
ಬೆಳಗಾವಿ, ಡಿಸೆಂಬರ್ 8: ಕುರ್ಚಿ ಕದನದಿಂದ ಸದ್ದುಮಾಡುತ್ತಿದ್ದ ಕರ್ನಾಟಕ ರಾಜಕೀಯ ಇದೀಗ ಬೆಳಗಾವಿಗೆ (Belagavi) ಶಿಫ್ಟ್ ಆಗಿದೆ. ಇಂದಿನಿಂದ ಚಳಿಗಾಲದ ಅಧಿವೇಶನ (Karnataka Winter Session) ಆರಂಭವಾಗುತ್ತಿದೆ. ಸರಣಿ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷಗಳು ಸಜ್ಜುಗೊಂಡಿವೆ. ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ಕಾಂಗ್ರೆಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೊದಲ ದಿನವಾದ ಇವತ್ತು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆ ನಡೆಯಲಿದೆ. ಆದರೆ, ಮೊದಲ ದಿನವೇ ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ನಿಲುವಳಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಅಧಿವೇಶನದಲ್ಲಿ ಭಾರೀ ಹಂಗಾಮ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅನ್ನದಾತರ ಸಮಸ್ಯೆಗಳನ್ನು ಇಟ್ಟುಕೊಂಡೇ ಮೊದಲ ಹಂತದ ಹೋರಾಟಕ್ಕಿಳಿಯಲು ಬಿಜೆಪಿ ಸರ್ವ ಸನ್ನದ್ಧವಾಗಿದೆ.
ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದೆ, ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕುಂಠಿತವಾಗಿದೆ. ಮೆಕ್ಕೆಜೋಳ, ಕಬ್ಬಿಗೆ ಬೆಂಬಲ ಬೆಲೆ, ಖರೀದಿ ಕೇಂದ್ರ ಸ್ಥಾಪನೆ, ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ವಿಚಾರವನ್ನೇ ಅಧಿವೇಶನದಲ್ಲಿ ಮುಂದಿಟ್ಟು ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಬೆಳಗಾವಿಯಲ್ಲಿ 20 ಸಾವಿರ ರೈತರನ್ನು ಸೇರಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಳಗಾವಿಗೆ ತೆರಳುವ ಮಾರ್ಗಮಧ್ಯೆ ಭಾನುವಾರ ಹುಬ್ಬಳ್ಳಿಗೆ ಬಂದಿಳಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ಇದಕ್ಕಾಗಿ ಎಚ್ಚರಿಸುವ ಕೆಲಸ ಮಾಡ್ತೇವೆ. ಸುವರ್ಣಸೌಧ ಮುತ್ತಿಗೆ ಹಾಕುವ ರೈತರಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.
ಮೆಕ್ಕೆಜೋಳ ಬೆಲೆ ವಿಚಾರದಲ್ಲಿ ಕೇಂದ್ರದ ವೈಫಲ್ಯ ಬಗ್ಗೆ ಪ್ರತ್ಯಾರೋಪ, ಕಬ್ಬು ಬೆಳೆ ವಿಚಾರದಲ್ಲೂ ಕೇಂದ್ರದ ವಿರುದ್ಧ ಆರೋಪಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ಕಬ್ಬು, ಮೆಕ್ಕೆಜೋಳ ಬೆಳೆಗಾರರ ಬೆನ್ನಿಗೆ ಸರ್ಕಾರ ನಿಂತಿದೆ ಎಂದು ಸಮರ್ಥನೆ ಮಾಡಿಕೊಳ್ಳಲು ಯೋಜಿಸಿದೆ. 1 ಲಕ್ಷ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ ಜನರ ಕಲ್ಯಾಣ ಕಾರ್ಯಗಳನ್ನು ಹಮ್ಮಿಕೊಂಡಿರುವ ಬಗ್ಗೆ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ಮಾಡಿದೆ.
ಮತ್ತೊಂದೆಡೆ, ಅಧಿವೇಶನ ಹಿನ್ನೆಲೆ ಸುವರ್ಣಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಾನುವಾರ ರಾತ್ರಿ ಸುವರ್ಣಸೌಧ ಜಗಮಗಿಸುತ್ತಿತ್ತು.
ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಪೂರ್ಣ: ಏಳುಸುತ್ತಿನ ಕೋಟೆಯಾದ ಕುಂದಾನಗರಿ
ಒಟ್ಟಾರೆ ಇಡೀ ಸರ್ಕಾರ, ವಿಪಕ್ಷಗಳು ಬೆಳಗಾವಿಯಲ್ಲಿ ಬೀಡುಬಿಟ್ಟಿವೆ. ಇಂದಿನಿಂದ ಡಿಸೆಂಬರ್ 19ರವರೆಗೂ ಚಳಿಗಾಲದ ಅಧಿವೇಶನ ನಡೆಯಲಿದ್ದು ರಾಜಕೀಯ ಜಿದ್ದಾಜಿದ್ದಿ ಕಾವೇರುವುದು ಖಚಿತವಾಗಿದೆ. ಸದನ ಒಳಗೆ ಮತ್ತು ಹೊರಗೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೂಪುರೇಷೆ ಸಜ್ಜಾಗಿದೆ. ವಿವಿಧ ಸಂಘಟನಗಳು ಭಾರಿ ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, 6 ಸಾವಿರಕ್ಕೂ ಅಧಿಕ ಪೊಲೀಸರ ಭದ್ರತೆ ಹಾಕಲಾಗಿದೆ.