
ಬೆಳಗಾವಿ, ಡಿಸೆಂಬರ್ 3: ಡಿಸೆಂಬರ್ 8ರಿಂದ ಬೆಳಗಾವಿಯ (Belagavi) ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆ ಬೆಳಗಾವಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಯಿಂದ (Intelligence Department) ಎಚ್ಚರಿಕೆಯ ಸಂದೇಶ ಬಂದ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಹೈಅಲರ್ಟ್ ಆಗಿವೆ. ಅಧಿವೇಶನ ವೇಳೆಗೆ 6ರಿಂದ 8 ಸಾವಿರ ಪೊಲೀಸರನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಅಧಿವೇಶನದಲ್ಲಿ ಸಚಿವಾಲಯ ಸಿಬ್ಬಂದಿ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಧಿವೇಶನ ಅವಧಿಯಲ್ಲಿ ಸುವರ್ಣ ಸೌಧ ಆವರಣದಲ್ಲಿ ಸಾಲು ಸಾಲು ಪ್ರತಿಭಟನೆಗಳು ಕೂಡ ನಡೆಯುತ್ತವೆ. ಹೀಗಾಗಿ ಪ್ರತಿದಿನ 50 ಸಾವಿರ ಜನ ಸೇರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಯಾವುದೇ ಅವಘಡವಾಗದಂತೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಸುವರ್ಣ ವಿಧಾನಸೌಧದ ಸುತ್ತಮುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಅಧಿವೇಶನಕ್ಕೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಿದ್ಧತೆಗಳ ಬಗ್ಗೆ ಖುದ್ದು ಡಿಸಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ್ ಬೋರಸೆ, ಎಸ್ಪಿ ಡಾ. ಭೀಮಾಶಂಕರ ಗುಳೇದ್ ಹಾಗೂ ಸಿಇಒ ರಾಹುಲ್ ಶಿಂಧೆ ಮಂಗಳವಾರ ಪರಿಶೀಲಿಸಿದರು. ಸುವರ್ಣ ಸೌಧ ಆವರಣದಲ್ಲಿ ಉದ್ಯಾನವನ, ಧ್ವಜಸ್ತಂಭ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕೂಡ ನಡೆಯಲಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ಭರ್ಜರಿ ಸಿದ್ಧತೆ; ವಿಡಿಯೋ ನೋಡಿ
ಸಿಎಂ, ಡಿಸಿಎಂ, ಸಚಿವರು, ಶಾಸಕರು ಹಾಗೂ ಸಿಬ್ಬಂದಿಗಳ ವಾಸ್ತವ್ಯಕ್ಕೆ ಈಗಾಗಲೇ 3 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮತ್ತೊಂದೆಡೆ ನಾಡದ್ರೋಹಿ ಎಂಇಎಸ್ ಸಂಸ್ಥೆ ನಡೆಸಲು ಯೋಜಿಸಿದ್ದ ‘ಮಹಾಮೇಳಾವ್’ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.