿ ಹಿಂತಿರುಗಿಸಬೇಕಾಗಿತ್ತು.

ಕೆಲಸ ಮಾಡಿದ್ದಕ್ಕೆ ಹಣ ಸಿಗದೆ ಇದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು

ಮನೆಯಲ್ಲಿ ಕುಳಿತುಕೊಂಡು ಅಗರಬತ್ತಿಗಳನ್ನು ಪ್ಯಾಕ್ ಮಾಡುವುದರಿಂದ ಪ್ರತಿ ತಿಂಗಳು 2,500 ರೂ. ಗಳಿಸಬಹುದು ಎಂದು ಮಹಿಳೆಯನ್ನು ವಂಚಕ ನಂಬಿಸಿದ್ದ. ಈ ಕೆಲಸಕ್ಕೆ ಇತರರನ್ನು ಸೇರಿಸಿಕೊಂಡರೆ ತಮ್ಮ ಗಳಿಕೆ ಹೆಚ್ಚಾಗುತ್ತದೆ ಎಂದೂ ಮಹಿಳೆಯರಿಗೆ ಹೇಳಿದ್ದ. ಭರವಸೆ ನೀಡಿದ ಪ್ರತಿಫಲ ಮಹಿಳೆಯರ ಕೈಗೆ ಸಿಗದಿದ್ದಾಗ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಈ ಹಗರಣದಲ್ಲಿ ವಂಚನೆಗೊಳಗಾದ ಮಹಿಳೆ ಲಕ್ಷ್ಮಿ ಕಾಂಬ್ಳೆ, ನನ್ನ ಪತಿ ಇತ್ತೀಚೆಗೆ ನಿಧನರಾಗಿದ್ದಾರೆ. ನನ್ನ ಕುಟುಂಬವನ್ನು ಸಾಕಲು ನನಗೆ ವರ್ಕ್​ ಫ್ರಂ ಹೋಮ್ ಕೆಲಸ ಬೇಕಾಗಿದ್ದಾಗ ಇತರ ಮಹಿಳೆಯರಿಂದ ನನಗೆ ಈ ಯೋಜನೆಯ ಬಗ್ಗೆ ತಿಳಿಯಿತು. ನನ್ನ ಹಾಗೆಯೇ ಅನೇಕ ಮಹಿಳೆಯರು ಈ ಹಗರಣಕ್ಕೆ ಸಿಲುಕಿದ್ದಾರೆ. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾರಾಷ್ಟ್ರಕ್ಕೆ ಓಡಿಹೋದ ಆರೋಪಿಯನ್ನು ಬಂಧಿಸಬೇಕು ಮತ್ತು ನಮ್ಮ ಹಣವನ್ನು ಹಿಂದಿರುಗಿಸಲು ಸಹಾಯ ಮಾಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.