ಎಂಜಿನಿಯರಿಂಗ್ ಸೀಟ್‌ಗೂ ಲಂಚ, PSI ನೇಮಕಕ್ಕೂ ಡೀಲ್! ಬರೋಬ್ಬರಿ 21 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇಡಿ
ಕರ್ನಾಟಕದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಮತ್ತು PSI ನೇಮಕಾತಿ ಹಗರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಒಟ್ಟು 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಅಕ್ರಮವಾಗಿ OMR ಶೀಟ್ ತಿದ್ದುಪಡಿ ಹಾಗೂ ಸೀಟುಗಳ ಅಕ್ರಮ ಮಾರಾಟ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಂಗ್ರಹಿಸಿದ್ದ ಹಣವನ್ನು ವೈಯಕ್ತಿಕ ಲಾಭಕ್ಕೆ ಬಳಸಿದವರ ಭ್ರಷ್ಟಾಚಾರದ ವಿರುದ್ಧ ಇಡಿ ಮಹತ್ವದ ಹೆಜ್ಜೆ ಇಟ್ಟಿದೆ.

ಬೆಂಗಳೂರು, ಜನವರಿ 25: ಬೆಂಗಳೂರಿನ ಖ್ಯಾತ ಬಿಎಂಎಸ್ ಎಜುಕೇಶನ್ ಟ್ರಸ್ಟ್‌ಗೆ ಸಂಬಂಧಿಸಿದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ (Seat Blocking) ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮಹತ್ವದ ಕ್ರಮ ಕೈಗೊಂಡಿದ್ದು, 19.46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಲ್ಲದೆ ರಾಜ್ಯದಲ್ಲಿ 2021–22ರಲ್ಲಿ ನಡೆದ 545 ಪಿಎಸ್‌ಐಗಳ (PSI) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಇಡಿ 1.53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
18 ಸ್ಥಳಗಳಲ್ಲಿ ಇಡಿ ದಾಳಿ
ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದೂರು ನೀಡಿದ್ದು, ಮಲ್ಲೇಶ್ವರಂ ಹಾಗೂ ಹನುಮಂತನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರತ್ಯೇಕವಾಗಿ ಕೇಸ್ ದಾಖಲಿಸಿಕೊಂಡ ಇಡಿ ತನಿಖೆ ಆರಂಭಿಸಿತ್ತು. 2025ರಲ್ಲಿ ಬಿಎಂಎಸ್ ಟ್ರಸ್ಟ್ ಸದಸ್ಯರು, ಎಂಜಿನಿಯರಿಂಗ್ ಕಾಲೇಜುಗಳು, ಮಧ್ಯವರ್ತಿಗಳು ಹಾಗೂ ಏಜೆಂಟರ ಮನೆಗಳು ಸೇರಿ 18 ಸ್ಥಳಗಳಲ್ಲಿ ಇಡಿ ದಾಳಿ ನಡೆಸಲಾಗಿತ್ತು.
ನಿಗದಿತ ಶುಲ್ಕಕ್ಕಿಂತ 10 ಪಟ್ಟು ಹೆಚ್ಚು ದರಕ್ಕೆ ಸೀಟ್ಗಳ ಮಾರಾಟ
ತನಿಖೆಯಲ್ಲಿ ಬಿಎಂಎಸ್ ಟ್ರಸ್ಟ್‌ನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ನಡೆಯುತ್ತಿರುವುದು ಪತ್ತೆಯಾಗಿದೆ. ಕಾಲೇಜು ಆಡಳಿತ ಮಂಡಳಿ ಮಧ್ಯವರ್ತಿಗಳು ಹಾಗೂ ಏಜೆಂಟರ ಮೂಲಕ ವಿದ್ಯಾರ್ಥಿಗಳಿಂದ ನೇರವಾಗಿ ಮತ್ತು ಶೈಕ್ಷಣಿಕ ಸಲಹೆಗಾರರ ಮೂಲಕ ಹಣ ಸಂಗ್ರಹಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಈ ಹಣವನ್ನು ಟ್ರಸ್ಟ್‌ನ ಲೆಕ್ಕಪತ್ರಗಳಲ್ಲಿ ದಾಖಲಿಸದೆ, ಸೀಟ್‌ಗಳನ್ನು ನಿಗದಿತ ಶುಲ್ಕಕ್ಕಿಂತ 10 ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಈ ಅಕ್ರಮದಿಂದ ಸುಮಾರು 20 ಕೋಟಿ ರೂ. ಸಂಗ್ರಹದ ಸಾಕ್ಷ್ಯ ದೊರೆತಿದ್ದು, ದಾಳಿ ವೇಳೆ 1.86 ಕೋಟಿ ರೂ. ನಗದುಕೂಡ ಪತ್ತೆಯಾಗಿತ್ತು. ಅಕ್ರಮ ಹಣವನ್ನು ಟ್ರಸ್ಟಿಗಳು ವೈಯಕ್ತಿಕ ಲಾಭಕ್ಕಾಗಿ ಬಳಸಿ ಆಸ್ತಿ ಖರೀದಿಸಿದ್ದರಿಂದ 19.46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಇದೀಗ ಮುಟ್ಟುಗೋಲು ಹಾಕಿಕೊಂಡಿದೆ.
ಆಸ್ತಿ ಮುಟ್ಟಗೋಲಿನ ಕುರಿತು ಎಕ್ಸ್ ಖಾತೆಯಲ್ಲಿ ED ಪೋಸ್ಟ್
ED, Bengaluru Zonal Office has provisionally attached 03 immovable properties including 01 plot and 2 flats, having a market value of Rs. 19.46 Crore on 21.01.2026 under PMLA, 2002 belonging to the trustees of BMS Educational Trust in the case of Seat Blocking Scam. pic.twitter.com/S1UL61KNf0
— ED (@dir_ed) January 24, 2026
ಇದನ್ನೂ ಓದಿ ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ: ಕೋಟ್ಯಾಂತರ ರೂ. ಹಣ, ಮಹತ್ವದ ದಾಖಲೆಗಳು ಇಡಿ ವಶಕ್ಕೆ
ಪ್ರತಿ ಅಭ್ಯರ್ಥಿಯಿಂದ 70 ಲಕ್ಷ ರೂ ಪಡೆದಿದ್ದ ಅಧಿಕಾರಿಗಳು!
2021–22ರಲ್ಲಿ ನಡೆದ 545 ಪಿಎಸ್‌ಐಗಳ ನೇಮಕಾತಿ ಹಗರಣ ನಡೆದ ಸಂದರ್ಭದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಎಚ್. ಶ್ರೀಧರ್ ಅವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮತ್ತು ಸಿಐಡಿಯಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು, ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆ ಇಡಿಯು ಪ್ರತ್ಯೇಕವಾಗಿ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದೆ.
ಇಡಿ ತನಿಖೆಯಲ್ಲಿ, ಸಂಭಾವ್ಯರ ಪಟ್ಟಿ ಪ್ರಕಟವಾದ ನಂತರ ಅಭ್ಯರ್ಥಿಗಳ OMR ಶೀಟ್‌ಗಳನ್ನು ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. ಎಡಿಜಿಪಿ ಕಚೇರಿಯಲ್ಲಿ ಇರಿಸಿದ್ದ ಅಲ್ಮೆರಾದ ಕೀಲಿಗಳನ್ನು ಅಮೃತ್ ಪೌಲ್ ಅವರು ಡಿವೈಎಸ್‌ಪಿ ಶಾಂತಕುಮಾರ್‌ಗೆ ನೀಡಿದ್ದು, ಶಾಂತಕುಮಾರ್ ಹಾಗೂ ಹೆಚ್. ಶ್ರೀಧರ್ ಸೇರಿ OMR ಶೀಟ್‌ಗಳನ್ನು ತಿದ್ದಿದ್ದಾರೆ ಎಂಬ ಆರೋಪವಿದೆ.
ಈ ಅಕ್ರಮಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 30 ಲಕ್ಷದಿಂದ 70 ಲಕ್ಷ ರೂ.ಗಳ ವರೆಗೆ ಲಂಚ ಪಡೆಯಲಾಗಿದ್ದು, ಆ ಹಣವನ್ನು ಆರೋಪಿಗಳು ತಮ್ಮ ಡೈರಿ ಮತ್ತು ಲೆಕ್ಕಪತ್ರಗಳಲ್ಲಿ ಕೈಸಾಲ ಎಂದು ದಾಖಲಿಸಿಕೊಂಡಿದ್ದರು. ಬಳಿಕ ಈ ಅಕ್ರಮ ಹಣವನ್ನು ಮನೆಗಳ ನಿರ್ಮಾಣ ಸೇರಿದಂತೆ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿರುವುದಾಗಿ ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮ ಹಣ ವರ್ಗಾವಣೆ ನಡೆದಿರುವುದು ದೃಢಪಟ್ಟ ಹಿನ್ನೆಲೆ, ಆರೋಪಿಗಳಿಗೆ ಸೇರಿದ 1.53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:35 am, Sun, 25 January 26
