ದೇಶದ ಅತಿ ದೊಡ್ಡ ರಾಬರಿ: ಬೆಳಗಾವಿ ಗಡಿಭಾಗದಲ್ಲಿ 400 ಕೋಟಿ ರೂ ಹಣವಿದ್ದ 2 ಕಂಟೇನರ್​​​ ಹೈಜಾಕ್​?

ಬೆಂಗಳೂರು ಮತ್ತು ಬೀದರ್​ನಲ್ಲಿ ನಡೆದಿದ್ದ ದರೋಡೆ ಬೆನ್ನಲ್ಲೇ ಇದೀಗ ದೇಶದ ಅತಿ ದೊಡ್ಡ ರಾಬರಿ ಪ್ರಕರಣವೊಂದು ಕರ್ನಾಟಕದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 400 ಕೋಟಿ ರೂ ಹಣವಿದ್ದ 2 ಕಂಟೇನರ್​ಗಳು ಬೆಳಗಾವಿ ಗಡಿಭಾಗದಲ್ಲಿ ನಾಪತ್ತೆ ಆಗಿವೆ. ಅಪರಾಧದ ಇತಿಹಾಸದಲ್ಲೇ ಬೆಚ್ಚಿಬೀಳಿಸುವ ಅತಿದೊಡ್ಡ ದರೋಡೆ ಪ್ರಕರಣ ಇದಾಗಿದೆ ಎನ್ನಲಾಗುತ್ತಿದೆ.

ದೇಶದ ಅತಿ ದೊಡ್ಡ ರಾಬರಿ: ಬೆಳಗಾವಿ ಗಡಿಭಾಗದಲ್ಲಿ 400 ಕೋಟಿ ರೂ ಹಣವಿದ್ದ 2 ಕಂಟೇನರ್​​​ ಹೈಜಾಕ್​?
ಕಂಟೇನರ್​​​ ಹೈಜಾಕ್​?
Edited By:

Updated on: Jan 25, 2026 | 9:04 AM

ಬೆಳಗಾವಿ, ಜನವರಿ 25: ಬೆಳಗಾವಿಯ ಗಡಿ ಭಾಗದ ಮೂಲಕ ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಹೈಜಾಕ್​​ ಮಾಡಲಾಗಿದೆ ಎನ್ನಲಾಗುತ್ತಿದೆ. 2025 ಅಕ್ಟೋಬರ್ 16ರಂದು ನಡೆದಿರುವ ದೇಶದ ಅತಿ ದೊಡ್ಡ ರಾಬರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸ್​​ಗೆ ಪ್ರಕರಣ ದೊಡ್ಡ ಸವಾಲಾಗಿದೆ. ಸದ್ಯ ನಾಸಿಕ್​ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಶೋಧ ನಡೆಸಿದ್ದಾರೆ.

400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಬೆಳಗಾವಿ-ಗೋವಾ ಗಡಿ ಚೋರ್ಲಾ ಘಾಟ್​​ದಿಂದ ನಾಪತ್ತೆ ಆಗಿರುವುದು ಬಹಿರಂಗವಾಗಿದೆ. ಘಟನೆ ನಡೆದು ಸುಮಾರು ತಿಂಗಳ ಬಳಿಕ ರಾಬರಿ ಪ್ರಕರಣ ಬೆಳಕಿಗೆ ಬಂದಿರುವುದು ಮೂರು ರಾಜ್ಯದ ಪೊಲೀಸರಿಗೆ ಶಾಕ್​​ ಉಂಟಾಗಿದೆ. ಜೊತೆಗೆ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರು ದರೋಡೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ಆರೋಪಿಗಳ ಬಂಧನ; ಈವರೆಗೂ ವಶಕ್ಕೆ ಪಡೆದ ಹಣವೆಷ್ಟು?

ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಾಬರಿಯಿಂದ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಹಾಗಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಪೊಲೀಸರು ಕಂಟೇನರ್ ಹುಡುಕಾಟ ನಡೆಸಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ‌ಸಿಎಂ ದೇವೇಂದ್ರ ಫಡ್ನವಿಸ್, ಪ್ರಕರಣ ತನಿಖೆಗೆ ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ಸದ್ಯ ರಾಬರಿ ಆಗಿರುವ ಭಾರಿ ಮೊತ್ತವು ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್​ಗೆ ಸೇರಿದ್ದು ಎನ್ನಲಾಗುತ್ತಿದೆ.

400 ಕೋಟಿ ರೂ ರಾಬರಿ ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬಾತನ ಅಪಹರಣದಿಂದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕಂಟೇನರ್ ‌ರಾಬರಿ ಆದ ಬಳಿಕ ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಸಹಚರರು ಸಂದೀಪ್ ಪಾಟೀಲ್​​ಗೆ ಗನ್ ಪಾಯಿಂಟ್ ತೋರಿಸಿ ಅಪಹರಿಸಿದ್ದರು. ಒಂದೂವರೆ ತಿಂಗಳು ಒತ್ತೆಯಾಳಾಗಿಸಿಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಸಂದೀಪ್‌ಗೆ ಚಿತ್ರಹಿಂಸೆ ನೀಡಿದ್ದಾರೆ.

400 ಕೋಟಿ ರೂ ಹಣ ಕೊಡದಿದ್ದರೆ ಜೀವ ತೆಗೆಯುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಸಂದೀಪ್​​ ನಾಸಿಕ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. 400 ಕೋಟಿ ರೂ ಹಣದ ವಾಹನ ಅಪಹರಿಸಿರುವ ಬಗ್ಗೆ ಸಂದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂದೀಪ್ ನೀಡಿದ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಿದ್ದು, ಇಬ್ಬರ ತಲಾಶ್ ನಡೆದಿದೆ.

ಇದು 400 ಕೋಟಿ ರೂ ಅಲ್ಲಾ 1000 ಕೋಟಿ ರೂ ಪ್ರಕರಣ: ಸಂದೀಪ್ ವಿಡಿಯೋ ಹೇಳಿಕೆ ಬಿಡಿಗಡೆ

ಇನ್ನು ಇತ್ತ ಸಂದೀಪ್ ಪಾಟೀಲ್​​ ವಿಡಿಯೋ ಹೇಳಿಕೆಯೊಂದು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದೆ. ‘ಇದು 400 ಕೋಟಿ ರೂ ಅಲ್ಲಾ 1000 ಕೋಟಿ ರೂ ಪ್ರಕರಣ. ಚೋರ್ಲಾ ಘಾಟ್​ನಲ್ಲಿ ರದ್ದಾದ 2000 ನೋಟು ತುಂಬಿದ ಹಣದ ಕಂಟೇನರ್​ ಗಯಾಬ್ ಆಗಿದೆ. ಕಂಟೇನರ್ ಗಯಾಬ್ ಮಾಡಿದ ಆರೋಪಿಗಳು‌ ಬಿಲ್ಡರ್ ಕಿಶೋರ್​​​ಗೆ ನನ್ನ ಹೆಸರಿನಿಂದ ಕರೆ ಮಾಡಿ 100 ಕೋಟಿ ರೂ ಡಿಮ್ಯಾಂಡ್​​ ಮಾಡಲಾಗಿದೆ’.

‘ಆಗ ಕಿಶೋರ್ ಸಹಚರರು ನನ್ನ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ಕೊಟ್ಟು ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದ ಇಬ್ಬರು ಪೊಲೀಸ್ ಅಧಿಕಾರಿಗಳೇ ನನಗೆ ವಾಟ್ಸಪ್ ಕರೆ ಮಾಡಿ ಬೆದರಿಕೆ ಹಾಕಿದ್ದರು. ಹೀಗಾಗಿ ಕೆಲದಿನ ಜೀವ ಭಯದಿಂದ ಸುಮ್ಮನಾಗಿದ್ದೆ. ಈ ವಿಚಾರ ಎಲ್ಲಿಯೂ ಬಾಯಿ ಬಿಡದಂತೆ ಪೊಲೀಸ್ ಅಧಿಕಾರಿಗಳ ಮೂಲಕ ಒತ್ತಡ ಹಾಕಲು ಯತ್ನಿಸಿದ್ದರು. ಆದರೂ ದೂರು ದಾಖಲಿಸಿರುವೆ. ನನ್ನ ಜೀವಕ್ಕೆ ತೊಂದರೆ ಆದರೆ ಬಿಲ್ಡರ್ ಕಿಶೋರ್ ಮತ್ತವರ ಸಹಚರರೇ ಹೊಣೆಗಾರರು’ ಎಂದು ಸಂದೀಪ್ ಪಾಟೀಲ್​​ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ಪೊಲೀಸರಿಗೆ ಸಹಕಾರ ನೀಡದ ಮಹಾರಾಷ್ಟ್ರ ಪೊಲೀಸರು

ದರೋಡೆ ಪ್ರಕರಣದ ತನಿಖೆಯಲ್ಲಿ ಮಹಾರಾಷ್ಟ್ರ ಪೊಲೀಸರು ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಗೆ ಸಂಬಂಧಿಸಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕ್‌ಗೆ ತೆರಳಿದ್ದು, ಬಂಧಿತರ ವಿಚಾರಣೆಗೆ ಅವಕಾಶ ನೀಡುವಂತೆ ಪ್ರಯತ್ನ ನಡೆಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಮಹಾರಾಷ್ಟ್ರ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳಗಾವಿ ಪೊಲೀಸರಿಗೆ ಸಹಕಾರ ನೀಡುವಂತೆ ಪತ್ರ ಬರೆದಿತ್ತು. ಈ ಪತ್ರ ಬಂದ ತಕ್ಷಣ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅಲರ್ಟ್ ಆಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ನೇತೃತ್ವದ ಕರ್ನಾಟಕ ಪೊಲೀಸ್ ತಂಡವನ್ನು ನಾಸಿಕ್‌ಗೆ ರವಾನಿಸಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ​: ಕೊನೆಗೂ ಸಿಕ್ಕಿದ ಆರೋಪಿಗಳ ಸುಳಿವು

ಬೆಳಗಾವಿ ಪೊಲೀಸರ ತಂಡ ನಿನ್ನೆ ತಡರಾತ್ರಿವರೆಗೂ ನಾಸಿಕ್ ಪೊಲೀಸ್ ಠಾಣೆಯಲ್ಲೇ ತಂಗಿದ್ದು, ಬಂಧಿತರ ವಿಚಾರಣೆ ನಡೆಸಲು ಪ್ರಯತ್ನಿಸಿದೆ. ಆದರೆ, ಮಹಾರಾಷ್ಟ್ರ ಎಸ್‌ಐಟಿ ಸಮರ್ಪಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಇತ್ತ, ಚೋರ್ಲಾ ಘಾಟ್‌ನಲ್ಲಿ ನಿಜವಾಗಿಯೂ 400 ಕೋಟಿ ರೂ ಮೊತ್ತದ ದರೋಡೆ ನಡೆದಿದೆಯೇ ಎಂಬುದರ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ದೂರುದಾರ ಸಂದೀಪ್ ಪಾಟೀಲ್ ನೀಡಿರುವ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶ ಇದೆ ಎಂಬುದನ್ನು ಪತ್ತೆಹಚ್ಚಲು ಕರ್ನಾಟಕ ಪೊಲೀಸರು ಮುಂದಾಗಿದ್ದಾರೆ. ಜೊತೆಗೆ, ಕಂಟೇನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ ಹಣವನ್ನ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಆ ಕಂಟೇನರ್‌ಗಳು ಕರ್ನಾಟಕ ರಾಜ್ಯ ಗಡಿಯನ್ನು ಪ್ರವೇಶಿಸಿದ್ದವೆಯೇ? ಎಂದು ಪತ್ತೆಗೆ ಕರ್ನಾಟಕ ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:18 am, Sun, 25 January 26