ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಾವು ಜೋರಾಗಿದ್ದು, ಬಹಿರಂಗ ಚುನಾವಣಾ ಪ್ರಚಾರಕ್ಕೆ ಇನ್ನೆರೆಡು ದಿನ ಬಾಕಿ ಇದೆ. ಹೀಗಾಗಿ ಚುನಾವಣಾ ಕಣ ಇದೀಗ ರಂಗು ಪಡೆದುಕೊಂಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಜೋರಾಗಿ ನಡೆಯುತ್ತಿದೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರ ಬರುತ್ತದೆ. ಇದರಲ್ಲಿ ಆರು ಜನ ಬಿಜೆಪಿ ಶಾಸಕರಿದ್ದು, ಗೆಲುವು ನಮ್ಮದೇ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಹಾಗಿದ್ದರೆ ಬಿಜೆಪಿ ಗೆಲುವಿನ ಲೆಕ್ಕಚಾರ ಏನು ಎನ್ನುವ ಗೊಂದಲಕ್ಕೆ ಬಿಜೆಪಿ ಕಾರ್ಯಕರ್ತರು ಉತ್ತರ ನೀಡಿದ್ದಾರೆ.
ಬಿಜೆಪಿ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಇದ್ದು, ಮತದಾರರ ಓಲೈಕೆಗೆ ನಾನಾ ತಂತ್ರಗಳನ್ನ ಎರಡು ಪಕ್ಷಗಳು ಮಾಡುತ್ತಿವೆ. ಅದರಲ್ಲೂ ಬಿಜೆಪಿಯಲ್ಲಿ ಗೆಲುವಿನ ಲೆಕ್ಕಾಚಾರ ಹಿಡಿದುಕೊಂಡು ಬಿಜೆಪಿ ನಾಯಕರು ಅಖಾಡಕ್ಕಿಳಿದಿದ್ದು, ಕ್ಷೇತ್ರವಾರು ಮನೆ ಮನೆಗೆ ತೆರಳಿ ಮತದಾರರನ್ನ ತಮ್ಮತ್ತ ಸೆಳೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪ್ರಚಾರ ಮಾಡುತ್ತಿರುವುದು ಒಂದು ಕಡೆಯಾದರೆ, ಇತ್ತ ಆಯಾ ಕ್ಷೇತ್ರವಾರು ಶಾಸಕರು ಪ್ರಚಾರ ಮಾಡುತ್ತಿದ್ದಾರೆ.
ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ 8ವಿಧಾನಸಭಾ ಕ್ಷೇತ್ರಗಳು ಬರುತ್ತಿದ್ದು, ಇದರಲ್ಲಿ ಎರಡು ಕ್ಷೇತ್ರ ಹೊರತುಪಡಿಸಿದರೆ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಇದು ಬಿಜೆಪಿಗೆ ಪ್ಲಸ್ ಆಗಲಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ. ಆರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, ಈ ಎಲ್ಲಾ ಶಾಸಕರು ಇದೀಗ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಸಭೆಗಳ ಮೇಲೆ ಸಭೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿಸುವಂತೆ ಹೇಳುತ್ತಿದ್ದಾರೆ. ಶಾಸಕರೇ ಪ್ರಚಾರದಲ್ಲಿ ಮುಂದೆ ಬಂದಿರುವುದರಿಂದ ಇದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಲಾಭವಾಗಲಿದೆ ಎಂದು ಸ್ಥಳೀಯರಾದ ಮಹಾಂತೇಶ್ ವಕ್ಕುಂದ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅಬ್ಬರದ ಪ್ರಚಾರ
ಇತ್ತ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಕೂಡ ಅಬ್ಬರದ ಪ್ರಚಾರ ಮಾಡುತ್ತಿದ್ದು, ಇದರ ಜೊತೆಗೆ ಜಾತಿ ಲೆಕ್ಕಾಚಾರ ಕೆಲಸ ಮಾಡುತ್ತಿದ್ದಾರೆ.. ಲಿಂಗಾಯತ ಮತದಾರರೇ ಈ ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವ ಕಾರಣಕ್ಕೆ ಇದೀಗ ಎರಡು ಪಕ್ಷದವರು ಲಿಂಗಾಯತ ಮತಗಳನ್ನ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಲಿಂಗಾಯತ ಮುಖಂಡರಾದ ಅಶೋಕ ಪೂಜಾರಿ ಸೇರಿದಂತೆ ಹಲವರನ್ನ ಸೆಳೆಯುವ ಕೆಲಸ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಂದ ಮತಯಾಚನೆ
ಇನ್ನು ನಾಳೆ ಮತ್ತೆ ಬಿಜೆಪಿ ಅಭ್ಯರ್ಥಿ ಪರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಚಾರ ನಡೆಸಲಿದ್ದು, ಎರಡು ದಿನಗಳ ಕಾಲ ಬೆಳಗಾವಿಯಲ್ಲೇ ಇದ್ದು ಚುನಾವಣಾ ಪ್ರಚಾರ ಕೂಡ ಮಾಡಲಿದ್ದಾರೆ. ಇದೇ ವೇಳೆ ಲಿಂಗಾಯತ ಸಮುದಾಯ ಮುಖಂಡರು, ಸ್ವಾಮೀಜಿಗಳ ಜೊತೆಗೆ ಕೂಡ ಸಭೆಯನ್ನ ಮಾಡಲಿದ್ದಾರೆ.
ಮುಖ್ಯಮಂತ್ರಿ ಮತಯಾಚನೆ ಮಾಡಿದರೆ ಎಂಟರಿಂದ ಒಂಬತ್ತು ಲಕ್ಷ ಇರುವ ಲಿಂಗಾಯತ ಸಮುದಾಯದ ಮತದಾರರು ಸಿಎಂ ಮಾತಿಗೆ ಬದ್ದರಾಗಿ ಮತ್ತು ಮಂಗಳಾ ಅಂಗಡಿ ಲಿಂಗಾಯತ ಸಮುದಾಯದ ಹೆಣ್ಣು ಮಗಳು ಎನ್ನುವ ಕನಿಕರದಿಂದ ಸಮುದಾಯದ ಬಹುತೇಕ ಜನ ಬಿಜೆಪಿಗೆ ಜೈ ಎನ್ನುತ್ತಾರೆ. ಜೊತೆಗೆ ಉಳಿದೆಲ್ಲ ಸಮಾಜದವರು ಕೂಡ ನಮ್ಮೊಂದಿಗೆ ಇದ್ದಾರೆ. ಹೀಗಾಗಿ ಬಹಳ ಅಂತರದಿಂದ ನಾವು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಒಟ್ಟಾರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಕಣ ರಂಗು ಪಡೆದುಕೊಳ್ಳುವುದರ ಜತೆಗೆ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಸದ್ಯ ಪ್ರಚಾರದ ಅಬ್ಬರ ಕೂಡ ಜೋರಾಗಿದೆ. ಬಿಜೆಪಿಗೆ ಆಯಾ ಕ್ಷೇತ್ರದ ಶಾಸಕರೇ ಆನೆ ಬಲವಾದರೆ ಇತ್ತ ಕಾಂಗ್ರೆಸ್ಗೆ ಕೇಂದ್ರ ಸರ್ಕಾರದ ವೈಫಲ್ಯವೇ ಅಸ್ತ್ರವಾಗಿದೆ. ಎರಡೂ ಪಕ್ಷಗಳೂ ತಮ್ಮ ತಂತ್ರಗಾರಿಕೆಯನ್ನು ಬಳಕೆ ಮಾಡಿಕೊಂಡು ಮತದಾರರನ್ನ ಸೆಳೆಯುತ್ತಿವರ. ಆದರೆ ಮತದಾರರು ಯಾರಿಗೆ ಜೈ ಎನ್ನುತ್ತಾರೆ ಎಂಬುದು ಮಾತ್ರ ಫಲಿತಾಂಶದ ದಿನವೇ ಬಹಿರಂಗವಾಗಲಿದೆ.
ಇದನ್ನೂ ಓದಿ: ಬಸವಕಲ್ಯಾಣ ಉಪಚುನಾವಣೆ: ಪಕ್ಷದ ಪರ ಪ್ರಚಾರಕ್ಕೆ ಮುಂದಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ
(Belagavi bypoll 2021 BJP leaders campaigning for their party candidates)