Belagavi session: ಸದನದಲ್ಲಿ ಗದ್ದಲಕ್ಕೆ ಕಾರಣವಾಯ್ತು ಮುಸ್ಲಿಮರ ಬಜೆಟ್ ಹೆಚ್ಚಳ ಕುರಿತ ಸಿದ್ದರಾಮಯ್ಯ ಹೇಳಿಕೆ

| Updated By: Ganapathi Sharma

Updated on: Dec 06, 2023 | 6:29 PM

ಬೆಳಗಾವಿ ಅಧಿವೇಶನ 2023: ಸರ್ಕಾರವು ಸದನದ ಹೊರಗೆ ಘೋಷಣೆಗಳನ್ನು ಮಾಡಲು ಬಯಸಿದರೆ ವಿಧಾನಮಂಡಲದ ಅಧಿವೇಶನವನ್ನು ಏಕೆ ನಡೆಸಬೇಕು? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು.

Belagavi session: ಸದನದಲ್ಲಿ ಗದ್ದಲಕ್ಕೆ ಕಾರಣವಾಯ್ತು ಮುಸ್ಲಿಮರ ಬಜೆಟ್ ಹೆಚ್ಚಳ ಕುರಿತ ಸಿದ್ದರಾಮಯ್ಯ ಹೇಳಿಕೆ
ವಿಧಾನಸಭೆಯಲ್ಲಿ ಆರ್ ಅಶೋಕ್
Follow us on

ಬೆಳಗಾವಿ, ಡಿಸೆಂಬರ್ 6: ಅಲ್ಪಸಂಖ್ಯಾತರ ಬಜೆಟ್ ಅನ್ನು 10,000 ಕೋಟಿ ರೂ.ಗೆ ಏರಿಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮುಸ್ಲಿಂ (Muslim) ಸಮಾವೇಶದಲ್ಲಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿಧಾನಸಭೆಯಲ್ಲಿ ಬುಧವಾರ ಕೋಲಾಹಲ ಸೃಷ್ಟಿಸಿತು. ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮ ಗುರುಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷ ನಾವು ಅಲ್ಪಸಂಖ್ಯಾತರ ಇಲಾಖೆಗೆ 4,000 ಕೋಟಿ ರೂ.ಗಳನ್ನು ನೀಡಿದ್ದೇವೆ. ಪ್ರತಿ ವರ್ಷ ಅದನ್ನು ಹೆಚ್ಚಿಸಲು ನಾವು ಕೆಲಸ ಮಾಡುತ್ತೇವೆ. ಅಂತಿಮವಾಗಿ, ಅಲ್ಪಸಂಖ್ಯಾತರ ಇಲಾಖೆ ಮೂಲಕ 10,000 ಕೋಟಿ ರೂಪಾಯಿ ಖರ್ಚು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದರು.

ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಸಂಪ್ರದಾಯದ ಪ್ರಕಾರ, ಸದನದ ಹೊರಗೆ ಯಾವುದೇ ಹೊಸ ಘೋಷಣೆಯನ್ನು ಮಾಡಲಾಗುವುದಿಲ್ಲ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಸದಸ್ಯರಾದ ನಮಗೆ ತಿಳಿಯುವ ಆ ಬಗ್ಗೆ ಹಕ್ಕಿದೆ. ಆದರೆ ಪತ್ರಿಕೆಗಳನ್ನು ಓದಿದ ನಂತರ ನಮಗೆ ವಿಷಯ ತಿಳಿಯಿತು. ಈ ಬಗ್ಗೆ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಸುನೀಲ್ ಕುಮಾರ್ ಒತ್ತಾಯಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಸದನದಲ್ಲಿ ಇರಲಿಲ್ಲ. ಆದರೆ ಅವರನ್ನು ಆಡಳಿತ ಪಕ್ಷದ ಇತರ ಸದಸ್ಯರು ಸಮರ್ಥಿಸಿಕೊಂಡರು.

ಸಿಎಂ ಹೇಳಿದ್ದರಲ್ಲಿ ಏನು ತಪ್ಪಿದೆ? ಹಣಕಾಸಿನ ಯಾವುದೇ ನಿರ್ಧಾರವು ಹೇಗಿದ್ದರೂ ಅನುಮೋದನೆಗಾಗಿ ಈ ಸದನಕ್ಕೆ ಬರಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ಬಜೆಟ್ ಅನ್ನು 10,000 ಕೋಟಿ ರೂ.ಗೆ ಹೆಚ್ಚಿಸಲು ಪ್ರಯತ್ನಿಸುವುದಾಗಿ ಸಿಎಂ ಹೇಳಿದ್ದಾರೆ. ಇಲ್ಲಿ ನಿಯಮಗಳ ಉಲ್ಲಂಘನೆ ಏನಾಗಿದೆ? ಅವರು ಹಣ ಮಂಜೂರು ಮಾಡಿದ್ದರೆ ನೀವು ಆಕ್ಷೇಪಿಸಬಹುದು ಎಂದರು.

ಆದರೆ ಪಟ್ಟು ಬಿಡದ ಬಿಜೆಪಿ ನಾಯಕರು ತಮ್ಮ ವಾದ ಮುಂದುವರಿಸಿದರು.

ಇದನ್ನೂ ಓದಿ: ಬಿಜೆಪಿ ಕಾಂಗ್ರೆಸ್​ಗೆ ರೆಬೆಲ್ ಸ್ಟಾರ್​ಗಳ ತಲೆನೋವು: ಸ್ವಪಕ್ಷದ ವಿರುದ್ಧವೇ ಈ ನಾಯಕರ ಆಕ್ರೋಶ!

ಸರ್ಕಾರವು ಸದನದ ಹೊರಗೆ ಘೋಷಣೆಗಳನ್ನು ಮಾಡಲು ಬಯಸಿದರೆ ವಿಧಾನಮಂಡಲದ ಅಧಿವೇಶನವನ್ನು ಏಕೆ ನಡೆಸಬೇಕು? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು. ನಾನು ಸಿಎಂ ಅವರ ಭಾಷಣದ ವರದಿಯಲ್ಲಿ ನೋಡಿದ್ದೇನೆ, ಅವರು ಅಲ್ಪಸಂಖ್ಯಾತರಿಗೆ 10,000 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅಶೋಕ್ ಹೇಳಿದರು.

ಎರಡು ದಿನಗಳ ಹಿಂದೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತರಿಗೆ 2,000-3,000 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನೀಡುವ ಸಾಮರ್ಥ್ಯ ನಿಮ್ಮ ಸರ್ಕಾರಕ್ಕಿಲ್ಲ. ಬದಲಾಗಿ ಅಲ್ಪಸಂಖ್ಯಾತರಿಗೆ 10,000 ಕೋಟಿ ರೂ. ಘೋಷಣೆ ಮಾಡಿದ್ದೀರಿ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ