ನಾಳೆಯಿಂದ ಬೆಳಗಾವಿ ಚಳಿಗಾಲ ಅಧಿವೇಶನ: ವಿಪಕ್ಷ ಬಿಜೆಪಿಗೆ ಮಗ್ಗಲು ಮುಳ್ಳಾದ ಯತ್ನಾಳ್..ಅಶೋಕ್ ಹೊಸ ಪ್ಲ್ಯಾನ್

|

Updated on: Dec 08, 2024 | 1:11 PM

ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣೋತ್ಸವ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕೆ ಎದುರಾಗಿದೆ. ವಕ್ಫ್‌, ವಾಲ್ಮೀಕಿ, ಮುಡಾ ಹಗರಣ, ಬಾಣಂತಿಯರ ಸಾವಿ ನಂತಹ ವಿವಾದಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷ ಗಳು ಸಜ್ಜಾಗಿವೆ. ಹೀಗಾಗಿ ಮಗ್ಗಲು ಮುಳ್ಳಾಗಿರುವ ಯತ್ನಾಳ್​ ಅವರನ್ನು ಬಿಜೆಪಿ ವಿಶ್ವಾಸ ತೆಗೆದುಕೊಂಡಿದೆ.

ನಾಳೆಯಿಂದ ಬೆಳಗಾವಿ ಚಳಿಗಾಲ ಅಧಿವೇಶನ: ವಿಪಕ್ಷ ಬಿಜೆಪಿಗೆ ಮಗ್ಗಲು ಮುಳ್ಳಾದ ಯತ್ನಾಳ್..ಅಶೋಕ್ ಹೊಸ ಪ್ಲ್ಯಾನ್
ಅಶೋಕ್, ಯತ್ನಾಳ್
Follow us on

ಬೆಂಗಳೂರು, (ಡಿಸೆಂಬರ್ 08): ಕಾಂಗ್ರೆಸ್ ಪಡೆಗೆ ಚುಚ್ಚಲು ಬಿಜೆಪಿ ಅಸ್ತ್ರಗಳನ್ನು ರೆಡಿ ಮಾಡಿಕೊಂಡಿದೆ. ಮುಡಾ, ವಾಲ್ಮೀಕಿ, ವಕ್ಫ್, ಬಾಣಂತಿಯರ ಸಾವು ಪ್ರಕರಣ.. ಹೀಗೆ ಒಂದಾಂದ ಮೇಲೆೊಂದು ಬಿಜೆಪಿ ಬಾಯಿಗೆ ಕೈ ಪಡೆಯೇ ಲಡ್ಡು ಕೊಟ್ಟಂತೆ ಕೊಟ್ಟಿದೆ. ಹೀಗಾಗಿ ಅಸ್ತ್ರಗಳನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ಬಿಜೆಪಿ ಅಧಿವೇಶನಕ್ಕೆ ಸಜ್ಜಾಗಿದೆ. ಆದ್ರೆ, ಕೈ ಪಡೆ ನಾಯಕರು ಯತ್ನಾಳ್ ಬಣ ಹೋರಾಟವನ್ನ ಗುರಾಣಿಯಂತೆ ಪ್ರತ್ಯಸ್ತ್ರ ಮಾಡಿಕೊಂಡಿದೆ. ಹೀಗಾಗಿ ಕೈಪಡೆಗೆ ಅಸ್ತ್ರ ಸಿಗದಂತೆ ಮಾಡಲು ಕಮಲ ನಾಯಕರು ಯತ್ನಾಳ್‌ರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ನಾಳೆಯಿಂದ ಅಂದರೆ ಡಿಸೆಂಬರ್ 09ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಬಿಸಿ ಏರಲಿದೆ. ಬಿಜೆಪಿ ಅಸ್ತ್ರಗಳಿಗೆ ಕೊರೊನಾಸ್ತ್ರ ರೆಡಿ ಮಾಡಿರೋ ಕಾಂಗ್ರೆಸ್, ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನ ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ. ಬಿಜೆಪಿ ವಕ್ಫ್ ವಿಚಾರ ಮುಂದಿಟ್ರೆ, ಯತ್ನಾಳ್ ಪ್ರತ್ಯೇಕ ಹೋರಾಟವನ್ನೇ ಪ್ರಸ್ತಾಪಿಸಿ ತಿವಿಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ, ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ: ಸೋಮಶೇಖರ್, ಹೆಬ್ಬಾರ್ ಬಗ್ಗೆ ಹೈಕಮಾಂಡ್​ಗೆ ದೂರು: ಬಿಜೆಪಿ ಕೋರ್ ಕಮಿಟಿ ತೀರ್ಮಾನ

ಯತ್ನಾಳ್ ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ಲ್ಯಾನ್

ವಕ್ಫ್​ ಹೋರಾಟದಲ್ಲಿ ವ್ಯತ್ಯಾಸವಾಗದಂತೆ ಪ್ಲ್ಯಾನ್​ ರೂಪಿಸಿರುವ ವಿಪಕ್ಷ ನಾಯಕ ಆರ್‌. ಅಶೋಕ್,
ನಿಲುವಳಿ ರೂಪದಲ್ಲಿ ವಿಷಯ ಪ್ರಸ್ತಾಪಿಸಲಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ಚರ್ಚೆ ಮುಂದುವರೆಸಲಿದ್ದಾರೆ. ಹೀಗಂತ ಪ್ಲ್ಯಾನ್ ಮಾಡಿಕೊಂಡು ಯತ್ನಾಳ್‌ರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಅಶೋಕ್ ಮುಂದಾಗಿದ್ದಾರೆ.
ಯತ್ನಾಳ್ ತಂಡದ ಪ್ರತ್ಯೇಕ ಚಟುವಟಿಕೆಯಿಂದ ಮುಜುಗರ ಸಾಧ್ಯತೆ ಹಿನ್ನೆಲೆಯಲ್ಲಿ ಬಹಿರಂಗ ಹೋರಾಟ ಬಿಟ್ಟು ಸದನದೊಳಗೆ ಒಗ್ಗಟ್ಟಾಗಿ ಹೋರಾಡಲು ತಂತ್ರ ರೂಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಇಷ್ಟು ದಿನ ಯತ್ನಾಳ್ ಮೇಲೆ ಬೆಂಕಿಯುಗುಳ್ತಿದ್ದ ಯತ್ನಾಳ್, ಈಗ ಸಾಫ್ಟ್ ಆದಂತೆ ಕಾಣಿಸುತ್ತಿದೆ.

ನಿನ್ನೆ(ಡಿಸೆಂಬರ್ 07) ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್, ಬಹಿರಂಗವಾಗಿ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಅತ್ತ ಯತ್ನಾಳ್‌ಗೂ ಶಿಸ್ತು ಸಮಿತಿ ಸಭೆಯಲ್ಲಿ ಇದೇ ಸೂಚನೆಯನ್ನ ನೀಡಲಾಗಿದೆ. ಹೀಗಾಗಿ ಯತ್ನಾಳ್‌ ಕೂಡಾ ಬಹಿರಂಗವಾಗಿ ಹೆಚ್ಚು ಮಾತನಾಡುತ್ತಿಲ್ಲ. ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಿಲ್ಲ. ಬದಲಾಗಿ ತಮ್ಮ ವಾಗ್ದಾಳಿಯನ್ನ ಸರ್ಕಾರದ ಕಡೆ ತಿರುಗಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಯತ್ನಾಳ್ ಸಿಡಿಗುಂಡಿಗೆ ತಿರುಗೇಟು ಕೊಟ್ಟಿರೋ ಸಚಿವ ಚಲುವರಾಯಸ್ವಾಮಿ, ಶಾಸಕ ಯತ್ನಾಳ್ ಒಂದ್ಕಡೆ ಪಕ್ಷದ ವಿರುದ್ಧ ಹೋರಾಟ ಮಾಡ್ತಿದ್ರೆ, ಮತ್ತೊಂದ್ಕಡೆ ಸರ್ಕಾರದ ವಿರುದ್ಧ ಮಾತನಾಡ್ತಾರೆ. ಅವರಿಗೆ ಪುರುಸೋತ್ತಿಲ್ಲ ಎಂದು ಕಾಲೆಳೆದಿದ್ದಾರೆ. ಆದ್ರೆ, ಬಿಜೆಪಿ ನಾಯಕರೇನೋ ಯತ್ನಾಳ್ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಡಲು ಮುಂದಾಗಿದ್ದಾರೆ. ಆದ್ರೆ, ಯತ್ನಾಳ್ ನಿಜಕ್ಕೂ ಸದನದಲ್ಲಿ ಬಿಜೆಪಿ ನಾಯಕರ ಜೊತೆಗೂಡಿ ವಕ್ಫ್ ವಿರುದ್ಧ ಹೋರಾಡುತ್ತಾರಾ? ವಿಪಕ್ಷ ಅಶೋಕ್ ಪ್ಲ್ಯಾನ್‌ಗೆ ಕೈ ಜೋಡಿಸುತ್ತಾರಾ? ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ