ಸೋಮಶೇಖರ್, ಹೆಬ್ಬಾರ್ ಬಗ್ಗೆ ಹೈಕಮಾಂಡ್ಗೆ ದೂರು: ಬಿಜೆಪಿ ಕೋರ್ ಕಮಿಟಿ ತೀರ್ಮಾನ
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆ ಸೋಲು, ಪಕ್ಷದೊಳಗಿನ ಬಣಗಳ ಜಗಳ, ಮತ್ತು ಶಾಸಕರ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು. ವಿಜಯೇಂದ್ರ ಬಣದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ, ಯತ್ನಾಳ್ ಬಣದವರು ಸಭೆಯಲ್ಲಿ ಭಾಗವಹಿಸಲಿಲ್ಲ. ಶಾಸಕರಾದ ಎಸ್ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಹೈಕಮಾಂಡ್ಗೆ ಸಂದೇಶ ರವಾನಿಸಲು ತೀರ್ಮಾನಿಸಲಾಯಿತು.
ಬೆಂಗಳೂರು, ಡಿಸೆಂಬರ್ 7: ಉಪಚುನಾವಣೆ ಸೋಲು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ಜಗಳ, ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಪಕ್ಷ ವಿರೋಧಿ ಚಟುವಟಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಯಿತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಪಕ್ಷದ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಗ್ಗೆ ಹೈಕಮಾಂಡ್ಗೆ ದೂರು ನೀಡುವ ತೀರ್ಮಾನಕ್ಕೆ ಬರಲಾಯಿತು.
ಬಿಜೆಪಿ ಉಸ್ತುವಾರಿ ಮುಂದೆ ವಿಜಯೇಂದ್ರ ಬಣ ಪ್ರಸ್ತಾಪಿಸಿದ್ದೇನು?
ಬಣ ಬಡಿದಾಟ, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಹೀಗೆ ಹತ್ತು ಹಲವು ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಸಭೆಯಲ್ಲಿ ವಿಜಯೇಂದ್ರ ಬಣದ ನಾಯಕರು ಭಾಗಿಯಾಗಿದ್ದರು. ರಾಧಾ ಮೋಹನ್ ದಾಸ್ ಮುಂದೆ ಬಣ ಬಡಿದಾಟದ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಆದರೆ, ಯತ್ನಾಳ್ ಬಣದ ಯಾವ ನಾಯಕರೂ ಸಭೆಗೆ ಬಂದಿರಲಿಲ್ಲ. ಸಭೆಯ ಬಳಿಕ ಮಾತನಾಡಿದ ರಾಧಾ ಮೋಹನ್ ದಾಸ್, ಶಾಸಕ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಉತ್ತರ ಬಂದ ಮೇಲೆಯೇ ಮುಂದಿನ ನಡೆ ಎಂದರು. ಪ್ರಸ್ತುತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತ ಎನಿಸಿದೆ, ಹೀಗಾಗಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದರು.
ಬಿಜೆಪಿ ಕೋರ್ ಕಮಿಟಿ ಸಭೆಯ ಇನ್ಸೈಡ್ ಮಾಹಿತಿ
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ಬಗ್ಗೆ ಚರ್ಚೆ ಮಾಡಲಾಗಿದೆ. ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಗ್ಗೆ ಗಂಭೀರ ಚರ್ಚೆ ಮಾಡಲಾಗಿದೆ. ಇಬ್ಬರ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ನಿರ್ಧಾರ ಆಗಿದೆ. ಇದಿಷ್ಟೇ ಅಲ್ಲದೆ, ಸಭೆಯಲ್ಲಿ ಶಾಸಕ ಯತ್ನಾಳ್ ಬಣದ ನಡೆಯ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕಠಿಣ ಕ್ರಮಕೈಗೊಳ್ಳಲು ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಇನ್ನು 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಿನ ಬಗ್ಗೆಯೂ ಪರಾಮರ್ಶೆ ಮಾಡಲಾಗಿದೆ. ಸೋಲಿನ ವರದಿ ಪಡೆಯಲು ಸಮಿತಿ ರಚನೆಗೆ ಕೋರ್ ಕಮಿಟಿ ನಿರ್ಧಾರ ಮಾಡಲಾಗಿದೆ.
ಸಭೆಯ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯತ್ನಾಳ್ ನಡೆ ಪಕ್ಷಕ್ಕೂ ಒಳ್ಳೆಯದಲ್ಲ. ಎಲ್ಲವನ್ನೂ ಚರ್ಚೆ ಮಾಡಿದ್ದೇವೆ ಎಂದರು.
ಕೋರ್ ಕಮಿಟಿ ಸಭೆಗೂ ಮುನ್ನ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರನ್ನು ವಿಜಯೇಂದ್ರ ಆಪ್ತರು ಭೇಟಿಯಾಗಿದ್ದರು. ಈ ವೇಳೆ ರೇಣುಕಾಚಾರ್ಯ, ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನೇ ಮುಂದುವರಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ಬಣ ಬಡಿದಾಟದ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಗಂಭೀರವಾಗಿಯೇ ಚರ್ಚೆ ಮಾಡಲಾಗಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಎಂದು ರಾಧಾ ಮೋಹನ್ ದಾಸ್ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಮತ್ತೊಂದೆಡೆ, ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಮಾಜಿ ಸಿಎಂ ಡಿವಿ ಸದಾನಂದ ಗೌಡ ಪ್ರಸ್ತಾಪಿಸಿದರು. ಯತ್ನಾಳ್ ಬಣ ಮತ್ತು ರೇಣುಕಾಚಾರ್ಯ ಬಣಗಳ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಉಸ್ತುವಾರಿ ರಾಧಾ ಮೋಹನ್ ದಾಸ್, ಅದೆಲ್ಲಾ ದೆಹಲಿಯಲ್ಲಿ ಚರ್ಚೆ ಆಗುತ್ತದೆ. ಅವರು ದೆಹಲಿಯಲ್ಲಿ ಹೋಗಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದಿದ್ದಾರೆ. ಇಲ್ಲಿ ಅದೆಲ್ಲಾ ಚರ್ಚೆ ಯಾಕೆ ಎಂದರು.
ಸದಾನಂದ ಗೌಡ ನೇತೃತ್ವದಲ್ಲಿ ಸಮಿತಿ
ಉಪಚುನಾವಣಾ ಸೋಲಿನ ಬಗ್ಗೆ ಕಾರಣ ತಿಳಿಯಲು ಸಮಿತಿ ರಚನೆಗೆ ಕೋರ್ ಕಮಿಟಿ ನಿರ್ಧಾರ ಕೈಗೊಂಡಿತು. ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ನೇತೃತ್ವದ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು. ವಕ್ಪ್ ಆಸ್ತಿ ವಿಚಾರ ಮತ್ತು ಬಳ್ಳಾರಿ ಬಿಮ್ಸ್ ಪ್ರಕರಣವನ್ನು ಸದನದಲ್ಲಿ ತೀವ್ರವಾಗಿ ಪ್ರಸ್ತಾಪಿಸಲು ಕೋರ್ ಕಮಿಟಿ ಸಭೆ ನಿರ್ಧಾರ ಕೈಗೊಂಡಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಗೆ ಪಟ್ಟು ಹಿಡಿಯುವ ಬಗ್ಗೆ ಕೂಡಾ ಚರ್ಚೆ ನಡೆಯಿತು.
ವರಸೆ ಬದಲಿಸದ ಯತ್ನಾಳ್
ಆದರೆ, ಅತ್ತ ಯತ್ನಾಳ್ ನಡೆಯಲ್ಲಿ ಒಂದಿನಿತೂ ಬದಲಾವಣೆಯೇ ಆಗಿಲ್ಲ. ಹೈಕಮಾಂಡ್ ಭೇಟಿಯಾಗಿ ಬಂದ ನಂತರವೂ, ‘‘ಇನ್ಮೇಲೆ ನಾನು ಸೈಲೆಂಟ್, ಮುಂದೆ ಒಬ್ಬೊಬ್ಬರೇ ವೈಲೆಂಟ್ ಆಗುತ್ತಾರೆ’’ ಎಂದು ಹೊಸ ವರಸೆ ತೆಗೆದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸೂಚನೆ ಬಳಿಕವೂ ಆರದ ಬಂಡಾಯ? ಶಿಸ್ತು ಸಮಿತಿ ಸಭೆ ಬಳಿಕವೂ ಯತ್ನಾಳ್ ಟೀಮ್ ಮೀಟಿಂಗ್
ಬಾಗಲಕೋಟೆಯಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ಸಿಎಂ ಆಗುವ ಆಸೆ ಬಿಚ್ಚಿಟ್ಟಿದ್ದಾರೆ. ಪ್ರಾಮಾಣಿಕರನ್ನು ಸಿಎಂ ಮಾಡಬೇಕು ಅಂದರೆ ಮೊದಲು ನನ್ನ ಹೆಸರೇ ಇರಲಿದೆ ಅಂದಿದ್ದಾರೆ. ಇದಿಷ್ಟೇ ಅಲ್ಲ, ಹೈಕಮಾಂಡ್ಗೆ ನಾನು ಏನ್ ಹೇಳಬೇಕೋ ಹೇಳಿದ್ದೀನಿ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Sat, 7 December 24